ಮೋದಿಯನ್ನು ಮನೆಗೆ ಕಳುಹಿಸುವ ಸಮಯ ಸನ್ನಿಹಿತ: ಚಂದ್ರಬಾಬು ನಾಯ್ಡು

ಭಾನುವಾರ, ಮೇ 26, 2019
30 °C
ಮೈತ್ರಿ ಪಕ್ಷಗಳ ಪ್ರಚಾರ ಸಭೆ

ಮೋದಿಯನ್ನು ಮನೆಗೆ ಕಳುಹಿಸುವ ಸಮಯ ಸನ್ನಿಹಿತ: ಚಂದ್ರಬಾಬು ನಾಯ್ಡು

Published:
Updated:
Prajavani

ರಾಯಚೂರು: ದೇಶದಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬರುವ ಅಗತ್ಯವಿದ್ದು, ನರೇಂದ್ರ ಮೋದಿ ಅಧಿಕಾರ ಕಳೆದುಕೊಂಡರೆ ದೇಶ ಮುಕ್ತಿ ಪಡೆಯಲಿದೆ. ಮೋದಿಯನ್ನು ಮನೆಗೆ ಕಳುಹಿಸುವ ಸಮಯ ಸನ್ನಿಹಿತವಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಐದು ವರ್ಷಗಳ ಹಿಂದೆ ನೀಡಿದ್ದ ಯಾವುದೇ ಭರವಸೆಯನ್ನು ನರೇಂದ್ರ ಮೋದಿ ಈಡೇರಿಸಿಲ್ಲ. ಅವರು ಜನರನ್ನು ಮೋಸ ಮಾಡಿ ದೇಶಕ್ಕೆ ನಷ್ಟವುಂಟು ಮಾಡಿದ್ದಾರೆ. ನೋಟು ರದ್ದತಿ ಮೂಲಕ ಶೇ 2ರಷ್ಟು ಅಭಿವೃದ್ಧಿ ನಿಂತುಹೋಗುವಂತೆ ಮಾಡಿದರು. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಎನ್‌ಡಿಎಗೆ ವಿರೋಧವಾದ ಗಾಳಿಯಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭ್ಯರ್ಥಿಗಳು ಹೀನಾಯವಾಗಿ ಸೋಲಲಿದ್ದಾರೆ ಎಂದರು.

ಈ ಸರ್ಕಾರದಿಂದ ಜನರಿಗೆ ಏನೂ ಲಾಭವಿಲ್ಲ. 40 ವರ್ಷಗಳಲ್ಲಿ ಸಾಯದಷ್ಟು ಸೈನಿಕರು ಈಗ ಸಾವನ್ನಪ್ಪಿದ್ದಾರೆ. ಎಂದೂ ಇಲ್ಲದಷ್ಟು ನಿರುದ್ಯೋಗ ಹಾಗೂ ರೈತರ ಸಮಸ್ಯೆಗಳು ಈಗ ಎದುರಾಗಿವೆ. ಮಹಿಳೆಯರಿಗೆ ಭದ್ರತೆಯೇ ಇಲ್ಲವಾಗಿದೆ. ಗೋಹತ್ಯೆ ವಿಷಯದಲ್ಲೂ ದೌರ್ಜನ್ಯಗಳು ನಡೆಯುತ್ತಿವೆ. ಯಾರಾರು ಏನೇನು ತಿನ್ನಬೇಕು ಎಂದು ನಿರ್ದೇಶನ ಮಾಡುವ ಅಧಿಕಾರ ಬಿಜೆಪಿಗೆ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು.

ರಫೆಲ್ ದೊಡ್ಡ ಹಗರಣವಾಗಿದ್ದು, ರಕ್ಷಣಾ ಇಲಾಖೆಯ ವಿಚಾರದಲ್ಲೂ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ. ಆರ್ಥಿಕ ವ್ಯವಸ್ಥೆಯೇ ಹದಗೆಟ್ಟಿದೆ. ಏಷ್ಯಾದಲ್ಲಿಯೇ ಹೆಚ್ಚಿನ ಪ್ರಮಾಣದ ಕರೆನ್ಸಿ ಸಮಸ್ಯೆ ಭಾರದಲ್ಲಿದೆ. ಉದ್ಯೋಗ ಕಳೆದುಕೊಂಡವು ಮೋದಿಯನ್ನು ಪ್ರಶ್ನೆ ಮಾಡಬೇಕು ಎಂದರು.

ದಕ್ಷಿಣ ಭಾರದಲ್ಲಿ ಬಿಜೆಪಿಯೇತರ ಪಕ್ಷಗಳೇ ಹೆಚ್ಚಿನ ಕಾಲ ಅಧಿಕಾರ ನಡೆಸಿವೆ. ಆದ್ದರಿಂದಲೇ ಈ ಭಾಗದಲ್ಲಿ ಅಭಿವೃದ್ಧಿಯಾಗಿದೆ. ಪ್ರಪಂಚದ ತಂತ್ರಜ್ಞಾನದ ಬಗ್ಗೆ ಮಾತನಾಡಬೇಕಾದರೆ ಬೆಂಗಳೂರು ಹಾಗೂ ಆಂಧ್ರಪ್ರದೇಶದ ಬಗ್ಗೆಯೂ ಮಾತನಾಡಲೇಬೇಕು ಎಂದರು.

ದೇಶದ ಕಪ್ಪು ಹಣ ಸ್ವಿಸ್ ಬ್ಯಾಂಕ್‌ ಸೇರಿದ್ದು, ಶೇ 50 ರಷ್ಟು ಆ ಬ್ಯಾಂಕ್‌ ಖಾತೆಗಳು ಹೆಚ್ಚಾಗಿವೆ. ಸಿಬಿಐ ಸಂಸ್ಥೆಯನ್ನು ಭ್ರಷ್ಟಾಚಾರಕ್ಕೆ ದೂಡಿದ್ದಾರೆ. ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಲಾಗಿದೆ. ಆರ್‌ಬಿಐ ನಿರ್ನಾಮ ಮಾಡಲು ಹಾಗೂ ಚುನಾವಣೆ ಇಲ್ಲದಂತೆ ಮಾಡುವ ಹುನ್ನಾರ ಮಾಡಲಾಗಿದೆ. ಇವಿಎಂ ಹಾಗೂ ವಿವಿ ಪ್ಯಾಟ್‌ಗಳನ್ನು ನಿಯಂತ್ರಿಸುವ ಪ್ರಯತ್ನವೂ ನಡೆದಿದೆ. ಆದ್ದರಿಂದ ಇವಿಎಂ ಮತ ಹಾಗೂ ವಿವಿ ಪ್ಯಾಟ್‌ನಲ್ಲಿನ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು ಎಂದು ತಿಳಿಸಿದರು.

ಆಂಧ್ರಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವುದಾಗಿ ಹೇಳಿ ಅನ್ಯಾಯ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಸೋನಿಯಾಗಾಂಧಿ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಸ್ಥಾನಮಾನ ನೀಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದ ಅವರು ಈಚೆಗೆ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆದಿದ್ದು, ತೆಲುಗುದೇಶಂ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !