ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ: 7 ಬಾರಿ ಶೇ 100 ಫಲಿತಾಂಶ ಪಡೆದ ವಳಬಳ್ಳಾರಿ ಶಾಲೆ

Published 12 ಮೇ 2024, 4:56 IST
Last Updated 12 ಮೇ 2024, 4:56 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನಲ್ಲಿ ಯಾವುದಾದರೂ ಪ್ರೌಢ ಶಾಲೆ 100ಕ್ಕೆ 100ರಷ್ಟು ಫಲಿತಾಂಶ ಪಡೆದಿದೆ ಎಂದರೆ ಸಾಕು, ಅದು ವಳಬಳ್ಳಾರಿಯ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆಯೇ ಎನ್ನುವಷ್ಟರ ಮಟ್ಟಿಗೆ ವಳಬಳ್ಳಾರಿ ಶಾಲೆ ಖ್ಯಾತಿ ಪಡೆದಿದೆ.

2007ರಲ್ಲಿ ಕೇವಲ 19 ವಿದ್ಯಾರ್ಥಿಗಳಿಂದ ಪ್ರಾರಂಭ ವಾಗಿರುವ ಈ ಶಾಲೆಯಲ್ಲಿ ಈಗ 354 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 14 ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಎದುರಿಸಿರುವ ಈ ಶಾಲೆ 7 ವರ್ಷ ಶೇ 100ರಷ್ಟು ಫಲಿತಾಂಶ ಪಡೆದಿದೆ. 2023-24ನೇ ಸಾಲಿನಲ್ಲಿ 113 ವಿದ್ಯಾರ್ಥಿ ಗಳಿದ್ದು,  ಎಸ್‍ಎಸ್‍ಎಲ್‍ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ100ರಷ್ಟು ಫಲಿತಾಂಶದ ಗರಿಯನ್ನು ಮುಡಿಗೇರಿ ಸಿಕೊಂಡಿದೆ.

ಪ್ರಸ್ತುತ ವರ್ಷ 33 ವಿದ್ಯಾರ್ಥಿಗಳು ಶೇ 85ಕ್ಕಿಂತ ಹೆಚ್ಚ ಫಲಿತಾಂಶ ಪಡೆದು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದರೆ. 2023ರಲ್ಲಿ ಶೇ 100 ಫಲಿತಾಂಶ 37 ವಿದ್ಯಾರ್ಥಿಗಳು ಅಗ್ರಶ್ರೇಣಿ, 2022ರಲ್ಲಿ ಶೇ100ರಷ್ಟು ಫಲಿತಾಂಶ, 35 ವಿದ್ಯಾರ್ಥಿಗಳು ಅಗ್ರಶ್ರೇಣಿ, 2021ರಲ್ಲಿ ಶೇ 100ರಷ್ಟು ಫಲಿತಾಂಶ 41 ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಪ್ರತಿಭಾವಂತ ವಿದ್ಯಾರ್ಥಿಗಳು: 2022ರಲ್ಲಿ 624 ಅಂಕಗಳನ್ನು ಪಡೆದು ಬಸವಲೀಲಾ ಎನ್ನುವ ವಿದ್ಯಾರ್ಥಿನಿ, 2019ರಲ್ಲಿ 618 ಅಂಕ ಪಡೆದು ನಾಗರಾಜ ಎನ್ನುವ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು.

2010ರಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪ್ರಥಮ ಬ್ಯಾಚ್‍ನಲ್ಲಿ ಸತ್ಯಮ್ಮ ಎನ್ನುವ ವಿದ್ಯಾರ್ಥಿನಿ ಅತ್ಯಧಿಕ ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. ಈಗ ಅವರು ತಹಶೀಲ್ದಾರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ 625ಕ್ಕೆ 610 ಅಂಕಗಳನ್ನು ಪಡೆದಿರುವ ಜ್ಯೋತಿ ಗಾದಿಲಿಂಗಪ್ಪ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿರುವುದು ವಿಶೇಷ.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲೂ ಉತ್ತಮ ಸಾಧನೆ ಮಾಡಿರುವ ಚನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ನಡೆಸುವ ರಸ ಪ್ರಶ್ನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ವಿಜ್ಞಾನ ವಿಚಾರಗೋಷ್ಠಿಯಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದೆ.

2013ರಲ್ಲಿ ಭಾರತೀಯ ವಿಜ್ಞಾನ-ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಿದ್ದ ‘ಇನ್ ಸ್ಪೈರ್ ಅವಾರ್ಡ್’ ವಿಜ್ಞಾನ ವಸ್ತು ಪ್ರರ್ದಶನದಲ್ಲಿ ಸುರೇಶ ಕುಮಾರ ಎನ್ನುವ ವಿದ್ಯಾರ್ಥಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಲಾಗಿದೆ. ‘ನ್ಯಾಷನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರಶಿಫ್’ ಪರೀಕ್ಷೆಯಲ್ಲಿ 8ನೇ ತರಗತಿಯ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ತಾಲ್ಲೂಕು ಮಟ್ಟದ ಅಧಿಕಾರಿಗಳ ಗಮನ ಸೆಳೆದಿದೆ.

ಈ ಎಲ್ಲ ಸಂಗತಿಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾದರೆ ಶಾಲೆಯ ಪರಿಸರವು ಸಹ ಸುಂದರವಾಗಿದೆ ಎನ್ನುವುದಕ್ಕೆ ಪರಿಸರ ಮಿತ್ರ ಶಾಲಾ-ಕಾರ್ಯಕ್ರಮದಡಿಯಲ್ಲಿ 2013-14ರಲ್ಲಿ ಮತ್ತು 2018-19ರಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ, 2016-17ರಲ್ಲಿ ಜಿಲ್ಲಾ ಉತ್ತಮ ನೈರ್ಮಲ್ಯ ಶಾಲಾ ಪ್ರಶಸ್ತಿ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಮೂಲಸೌಕರ್ಯಗಳು: ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗುವ ಮೂಲ ಸೌಕರ್ಯಗಳನ್ನು ಶಾಲೆ ಹೊಂದಿದೆ. ಶುದ್ಧ ಕುಡಿಯುವ ನೀರಿನ ಘಟಕ, ವತ್ತಿಗೆ ಬನ ಎಂಬ ಮುಕ್ತ ಗ್ರಂಥಾಲಯ, ವಿವಿಧ ಪ್ರಕಾರದ 300 ಗಿಡಗಳು, ಸುಸಜ್ಜಿತ 9 ಕೊಠಡಿಗಳು, ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಯೋಗಾಲಯ, 10 ಕಂಪ್ಯೂಟರ್ ಒಳಗೊಂಡ ಪ್ರಯೋಗಾಲಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಹಾಯಕವಾಗಿವೆ.

ಉದ್ಯೋಗ ಸೃಷ್ಟಿ: ಈ ಶಾಲೆ ಪ್ರಾರಂಭವಾಗಿ 17 ವರ್ಷಗಳ ಕಾಲಾವಧಿಯಲ್ಲಿ ಇಲ್ಲಿ ಅಭ್ಯಾಸ ಮಾಡಿದ ನೂರಾರು ವಿದ್ಯಾರ್ಥಿಗಳು ವಿವಿಧ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಶಿಕ್ಷಣ, ಕಂದಾಯ, ಹಣಕಾಸು, ಎಂಜಿನಿಯರಿಂಗ್, ವಿದ್ಯುತ್, ಅರಣ್ಯ, ನ್ಯಾಯಾಂಗ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ವರ್ಷಕ್ಕೊಂದು ಬಾರಿ ಶಾಲೆಗೆ ಭೇಟಿ ಕೊಡುತ್ತಾರೆ. ಅದನ್ನು ಕಣ್ಣುತುಂಬಿಕೊಳ್ಳುವುದೇ ನಮಗೊಂದು ಹಬ್ಬ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶಿಕ್ಷಕ ರಾಮರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT