ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಂಡಾ, ಹಟ್ಟಿ, ದೊಡ್ಡಿಗಳಿಗೆ ಹಕ್ಕುಪತ್ರ ಶೀಘ್ರ

ಗ್ರಾಮವಾಸ್ಯವ್ಯದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿಕೆ
Last Updated 15 ಅಕ್ಟೋಬರ್ 2022, 13:27 IST
ಅಕ್ಷರ ಗಾತ್ರ

ಅರಕೇರಾ (ರಾಯಚೂರು): ಇದೇ ನವೆಂಬರ್‌ನಲ್ಲಿ ರಾಜ್ಯದ ತಾಂಡಾಗಳು, ಕುರುಬರ ಹಟ್ಟಿಗಳು, ದೊಡ್ಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಗ್ರಾಮವಾಸ್ತವ್ಯ ನಿಮಿತ್ತ ಶನಿವಾರ ಅರಕೇರಾದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಅಂವವಿಕಲರಿಗೆ ಸಲಕರಣೆ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಕಲಬುರ್ಗಿ ಭಾಗದಲ್ಲಿಯೇ ಏರ್ಪಡಿಸಲಾಗುವುದು. ಏಕಕಾಲಕ್ಕೆ ಎಲ್ಲ ಅರ್ಹರಿಗೂ ಹಕ್ಕುಪತ್ರ ನೀಡಲಾಗುವುದು. ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಯೇ ಹಕ್ಕುಪತ್ರ ಕೊಡಲಾಗುವುದು. ದೇವದುರ್ಗ ತಾಲ್ಲೂಕಿನಲ್ಲಿ 175 ತಾಂಡಾಗಳನ್ನು ಕಂದಾಯ ಗ್ರಾಮವೆಂದು ಘೋಷಿಸಲಾಗುವುದು. ಗರಿಷ್ಠ ನಾಲ್ಕು ಎಕರೆವರೆಗೂ ಸರ್ಕಾರಿ ಜಮೀನಿನಲ್ಲಿ ಉಳಿಮೆ ಮಾಡುವ ರೈತರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅನೇಕ ಸಲ ಪಿಂಚಣಿ ಸರಿಯಾಗಿ ತಲುಪುತ್ತಿಲ್ಲ ಎಂದು ಮಾತನಾಡುತ್ತಿದ್ದರು. ಇದೀಗ ಸದನದಲ್ಲ ಪಿಂಚಣಿ, ಮಾಸಾಶನ ವಿಷಯಗಳು ಚರ್ಚೆಗೇ ಬಂದಿಲ್ಲ. 'ಹಲೋ ಕಂದಾಯ ಸಚಿವರೆ' ಎಂದು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಸಾಕು, ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ದಾಖಲಾತಿ ಪಡೆದು, ಮಾಸಾಶನ ದೊರಕಿಸುವಂತೆ ಮಾಡಲಾಗಿದೆ. 72 ಗಂಟೆಗಳಲ್ಲಿ ಮಾಸಾಶನ ದೊರೆಯುವಂತೆ ಮಾಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಪ್ರತಿವರ್ಷ ಒಟ್ಟು ₹347 ಕೋಟಿ ಮಾಸಾಶನ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕಂದಾಯ ಸಚಿವ ಆರ್.ಅಶೋಕ್ ಅವರು ನೇರವಾಗಿ ಜನರಿಗೆ ಸರ್ಕಾರಿ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಕೇಂದ್ರದ ಯೋಜನೆಗಳಲ್ಲಿ ಒಂದಿಲ್ಲ ಒಂದು ಪ್ರತಿ ಜನರಿಗೂ ತಲುಪಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಎನ್ ಆರ್ ಬಿಸಿ ವ್ಯಾಪ್ತಿಯಲ್ಲಿ ಕೆಟ್ಟಿರುವ ಕಾಲುವೆಗಳನ್ನು ದುರಸ್ತಿ ಮಾಡಲು ಕೇಂದ್ರ ಸರ್ಕಾರದಿಂದ ₹3,800 ಕೋಟಿ ಅನುದಾನ ಬಂದಿದೆ. ಈಗಾಗಲೇ ಉಪಕಾಲುವೆ, ವಿತರಣಾ ಕಾಲುವೆಗಳ ನಿರ್ಮಾಣ ಆರಂಭಿಸಲಾಗಿವೆ.‌ ಆದರೆ ಕಾಲುವೆ ಕಾಮಗಾರಿ ಕಳಪೆ ಆಗುವುದಕ್ಕೆ ಬಿಡಬಾರದು. ರೈತರು ಕೂಡಲೇ ಈ‌ ಬಗ್ಗೆ ದೂರು ನಿಡಬೇಕು ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, 'ನಾನು ಎರಡು ಅವಧಿಗೆ ಶಾಸಕನಾಗಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದಿದೆ' ಎಂದು ಡಾ.ಶಿವರಾಜ ಪಾಟೀಲ ಹೇಳಿದರು.

ನೀರಾವರಿ ಯೋಜನೆಗಳಿಗೆ ₹5 ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ. ರಾಯಚೂರಿನಲ್ಲಿ ₹8 ಸಾವಿರ ಕೋಟಿ‌ ವೆಚ್ಚದ ಹೆದ್ದಾರಿಗಳು‌ ನಿರ್ಮಾಣ ಆಗುತ್ತಿದೆ. ರಾಯಚೂರು ಜಂಕ್ಷನ್‌ ಇದ್ದಂತೆ, ಆರು ಪಥದ ರಸ್ತೆ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದಾರೆ ಎಂದರು.

ಶಾಸಕ ರಾಜುಗೌಡ ಮಾತನಾಡಿ, ಗ್ರಾಮವಾಸ್ತವ್ಯ ‌ಕಾರ್ಯಕ್ರಮದಿಂದ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಇದರಿಂದ ಭ್ರಷ್ಟಾಚಾರ ನಿಯಂತ್ರಣ ಆಗುತ್ತಿದೆ. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ್‌, ಕಲಬುರ್ಗಿ ಪ್ರಾದೇಶಿಕ ಆಯುಕ್ತ ಕೃಷ್ಣಾ ಬಾಜಪೈ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

‘ಏಮ್ಸ್‌ ಕೊಡದಿದ್ದರೆಚುನಾವಣೆಗೆ ಸ್ಪರ್ಧಿಸಲ್ಲ’

’ಏಮ್ಸ್ ಕೊಡದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಯಚೂರಿಗೆ ಏಮ್ಸ್ ಕೊಡಲೇಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಮನವೊಲಿಸಬೇಕು‘ ಎಂದು ಶಾಸಕ ಕೆ.ಶಿವನಗೌಡ ನಾಯಕ ಕಂದಾಯ ಸಚಿವರಿಗೆ ಮನವಿ ಮಾಡಿದರು.

ಏಮ್ಸ್ ಮಂಜೂರಿ ಮಾಡಿದರೆ ರಾಯಚೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆರ್.ಅಶೋಕ್ ಅವರ ಪಂಚಲೋಹದ ಪ್ರತಿಮೆಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಗ್ರಾಮವಾಸ್ತವ್ಯದ ಮೂಲಕ ಸರ್ಕಾರದ ಯೋಜನೆಗಳು ಜನರಿಗೆ ತಲುಪುವ ಕೆಲಸ ಆಗುತ್ತಿದೆ. ಅರಕೇರಾ ತಾಲ್ಲೂಕು ಆಗಿರುವುದಕ್ಕೆ ಯಾರೂ ಬೇಜಾರು ಮಾಡಿಕೊಳ್ಳಬೇಕು. ಸುಮಾರು 30 ಕಚೇರಿಗಳು ತಾಲ್ಲೂಕು ಕೇಂದ್ರಕ್ಕೆ‌ ಬರುತ್ತವೆ. ಒಳ್ಳೆಯ ಉದ್ದೇಶಕ್ಕೆ ಈ ಹೊಸ ತಾಲ್ಲೂಕು ಮಾಡಿದ್ದೇವೆ. ಗಬ್ಬೂರು ತಾಲ್ಲೂಕು ಆಗಬೇಕು ಎನ್ನುವ ಬೇಡಿಕೆ ಇದೆ. ಅಗತ್ಯಬಿದ್ದರೆ, ಅದನ್ನು ತಾಲ್ಲೂಕು ಮಾಡಲಾಗುವುದು.

ಕಂದಾಯ ಸಚಿವರು ಯರಗೇರಾ ಮತ್ತು ಗಬ್ಬೂರು ಗ್ರಾಮಗಳನ್ನು ಪರಿಗಣಿಸಿ ತಾಲ್ಲೂಕು ಮಾಡಬೇಕು.

ಇದೇ ಕಾರ್ಯಕ್ರಮದಲ್ಲಿ 7.5 ಕೋಟಿ ಅನುದಾನ ದೇವಸ್ಥಾನಗಳ ಅಭಿವೃದ್ಧಿಗೆ ಕೊಡಲಾಗುವುದು. ಅದರಲ್ಲಿ 2.5 ಕೋಟಿ ಮೊತ್ತಕ್ಕೆ ಚೆಕ್ ಹಂಚಲಾಗಿದ್ದು, ಇನ್ನುಳಿದ ಮೊತ್ತವನ್ನು‌ ನಗದು ರೂಪದಲ್ಲಿ‌ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT