ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿಗೆ ಬೇಕಿದೆ ಸಂಚಾರ ಪೊಲೀಸ್ ಠಾಣೆ

Last Updated 8 ಮಾರ್ಚ್ 2021, 5:10 IST
ಅಕ್ಷರ ಗಾತ್ರ

ಮಾನ್ವಿ:ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನಗಳ ಸಂಚಾರ ದಟ್ಟಣೆ, ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಮುಖಾಂತರ ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯ ಅಂತರರಾಜ್ಯ ಸರಕು ವಾಹನಗಳು, ಮರಳು ಸಾಗಣೆಯ ಟಿಪ್ಪರ್‌ಗಳ ಸಂಚಾರವೂ ಅಧಿಕವಾಗಿದೆ. ಗ್ರಾಮೀಣ ಭಾಗದಿಂದ ಪ್ರತಿ ದಿನ ನೂರಾರು ಸಂಖ್ಯೆಯ ಆಟೋ ಗಾಡಿ, ಟಂಟಂ ವಾಹನಗಳು, ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ತಾಲ್ಲೂಕು ಕೇಂದ್ರವಾದ ಮಾನ್ವಿ ಪಟ್ಟಣಕ್ಕೆ ಬರುತ್ತವೆ. ಪ್ರಮುಖ ವೃತ್ತಗಳಲ್ಲಿ ದ್ವಿಚಕ್ರವಾಹನಗಳ ಸವಾರರು ವೇಗವನ್ನು ನಿಯಂತ್ರಿಸದೆ ಅತೀ ವೇಗವಾಗಿ ಓಡಿಸುತ್ತಿರುವುದು ಕಂಡು ಬರುತ್ತದೆ. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಸ್ಪಷ್ಟ.

ಪಟ್ಟಣದ ಬಸವ ವೃತ್ತದಿಂದ ಬಸ್ ನಿಲ್ದಾಣದ ಮುಖಾಂತರ ತಹಶೀಲ್ದಾರ್ ಕಚೇರಿವರೆಗೆ ಅತೀ ಹೆಚ್ಚು ಜನಸಂದಣಿ, ವಾಹನಗಳು ಸಂಚರಿಸುವ ರಸ್ತೆಯಾಗಿದೆ. ಬಸವ ವೃತ್ತದಲ್ಲಿ ಸದಾ ವೇಗವಾಗಿ ಸಂಚರಿಸುವ ವಾಹನಗಳ ಮಧ್ಯೆ ರಸ್ತೆ ದಾಟಲು ಭಯಪಡಬೇಕಾದ ಪರಿಸ್ಥಿತಿ ಇದೆ. ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳ ಮಧ್ಯೆ ರಸ್ತೆ ವಿಭಜಕ ಇದ್ದರೂ ವಾಹನಗಳ ಸವಾರರಿಂದ ಸಂಚಾರ ನಿಯಮಗಳ ಉಲ್ಲಂಘನೆ ಸಾಮಾನ್ಯವಾಗಿದೆ. ಕೆಲವು ಕಡೆ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಲಾಗಿದೆ.

ಬಸ್ ನಿಲ್ದಾಣ ರಸ್ತೆಯಲ್ಲಿರುವ ಅಂಗಡಿಗಳ ಸರಕು ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ ದ್ವಿಚಕ್ರವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಅಸಮರ್ಪಕವಾಗಿದೆ. ಕಾರಣ ರಾತ್ರಿ ಸಮಯದಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸಿವೆ.

ಬಸವ ವೃತ್ತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಲಾರಿಗಳು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಘಟನೆಗಳು ಅನೇಕ ಬಾರಿ ಸಂಭವಿಸಿವೆ. ಮಾನ್ವಿ ಪಟ್ಟಣಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾತಿ, ಪ್ರಮುಖ ರಸ್ತೆಗಳಲ್ಲಿ ವಾಹನಗಳು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ರಸ್ತೆಯ ಒಂದು ಬದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸಿಗ್ನಲ್ ದೀಪಗಳ ಅಳವಡಿಕೆ, ವೃತ್ತಗಳಲ್ಲಿ ವಾಹನಗಳ ನಿಯಂತ್ರಣಕ್ಕಾಗಿ ಸಂಚಾರಿ ಪೊಲೀಸರನ್ನು ನೇಮಿಸಬೇಕು ಎಂಬುದು ಸ್ಥಳೀಯರ ಬೇಡಿಕೆ.

ಸ್ಥಳೀಯ ಪುರಸಭೆ ಆಡಳಿತ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತ, ಬಸವ ವೃತ್ತ ಹಾಗೂ ಪ್ರವಾಸಿ ಮಂದಿರದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಿಗ್ನಲ್ ದೀಪಗಳ ಅಳವಡಿಕೆಗೆ ಮುಂದಾಗಿದೆ. ಸಿಗ್ನಲ್ ದೀಪಗಳ ಅಳವಡಿಕೆ ನಂತರ ವಾಹನಗಳ ಸಂಚಾರ ನಿಯಂತ್ರಣ ಸಾಧ್ಯವಾಗುವ ಭರವಸೆಯನ್ನು ಸ್ಥಳೀಯರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT