ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

Last Updated 6 ಮೇ 2019, 14:08 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲಿ ಗೃಹ ಸಚಿವರು ದಬ್ಬಾಳಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಮ್ಮಿಶ್ರ ಸರ್ಕಾರ ಮಾಧ್ಯಮ ಸೇರಿದಂತೆ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಂಡಿದೆ. ಪ್ರತೀಕಾರದ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಪ್ರಧಾನಮಂತ್ರಿ ನರೇಂದ್ರಮೋದಿಯನ್ನು ಹತ್ಯೆ ಮಾಡುವಂತೆ ಹೇಳಿಕೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ದೂರು ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದರು.

ಜೆಡಿಎಸ್ ಶಾಸಕ ನಾರಾಯಣಗೌಡ ನಟರಾದ ಯಶ್ ಮತ್ತು ದರ್ಶನ್‌ಗೆ ನೇರವಾಗಿ ಬೇದರಿಕೆ ಹಾಕಿದ್ದರು. ಈ ಪ್ರಕರಣದಿಂದ ಜನರ ನಡುವೆ ದ್ವೇಷದ ವಾತಾವರಣ ಸೃಷ್ಟಿಯಾಗಿ ಸಾಮಾಜಿಕ ಸಾಮರಸ್ಯ ಹದಗೆಡುವ ಅಪಾಯ ಎದುರಾದರೂ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರಕ್ಕೆ ಮಾಧ್ಯಮ ಕ್ಷೇತ್ರ ಸಿಂಹ ಸ್ವಪ್ನದಂತಾಗಿದೆ. ಸರ್ಕಾರ ಅಥವಾ ಸಚಿವರನ್ನು ಟೀಕಿಸುವುದು ಅಪರಾಧ ಎನ್ನುವಂತಾಗಿದೆ. ಟೀಕೆ ಮಾಡಿದ ವಿರೋಧ ಪಕ್ಷದ ನಾಯಕರು, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಭಯದ ವಾತಾವರಣ ಸೃಷ್ಟಿಸುವ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಜೆ.ಶರಣಪ್ಪಗೌಡ, ಮುಖಂಡರಾದ ಆರ್.ತಿಮ್ಮಯ್ಯ, ದೊಡ್ಡಮಲ್ಲೇಶಪ್ಪ, ಶಶಿರಾಜ್ ಮಸ್ಕಿ, ಜಯತೀರ್ಥದಾಸ್, ರಾಮಚಂದ್ರ ಕಡಗೋಳ, ಮುಕ್ತಿಯಾರ್, ಶರಣಪ್ಪ, ರಾಘವೇಂದ್ರ, ನಾಗರಾಜ ಅಕ್ಕರಕಿ, ಮಾರೆಪ್ಪ, ಈರಣ್ಣ, ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT