ಮಂಗಳವಾರ, ಆಗಸ್ಟ್ 20, 2019
27 °C
ವ್ಯಾಸರಾಜರ ಬೃಂದಾವನ ಧ್ವಂಸ ಘಟನೆಗೆ ಬ್ರಾಹ್ಮಣ ಮಹಾಸಭಾ ಖಂಡನೆ

ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರತಿಭಟನೆ

Published:
Updated:
Prajavani

ರಾಯಚೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗಡ್ಡೆಯಲ್ಲಿರುವ ನವ ವೃಂದಾವನದಲ್ಲಿ ವ್ಯಾಸರಾಜರ ಮೂಲ ಬೃಂದಾವನವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಮುಂಗ್ಲಿ ಪ್ರಾಣದೇವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ದುಷ್ಕರ್ಮಿಗಳ ದುಷ್ಕೃತ್ಯದ ಆಕ್ರೋಶ ವ್ಯಕ್ತಪಡಿಸಿದರು. ಪವಿತ್ರ ಧಾರ್ಮಿಕ ಕೇಂದ್ರ ನವವೃಂದಾವನ ಗಡ್ಡೆಯಲ್ಲಿರುವ ಮಧ್ವ ಪರಂಪರೆಯ ಯತಿಕುಲತಿಲಕ ವ್ಯಾಸರಾಜರ ಮೂಲ ಬೃಂದಾವನವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮಧ್ವಾಚಾರ್ಯರ ಪರಂಪರೆಯಲ್ಲಿ ವ್ಯಾಸರಾಜರು ಯತಿಶ್ರೇಷ್ಠರಾಗಿದ್ದು, ವಿಜಯನಗರ ಸಾಮ್ರಾಜ್ಯದ ಸುವರ್ಣಯುಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಾತಿ, ಮತ, ಪಂಥ ಭೇಧವಿಲ್ಲದೇ ಕಲ್ಯಾಣ ಕಾರ್ಯಗಳನ್ನು ಮಾಡಿದ್ದಾರೆ. ಹಿಂದೂ ಸಂಸ್ಕೃತಿಯ ಅಭ್ಯುದಯಕ್ಕಾಗಿ ದೇಶದಾದ್ಯಂತ ಸಾವಿರಾರು ಪ್ರಾಣದೇವರನ್ನು ಪ್ರತಿಷ್ಠಾಪಿಸಿ ಧರ್ಮ ಜಾಗೃತಿ ಕೈಗೊಂಡಿದ್ದಾರೆ. ಪುರಂದರದಾಸರಿಗೆ, ಕನಕದಾಸರಿಗೆ ಗುರುಗಳಾಗಿ ಮಾರ್ಗದರ್ಶನ ಮಾಡಿದ್ದಾರೆ. ಹಿಂದುಗಳು ಹಾಗೂ ಮಧ್ವಮತದ ಅನುಯಾಯಿಗಳು ಭಕ್ತಿಯಿಂದ ಪೂಜಿಸುವ ಬೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದು ಖಂಡನೀಯವಾಗಿದೆ. ಇದರಿಂದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಿದರು.

ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನವ ವೃಂದಾವನ ಗಡ್ಡೆಯಲ್ಲಿರುವ ಯತಿಗಳ ಬೃಂದಾವನಗಳಿಗೆ ರಕ್ಷಣೆ ಒದಗಿಸಬೇಕು. ವಿವಿಧ ಭಾಗದಲ್ಲಿನ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಜಗನ್ನಾಥ ಕುಲಕರ್ಣಿ, ನಗರ ಅಧ್ಯಕ್ಷ ಗುರುರಾಜ ಆಚಾರ್ ಜೋಷಿ, ಪ್ರಕಾಶ ಅಲ್ಲಂಪಲ್ಲಿ, ಗುರುರಾಜರಾವ್ ಗೋರ್ಕಲ್, ಡಿ.ಕೆ.ಮುರಳೀಧರ, ವಿ.ಕಿಶನರಾವ್, ಡಿ.ವೆಂಕಟೇಶ, ಪ್ರಾಣೇಶ ಕುಲಕರ್ಣಿ, ಬಂಡೇರಾವ್‌ ನೇತೃತ್ವ ವಹಿಸಿದ್ದರು.

Post Comments (+)