ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚಾರ ಸಂಕಷ್ಟ

Published 9 ಮೇ 2024, 6:03 IST
Last Updated 9 ಮೇ 2024, 6:03 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‍ಗೆ ತೆರಳುವ ರಸ್ತೆ ಹಾಳಾಗಿದ್ದು, ಸರ್ಕಾರಿ ಬಸ್, ಕಾರು, ಆಟೊ ಮತ್ತಿತರ ವಾಹನಗಳು ಸಂಕಷ್ಟದಲ್ಲಿಯೇ ಸಂಚಾರ ಮಾಡುವಂತಾಗಿದೆ.

ಸಿಂಧನೂರಿನಿಂದ ರೈಲು ಸಂಚಾರ ಆರಂಭವಾಗುವ ಮೂಲಕ ಮೂರು ದಶಕಗಳ ಕನಸು ನನಸಾಗಿ ಈ ಭಾಗದ ಜನರಲ್ಲಿ ಹರ್ಷ ತಂದಿದೆ. ಆದರೆ, ನಗರದಿಂದ ಒಂದುವರೆ ಕಿ.ಮೀ ದೂರದಲ್ಲಿರುವ ರೈಲ್ವೆ ಸ್ಟೇಷನ್‍ಗೆ ತೆರಳುವ ರಸ್ತೆಯು ಕಿರಿದಾಗಿದ್ದು, ಅದು ತೆಗ್ಗುದಿನ್ನೆಗಳಿಂದ ಕೂಡಿದೆ. ರೈತರು ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ತಮ್ಮ ಹೊಲಗಳಿಗೆ ಹೋಗಲು ಈ ರಸ್ತೆ ಮಾಡಿಕೊಂಡಿದ್ದರು. ಕಪ್ಪು ಮಣ್ಣಿನ ರಸ್ತೆ ಇದಾಗಿದ್ದು, ಮಳೆ ಬಂದರೆ ಸಾಕು ಕೆಸರು ಗದ್ದೆಯಂತಾಗುತ್ತದೆ.

ಈ ಹದಗೆಟ್ಟ ರಸ್ತೆಯಲ್ಲಿ ಹೋಗಲು ಆತಂಕ ಪಡುವ ಸಾರ್ವಜನಿಕರು ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಬಸ್‍ನಲ್ಲಿಯೇ ಪ್ರಯಾಣ ಮಾಡುವುದು ಲೇಸು ಎನ್ನುತ್ತಾರೆ ನಗರ ನಿವಾಸಿಗಳಾದ ಮಹಾದೇವ ಪೂಜಾರಿ, ಯಮನಪ್ಪ ಮಬ್ರುಮ್‍ಕರ್.

ರಸ್ತೆ ನಿರ್ಮಾಣ ಯಾವಾಗ?: ನಗರದ ಗಂಗಾವತಿ ರಸ್ತೆಯಿಂದ ರೈಲ್ವೆ ಸ್ಟೇಷನ್‍ವರೆಗೆ ರಸ್ತೆಯನ್ನು ಅಗಲೀಕರಣಗೊಳಿಸಿ ಸಿಸಿ ರಸ್ತೆ ನಿರ್ಮಿಸಲು ನೀರಾವರಿ ಇಲಾಖೆಯಿಂದ ₹9 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದೆ. ಈ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರ ಆರಂಭಿಸಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಶಾಸಕ ಹಂಪನಗೌಡ ಬಾದರ್ಲಿ ಅವರು ಹೊತ್ತುಕೊಳ್ಳಬೇಕೆಂದು ರೈಲು ಸಂಚಾರ ಉದ್ಘಾಟನೆ ದಿನದಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಮಾಡಿಕೊಂಡಿದ್ದರು. ಮರುದಿನವೇ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಯಿತು. ಹೀಗಾಗಿ ಈ ರಸ್ತೆ ನಿರ್ಮಾಣ ಕೆಲಸ ಯಾವಾಗ ಆರಂಭವಾಗುತ್ತದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

₹80ರಲ್ಲಿ ಹುಬ್ಬಳ್ಳಿಗೆ ₹180 ರಲ್ಲಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ ಬಸ್ ನಿಲ್ದಾಣ ಗಾಂಧಿ ಸರ್ಕಲ್‍ನಿಂದ ರೈಲ್ವೆ ಸ್ಟೇಷನ್‍ಗೆ ಹೋಗಬೇಕಾದರೆ ಆಟೋಗಳಿಗೆ ₹100 ರಿಂದ 150ರವರೆಗೆ ಕೊಡಲೇಬೇಕಿದೆ. ಹೀಗಾಗಿ ಪ್ರಯಾಣ ಶುಲ್ಕಕ್ಕಿಂತ ಆಟೋಗಳ ಬಾಡಿಗೆ ದುಬಾರಿಯಾಗಿದೆ
ಮಂಜುನಾಥ ಗಾಣಗೇರಾ ತಾಲ್ಲೂಕು ಘಟಕ ಅಧ್ಯಕ್ಷ ನಮ್ಮ ಕರ್ನಾಟಕ ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT