ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಮ್ಮಾಪುರ ಏತನೀರಾವರಿ ಯೋಜನೆ:ನನಸಾದ ‘ಅನ್ನದಾತ’ರ ನಾಲ್ಕು ದಶಕಗಳ ಕನಸು

ತಿಮ್ಮಾಪುರ ಏತನೀರಾವರಿ ಯೋಜನೆ: ಟೇಲೆಂಡ್ ಭಾಗದ 34 ಸಾವಿರ ಎಕರೆಗೆ ನೀರಾವರಿ ಸೌಕರ್ಯ
Published : 11 ಆಗಸ್ಟ್ 2024, 5:40 IST
Last Updated : 11 ಆಗಸ್ಟ್ 2024, 5:40 IST
ಫಾಲೋ ಮಾಡಿ
Comments

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಗೊಳಪಡುವ 54ನೇ ವಿತರಣಾ ಕಾಲುವೆಯ ಟೇಲೆಂಡ್ ಭಾಗದಲ್ಲಿ ನೀರಿನ ಕೊರತೆಯ ಕಾರಣದಿಂದ ತೊಂದರೆ ಅನುಭವಿಸುತ್ತಿದ್ದ ರೈತರ ಸಹಸ್ರಾರು ಎಕರೆ ಜಮೀನಿಗೆ ನೀರು ಪೂರೈಸುವ ತಿಮ್ಮಾಪುರ ಏತನೀರಾವರಿ ಯೋಜನೆ ಅನುಷ್ಠಾನಗೊಳ್ಳುವ ಮೂಲಕ 24 ಗ್ರಾಮಗಳ ಅನ್ನದಾತರ ನಾಲ್ಕು ದಶಕಗಳ ಕನಸು ನನಸಾಗಿದೆ.

ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಪಕ್ಕದಲ್ಲಿ ತುಂಗಭದ್ರಾ ನದಿ ದಂಡೆಯಲ್ಲಿ ತಿಮ್ಮಾಪುರ ಏತನೀರಾವರಿ ಯೋಜನೆಯ ಪಂಪ್‍ಹೌಸ್ ನಿರ್ಮಿಸಲಾಗಿದೆ. 1609 ಅಶ್ವಶಕ್ತಿಯ 4 ಮೋಟರ್‌ಗಳನ್ನು ಅಳವಡಿಸಿ, ಅಲ್ಲಿಂದ 17.16 ಕಿ.ಮೀ ದೂರದವರೆಗೆ 1.28 ಮೀಟರ್ ವ್ಯಾಸದ ಪೈಪ್‍ಲೈನ್ ಮೂಲಕ ಜವಳಗೇರಾ ಸಮೀಪದ ಆರ್.ಎನ್.ನಗರ ಕ್ಯಾಂಪಿನ 11ಆರ್ ಕಾಲುವೆಗೆ ನೀರು ತಂದು ಕೆಳಭಾಗಕ್ಕೆ ಹರಿಸುವ ಯೋಜನೆ ಇದಾಗಿದೆ.

ಯೋಜನೆ ಪೂರ್ಣಗೊಳ್ಳಲು ₹97 ಕೋಟಿ ಖರ್ಚಾಗಿದ್ದು, ಗುತ್ತಿಗೆ ಪಡೆದ ಓಸಿಯನ್ ಕನ್‌ಸ್ಟ್ರಕ್ಷನ್ ಕಂಪನಿಯು 5 ವರ್ಷಗಳವರೆಗೆ ಈ ಯೋಜನೆಯ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. 24 ಗ್ರಾಮಗಳ ಅಚ್ಚುಕಟ್ಟು ಪ್ರದೇಶದ 34,948 ಎಕರೆ ಜಮೀನುಗಳಿಗೆ ನೀರುಣಿಸುವ ಗುರಿ ಹೊಂದಿರುವ ಈ ಯೋಜನೆ 90 ಕ್ಯೂಸೆಕ್ ನೀರನ್ನು ಹರಿಸುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಯೋಜನೆಯಿಂದ ಹಲವು ದಶಕಗಳಿಂದ ಎಡದಂಡೆ ನಾಲೆಯ ನೀರಿನಿಂದ ವಂಚಿತವಾದ ರಾಗಲಪರ್ವಿ, ಯದ್ದಲದೊಡ್ಡಿ, ತಿಮ್ಮಾಪುರ, ಆಯನೂರು, ಹೆಡಗಿನಾಳ, ತುರಕಟ್ಟಿ, ಸುಲ್ತಾನಪುರ, ಜವಳಗೇರಾ, ಚಿತ್ರಾಲಿ, ಚಿಂತಮಾನದೊಡ್ಡಿ, ಧುಮತಿ, ಪುಲದಿನ್ನಿ, ಪುಲಮೇಶ್ವರದಿನ್ನಿ ಸೇರಿದಂತೆ ಹಲವು ಗ್ರಾಮಗಳಿಗೆ ನೀರಾವರಿ ಸೌಕರ್ಯ ಲಭಿಸಲಿದೆ. ಇದರಿಂದ ಕೆಳಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

‘54ನೇ ವಿತರಣಾ ಕಾಲುವೆ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಅತಿದೊಡ್ಡದಾಗಿದ್ದು, ಈ ಕಾಲುವೆಯ ಕೆಳಭಾಗದ ರೈತರು ಮೂರ್ನಾಲ್ಕು ದಶಕಗಳಿಂದ ಒಣಬೇಸಾಯ ಮಾಡಬೇಕಾಗಿತ್ತು. ಪ್ರತಿಯೊಬ್ಬರ ಪಹಣಿಗಳಲ್ಲಿ ಟಿಬಿಪಿ ಎಂದು ನಮೂದಿಸಿದ ಕಾರಣ ಕಂದಾಯ ಇಲಾಖೆಗೆ ನೀರಾವರಿ ಕರ ಪಾವತಿಸುತ್ತಿದ್ದರು. ತಮ್ಮ ಸಂಕಟ ನೋಡಲಾರದೆ ಹಂಪನಗೌಡ ಬಾದರ್ಲಿ ಅವರು 1989 ರಿಂದ ಈ ಭಾಗದ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕು ಎಂದು ಭಗೀರಥ ಪ್ರಯತ್ನ ಮಾಡಿದ್ದರ ಪ್ರತಿಫಲವಾಗಿ ಈಗ 33 ಸಾವಿರ ಎಕರೆ ಜಮೀನಿಗೆ ನೀರು ಲಭಿಸಿದೆ’ ಎನ್ನುತ್ತಾರೆ ರೈತರಾದ ಸತ್ಯನಗೌಡ ವಳಬಳ್ಳಾರಿ, ಶೇಖರಪ್ಪ ಧುಮತಿ, ರಾಜಶೇಖರ ಪುಲದಿನ್ನಿ, ನಾಗಪ್ಪಗೌಡ ವಲ್ಕಂದಿನ್ನಿ, ಬಸನಗೌಡ ಹುಲಗುಂಚಿ, ಹುಸೇನಪ್ಪ, ಯೇಸಪ್ಪ ಯದ್ದಲದೊಡ್ಡಿ, ಪಂಪಾಪತಿ.

ಹಂಪನಗೌಡ ಬಾದರ್ಲಿ
ಹಂಪನಗೌಡ ಬಾದರ್ಲಿ
ಬಿ.ಎಚ್.ನಾಯಕ
ಬಿ.ಎಚ್.ನಾಯಕ
ಅರುಣ್‍ಕುಮಾರ ಯಾಪಲಪರ್ವಿ
ಅರುಣ್‍ಕುಮಾರ ಯಾಪಲಪರ್ವಿ
ಸತ್ಯನಾರಾಯಣ
ಸತ್ಯನಾರಾಯಣ
ಸಿಂಧನೂರು ತಾಲ್ಲೂಕಿನ 54ನೇ ವಿತರಣಾ ಕಾಲುವೆಯ ಕೆಳಭಾಗದ ರೈತರ ಜಮೀನು ನೀರಾವರಿ ಪ್ರದೇಶಕ್ಕೊಳಪಟ್ಟಿದ್ದರೂ ಹಲವು ವರ್ಷಗಳಿಂದ ದೀಪದ ಕೆಳಗಿನ ಕತ್ತಲಿನಂತೆ ನೀರಿನಿಂದ ವಂಚಿತರಾಗಿದ್ದರು. ಆದ್ದರಿಂದ ಈಗಾಗಲೇ ವಳಬಳ್ಳಾರಿ ಏತನೀರಾವರಿ ಯೋಜನೆ ಪೂರ್ಣಗೊಳಿಸಲಾಗಿದ್ದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಕಾರದಿಂದ ಇತ್ತೀಚಿಗೆ ತಿಮ್ಮಾಪುರ ಏತನೀರಾವರಿ ಯೋಜನೆಗೆ ಕಾಯಕಲ್ಪ ದೊರೆತಿದೆ
- ಹಂಪನಗೌಡ ಬಾದರ್ಲಿ ಶಾಸಕ
ಸಿಂಧನೂರು ಹಿಂದೆ ನಮ್ಮ ಜಮೀನುಗಳಿಗೆ ಅಲ್ಪಸ್ವಲ್ಪ ನೀರು ಸಿಗುತ್ತಿತ್ತು. ಇತ್ತೀಚಿನ 20 ವರ್ಷಗಳಿಂದ ನೀರು ಕಣ್ಣೀರಾಗಿ ಮಾರ್ಪಟ್ಟಿತ್ತು. ಜಮೀನುಗಳಿದ್ದರೂ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗಬೇಕಾಗಿತ್ತು. ತಿಮ್ಮಾಪುರ ಏತನೀರಾವರಿಯಿಂದ ನಮ್ಮ ಬಾಳಿಗೆ ಬೆಳಕು ಸಿಕ್ಕಿದೆ
-ಬಿ.ಎಚ್.ನಾಯಕ ರೈತ
ಕಳೆದ 20 ವರ್ಷಗಳಿಂದ ತಿಮ್ಮಾಪುರ ಏತ ನೀರಾವರಿ ಯೋಜನೆ ಜಾರಿಗೊಳಿಸಿ ನೀರಾವರಿ ಸೌಕರ್ಯ ಒದಗಿಸಿ ಕೊಡುವಂತೆ ಪ್ರತಿವರ್ಷ ಹಂಪನಗೌಡರನ್ನು ಬೆಂಬಿಡದೆ ರೈತರು ಕಾಡಿದ್ದರಿಂದ ಈ ಯೋಜನೆ ತೀವ್ರವಾಗಿ ಮುಗಿದಿದೆ
-ಅರುಣಕುಮಾರ ಯಾಪಲಪರ್ವಿ ರೈತ
54ನೇ ವಿತರಣಾ ಕಾಲುವೆ 42 ಕಿ.ಮೀ ಉದ್ದವಿದ್ದು ಈ ಕಾಲುವೆ ವ್ಯಾಪ್ತಿಯಲ್ಲಿ ಬರುವ ಕೆಳಭಾಗದ ರೈತರಿಗೆ ನೀರು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ತಿಮ್ಮಾಪುರ ಏತನೀರಾವರಿ ಯೋಜನೆಯನ್ನು ಬೇಸಿಗೆ ಕಾಲದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಈಗ ನದಿಗೆ ನೀರು ಬಂದಿರುವುದರಿಂದ ಯೋಜನೆ ಕಾರ್ಯಾನುಷ್ಠಾನಗೊಂಡಿದೆ
-ಸತ್ಯನಾರಾಯಣ ಕಾರ್ಯಪಾಲಕ ಎಂಜಿನಿಯರ್ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT