ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಬ್ಬರೂ ಕನ್ನಡ ಭಾಷೆ ಉಳಿಸಿ, ಬೆಳೆಸಿ: ಸಾಹಿತಿ ಕುಂ.ವೀರಭದ್ರಪ್ಪ

ಕಲಾ ಸಂಕುಲ 8ನೇ ವಾರ್ಷಿಕೋತ್ಸವ, ಬೆಳಕಿನ ತೇರು ಪುಸ್ತಕ ಲೋಕಾರ್ಪಣೆ
Last Updated 12 ಜನವರಿ 2020, 13:54 IST
ಅಕ್ಷರ ಗಾತ್ರ

ರಾಯಚೂರು: ಹಲವು ವರ್ಷಗಳಿಂದ ಕನ್ನಡ ನಾಡಿನಲ್ಲಿ ಇದ್ದು, ಕರ್ನಾಟಕದ ಅನ್ನ ತಿಂದು, ಕನ್ನಡ ಭಾಷೆ ಮಾತಾಡದಿರುವ ದ್ರೋಹಿಗಳಿಗೆ ಕನ್ನಡ ಭಾಷೆ ಮಾತನಾಡುವಂತೆ ಪ್ರತಿಯೊಬ್ಬ ಕನ್ನಡಿಗ ಒತ್ತಾಯ ಮಾಡಬೇಕು ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಲಾ ಸಂಕುಲ ಸಂಸ್ಥೆಯ 8ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಬೆಳಕಿನ ತೇರು ಪುಸ್ತಕ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇರೆ ರಾಜ್ಯದಿಂದ ಬಂದು ಇಲ್ಲಿಯೇ ನೆಲೆಸಿ ವ್ಯಾಪಾರ ಮಾಡಿಕೊಂಡು ನೆಲೆಸಿರುವವರಿಗೆ ಕನ್ನಡ ಭಾಷೆ ಬಂದರೂ ಮಾತಾಡುತ್ತಿಲ್ಲ. ಅಂತವರಿಗೆ ಕನ್ನಡದಲ್ಲಿ ಮಾತನಾಡುವಂತೆ ಮಾಡಬೇಕು ಎಂದರು.

ಪೊಲೀಸ್ ಅಧಿಕಾರಿ ಎಂದರೆ ಭಯ ಪಡುವ ಸನ್ನಿವೇಶದಲ್ಲಿ ಜನಸ್ನೇಹಿಯಾಗಿ, ಎಲ್ಲರೊಂದಿಗೆ ಬೆರೆತು ಸಮಾಜ ಸೇವೆ ಮಾಡುತ್ತಿರುವ ನುಡಿದಂತೆ ನಡೆಯುವ ಕಾಯಕ ಜೀವಿ, ಸರಳ ವ್ಯಕ್ತಿತ್ವ ಹೊಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವ ಗುಣ, ಪುರಾತನ ಬಾವಿಗಳ ಸ್ವಚ್ಛತೆ, ಪರಿಸರ ಕಾಳಜಿ ಹೊಂದಿರುವ ಅಂತಹ ದಕ್ಷ ಅಧಿಕಾರಿಯನ್ನು ಪಡೆದ ರಾಯಚೂರು ಜಿಲ್ಲೆಯೇ ಧನ್ಯ ಎಂದರು.

ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ್ ಎಸ್.ಹೊಸಮನಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಷೇಧ, ಹಸಿರೀಕರಣ, ಜಲಮೂಲ ಸಂರಕ್ಷಣೆ ಸೇರಿದಂತೆ ಸಾಮಾಜಿಕ ಬದಲಾವಣೆ ತರುವ ಅನೇಕ ಕಾರ್ಯಕ್ರಮಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಮಾಡಿದ್ಧಾರೆ. ಹಾಡುಗಾರನಾಗಿ ತನ್ನದೇ ಕಲೆಯನ್ನು ಮೇಗೂಡಿಸಿಕೊಂಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ವೃತ್ತಿಯ ಜೊತೆಗೆ ಪ್ರವೃತ್ತಿ ಇಟ್ಟುಕೊಂಡವರು. ಈಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಮಾತನಾಡಿ, ’ಪ್ರತಿ ಭಾನುವಾರ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಅದಕ್ಕೆ ಸಂಘ ಸಂಸ್ಥೆಗಳು ಒಗ್ಗಟ್ಟಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಕಲಾ ಸಂಕುಲ ಸಂಸ್ಥೆ ಹಾಗೂ ರಾಯಚೂರಿನ ಜನತೆ ನನ್ನನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ತಮ್ಮ ಹೃದಯದಲ್ಲ್ಲಿ ನನಗೆ ಒಂದು ಸ್ಥಾನ ಕೊಟ್ಟಿದ್ದೀರಿ ನಾನೇ ಧನ್ಯ’ ಎಂದರು.

’ರಾಯಚೂರಿಗೆ ವರ್ಗಾವಣೆಗೊಂಡಾಗ, ಕುಟುಂಬ ವರ್ಗದವರು ರಾಯಚೂರು ಬಿಸಿಲ ನಾಡು ಅಲ್ಲಿ ನೀನು ಹೇಗೆ ಕಷ್ಟಪಟ್ಟು ಕೆಲಸ ಮಾಡುತ್ತೀಯಾ ಎಂದಿದ್ದರು. ಇಲ್ಲಿನ ಹೃದಯವಂತಿಕೆ ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಇಲ್ಲ. ನಾನು ಯಾವುದೇ ಸಮಾಜ ಸೇವೆ ಮಾಡುವಾಗ ಸಾವಿರಾರು ಸಂಖ್ಯೆಯಲ್ಲಿ ನನ್ನ ಜೊತೆ ಬಂದು ಶ್ರಮಿಸಿದ್ದಾರೆ. ನಿಮಗೆಲ್ಲ ಚಿರಋಣಿಯಾಗಿದ್ದೇನೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರ ಕುರಿತು ಲೇಖಕಿ ರೇಖಾ ಬಡಿಗೇರಾ ಬರೆದಿರುವ ‘ಬೆಳಕಿನ ತೇರು’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸೇವಕರಿಗೆ ‘ಸಾಧಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ತಂದೆ ಬಸವರಾಜ ಮಾತನಾಡಿ, ‘ಮೊದಲು ಆರೋಗ್ಯ, ಕುಟುಂಬ ಕಾಪಾಡಲು ಆದ್ಯತೆ ನೀಡಬೇಕು. ಆನಂತರ ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ರಾಯಚೂರಿನಲ್ಲಿ ಪುತ್ರನ ಸೇವೆ ನೋಡಿ ಖುಷಿಯಾಗಿದೆ’ ಎಂದರು.

ಎಸ್‌ಪಿ ಅವರ ಪಾಲಕರು ಸೇರಿದಂತೆ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವಪ್ರಭು ಪಾಟೀಲ್ ಬೆಟ್ಟದೂರು, ಗ್ರೀನ್‌ ರಾಯಚೂರು ಸಂಸ್ಥೆಯ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ, ಬೆಳಗಾವಿ ಆಯುರ್ವೇದ ವೈದ್ಯ ಶಿವಾನಂದ ರಾಥೋರ್, ಕಲಾ ಸಂಕುಲ ಅಧ್ಯಕ್ಷೆ ರೇಖಾ ಬಡಿಗೇರಾ, ಮಾರುತಿ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT