ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಗ್ರಾಮೀಣ ಆಸ್ಪತ್ರೆಯಲ್ಲಿ ಪ್ರನಾಳ ಶಿಶು ಜನನ

ಆಸರೆ ಫರ್ಟಿಲಿಟಿ ಆಸ್ಪತ್ರೆಯಲ್ಲಿ ಡಾ. ರಂಗನಾಥ ವೈದ್ಯ ದಂಪತಿ ಸಾಧನೆ
Last Updated 14 ಸೆಪ್ಟೆಂಬರ್ 2021, 5:07 IST
ಅಕ್ಷರ ಗಾತ್ರ

ಲಿಂಗಸುಗೂರು: ಮಹಾನಗರ ಪ್ರದೇಶಗಳಲ್ಲಿ ಐಸಿಎಸ್‍ಐ ತಂತ್ರಜ್ಞಾನ ಬಳಸಿ ಪ್ರನಾಳ ಶಿಶು ಜನನ ಆಗಿರುವುದನ್ನು ಕೇಳಿದ್ದೇವೆ. ಅಂತಹ ತಂತ್ರಜ್ಞಾನ ಬಳಸಿ ಇಲ್ಲಿಯ ಆಸ್ಪತ್ರೆಯಲ್ಲಿ ಪ್ರನಾಳ ಶಿಶು ಜನನ ಯಶಸ್ವಿ ಆಗಿದೆ. ಗ್ರಾಮೀಣ ಕರ್ನಾಟಕದ ಮೊದಲ ಯಶಸ್ವಿ ಪ್ರಯೋಗ ಇದಾಗಿದೆ ಎಂದು ಸ್ಥಳೀಯ ಆಸರೆ ಫರ್ಟಿಲಿಸಿ ಆಸ್ಪತ್ರೆ ಹೇಳಿಕೊಂಡಿದೆ.

ಆಸರೆ ಫರ್ಟಿಲಿಟಿ ಆಸ್ಪತ್ರೆಯ ಭ್ರೂಣ ತಜ್ಞೆ ಡಾ. ಪ್ರಿಯದರ್ಶಿನಿ ರಂಗನಾಥ ಮತ್ತು ಪ್ರನಾಳ ಶಿಶು ತಜ್ಞ ಡಾ. ರಂಗನಾಥ ತಮ್ಮ ಆಸ್ಪತ್ರೆಯಲ್ಲಿ ಅಧುನಿಕ ತಂತ್ರಜ್ಞಾನವಾಗಿರುವ ಇಂಟ್ರಾ ಸೈಟೊಪ್ಲಾಸ್ಮಿಕ್‍ ಸ್ಪರ್ಮ್‌ ಇಂಜೆಕ್ಷನ್‍ (ಐಸಿಎಸ್‍ಐ) ಬಳಸಿ ಆರೋಗ್ಯಕರ ಪ್ರನಾಳ ಶಿಶು ಜನನಕ್ಕೆ ಸಾಕ್ಷಿ ಆಗಿದ್ದಾರೆ.

’ಈ ತಂತ್ರಜ್ಞಾನದಲ್ಲಿ ಮಹಿಳೆಗೆ ಹಾರ್ಮೊನ್‌ ಇಂಜೆಕ್ಷನ್‌ ನೀಡಿ, ಅಲ್ಟ್ರಾಸೌಂಡ್‌ ತಂತ್ರಜ್ಞಾನದ ನೆರವಿನಿಂದ ಅಂಡಾಣು ಹೊರತೆಗೆದು ಎಂಬ್ರಾಲಜಿ ಲ್ಯಾಬೊರೇಟರಿಯಲ್ಲಿ ಅವುಗಳಿಗೆ ಪತಿಯಿಂದ ಸಂಗ್ರಹಿಸಿದ ಸಂಸ್ಕರಿಸಿದ ವೀರ್ಯಾಣು ಇಂಜೆಕ್ಷನ್‌ ಮಾಡಿ ಇನ್‌ಕ್ಯಬೇಟರ್‌ನಲ್ಲಿ ಐದಾರು ದಿನಗಳವರೆಗೆ ಇರಿಸಲಾಗುವುದು. ಈ ಅವಧಿಯಲ್ಲಿ ಅಂಡಾಣು ವಿಭಜನೆಗೊಳ್ಳುವುದು. ವಿಭಜಿತ ಅಂಡಾಣುಗಳ ಪೈಕಿ ಆರೋಗ್ಯಕರವಾದ ಭ್ರೂಣ ಆಯ್ಕೆ ಮಾಡಿಕೊಂಡು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗಿತ್ತು. ಹದಿನೈದು ದಿನಗಳ ನಂತರ ಗರ್ಭಧಾರಣೆ ಆಗಿರುವುದನ್ನು ರಕ್ತ ಪರೀಕ್ಷೆ ಮೂಲಕ ದೃಢಪಡಿಸಿಕೊಳ್ಳಲಾಗಿತ್ತು. ಸ್ವಾಭಾವಿಕವಾದ 9 ತಿಂಗಳ ಗರ್ಭಾವಸ್ಥೆ ನಂತರ ಹೆರಿಗೆ ನಡೆಸಲಾಯಿತು‘ ಎಂದು ಡಾ. ರಂಗನಾಥ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಹಟ್ಟಿ ಚಿನ್ನದ ಗಣಿಯ ಬೇಗಂ ಮತ್ತು ಸಾಹೇಬ್‌ (ಹೆಸರು ಬದಲಿಸಿದೆ) ದಂಪತಿ ದೀರ್ಘಕಾಲ ಮಕ್ಕಳಿಲ್ಲದೆ ವ್ಯಾಕುಲಗೊಂಡಿದ್ದರು. 2020 ಡಿಸೆಂಬರ್‍ ತಿಂಗಳಲ್ಲಿ ಈ ದಂಪತಿಗೆ (ಐಸಿಎಸ್‌ಐ) ಪ್ರಕ್ರಿಯೆ ಆರಂಭಿಸಲಾಗಿತ್ತು. ಜನವರಿ 2ರ 2021 ರಂದು ಕೃತಕ ಭ್ರೂಣವನ್ನು ಮಹಿಳೆಗೆ ವರ್ಗಾವಣೆ ಮಾಡಲಾಗಿತ್ತು.

ಒಂಬತ್ತು ತಿಂಗಳು ತಾಯಿ ಗರ್ಭದಲ್ಲಿ ಬೆಳೆದ ಶಿಶುವನ್ನು ಸೋಮವಾರ (ಸೆ. 13) ಬೆಳಿಗ್ಗೆ ಭ್ರೂಣ ತಜ್ಞೆ ಡಾ. ಪ್ರಿಯದರ್ಶಿನಿ, ಪ್ರನಾಳ ಶಿಶು ತಜ್ಞ ಡಾ. ರಂಗನಾಥ, ಮಕ್ಕಳ ತಜ್ಞರಾದ ಡಾ. ಎಸ್‍.ಎಸ್‍ ಕಿರ್ದಿ, ಡಾ. ಆನಂದ ಚೌದ್ರಿ, ಅರವಳಿಕೆ ತಜ್ಞ ರವಿಂದ್ರ ಮಾವಿನಕಟ್ಟೆ ನೇತೃತ್ವ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ.

ಹಲವು ವರ್ಷಗಳಿಂದ ದೊಡ್ಡ ನಗರ ಪ್ರದೇಶಗಳಿಗೆ ತೆರಳುತ್ತಿದ್ದ, ಲಕ್ಷಾಂತರ ಹಣ ಖರ್ಚು ಮಾಡಲು, ಅಲೆದಾಡಲು ಬೇಸತ್ತಿದ್ದ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಇಲ್ಲದ ದಂಪತಿಗೆ ಆಸರೆ ಆಸ್ಪತ್ರೆಯಲ್ಲಿ ಐಸಿಎಸ್‍ಐ ಸೌಲಭ್ಯ ಇರುವುದು ಖುಷಿ ತಂದಿದೆ. ಐಸಿಎಸ್‌ಐ ತಂತ್ರಜ್ಞಾನದಿಂದ ಮಗು ಪಡೆದುಕೊಂಡಿರುವ ದಂಪತಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

‘ಸಂತಾನಭಾಗ್ಯ ಇಲ್ಲದ ದಂಪತಿಗಳಿಗೆ ಕಡಿಮೆ ಹಣದಲ್ಲಿ ಮಕ್ಕಳ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಐಸಿಎಸ್‍ಐ ತಂತ್ರಜ್ಞಾನ ಬಳಕೆಗೆ ಮುಂದಾದೆವು. 2019ರಿಂದ ಈ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಆರಂಭಿಸಿದ್ದು 19 ಪ್ರಕರಣಗಳ ವೈಫಲ್ಯದ ನಂತರ ಈ ಪ್ರಕರಣದಲ್ಲಿ ಯಶಸ್ಸು ಕಂಡಿದ್ದೇವೆ’ ಎಂದು ಡಾ. ರಂಗನಾಥ ಹಟ್ಟಿ ಅವರು ಸಂತಸ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT