ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ ಕ್ಷೇತ್ರ: ಕಚೇರಿಗಳಿಗೆ ಪ್ರಭಾರ ಅಧಿಕಾರಿಗಳೇ ದಿಕ್ಕು

ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆ: ದೇವದುರ್ಗದ ನೂತನ ಶಾಸಕಿ ಎದುರು ನೂರಾರು ಸವಾಲು
Published 21 ಮೇ 2023, 11:31 IST
Last Updated 21 ಮೇ 2023, 11:31 IST
ಅಕ್ಷರ ಗಾತ್ರ

ದೇವದುರ್ಗ: ಜಿಲ್ಲೆಯಲ್ಲಿ 34 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ದೇವದುರ್ಗದ ನೂತನ ಶಾಸಕಿ ಕರೆಮ್ಮ ಜಿ. ನಾಯಕ ಅವರು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎನ್ನುತ್ತಿದ್ದಾರೆ. ಆದರೆ ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇಲ್ಲದ್ದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ.

ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಅವರ ಆಡಳಿತ ಅವಧಿಯಲ್ಲಿ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕರಿಗೆ ತಾಲ್ಲೂಕು ಮಟ್ಟದ ಹುದ್ದೆಗಳಿಗೆ ಪ್ರಭಾರ ವಹಿಸಿದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಿನ್ನಡೆಯಾಗಿದೆ.

ಪ್ರಸ್ತುತ ತಾಲ್ಲೂಕಿನ ಹಲವು ಇಲಾಖೆಯ ತಾಲ್ಲೂಕು ಅಧಿಕಾರಿಗಳು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. 15ಕ್ಕೂ ಹೆಚ್ಚು ಇಲಾಖೆಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಇಲ್ಲದೆ ಪ್ರಭಾರಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಅಧಿಕಾರಿಗಳನ್ನು ಕರೆತರುವುದೇ ನೂತನ ಶಾಸಕರಿಗೆ ದೊಡ್ಡ ಸವಾಲಾಗಲಿದೆ.

ಗ್ರಾಮ ವಾಸ್ತವ್ಯ ಮಾಡಿ ಜನರ ಮೂಲ ಸೌಕರ್ಯಗಳನ್ನು ಪಟ್ಟಿ ಮಾಡಿ ಸ್ಥಳದಲ್ಲಿಯೇ ಪರಿಹರಿಸುವ ಮೂಲಕ ಉತ್ತಮ ಆಡಳಿತ, ಬಯಲು ಶೌಚಾಲಯಗಳ ಮುಕ್ತ ಗ್ರಾಮ ಮಾಡುತ್ತೇನೆ ಎನ್ನುತ್ತಾರೆ ನೂತನ ಶಾಸಕಿ ಕರೆಮ್ಮ ಜಿ.ನಾಯಕ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದರಿಂದ ಸ್ಥಳೀಯ ಅಧಿಕಾರಿಗಳ ಬದಲಾವಣೆಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯವಾಗಿದೆ.

ತಾಲ್ಲೂಕಿನ 150ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಇದುವರೆಗೂ ಯಾವುದೇ ನಲ್ಲಿಯಲ್ಲಿ ನೀರು ಹರಿದಿಲ್ಲ. ಸುಮಾರು 110ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, 65 ಘಟಕ ಮಾತ್ರ ಉಪಯೋಗಕ್ಕೆ ಬರುತ್ತಿವೆ. 27 ಸ್ಥಗಿತಗೊಂಡಿದ್ದರೆ, ಹಲವು ಕಡೆ ಘಟಕಗಳು ಸ್ಥಾಪನೆಯಾದ ನಂತರ ಬಳಸದೆ ಹಾಗೆ ತುಕ್ಕು ಹಿಡಿದಿವೆ.

ದೇವದುರ್ಗ ಪಟ್ಟಣಕ್ಕೆ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆ ಜಾರಿಯಾಗಿ ವರ್ಷ ಕಳೆದರೂ ಬೆಳಗಿನ ಜಾವ ಒಂದು ಗಂಟೆ ಕಾಲ ಮಾತ್ರ ನೀರು ಹರಿಸಲಾಗುತ್ತಿದೆ. ಪಟ್ಟಣದ ಜನ 24 ಗಂಟೆ ಕುಡಿಯುವ ನೀರಿನ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ.

ಗಬ್ಬೂರು, ಅರಕೇರಾ ಪಟ್ಟಣದಲ್ಲಿ ಪದವಿ ಕಾಲೇಜುಗಳನ್ನು ಆರಂಭಿಸಬೇಕಿದೆ. ಅರಕೇರಾ ಪಟ್ಟಣದಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಒತ್ತು, ತಾಲ್ಲೂಕಿನಲ್ಲಿ ಪ್ರತಿ ವರ್ಷ ಉನ್ನತ ವ್ಯಾಸಂಗ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿಜಿ ಹಾಸ್ಟೆಲ್‌ಗಳ ಸ್ಥಾಪನೆ ಅತ್ಯವಶ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT