ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಲೆಕ್ಕಾಧಿಕಾರಿಗಳಿಂದ ಪ್ರತಿಭಟನೆ

ಅನ್ಯಾಯ, ಒತ್ತಡ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ
Last Updated 17 ಜುಲೈ 2019, 20:08 IST
ಅಕ್ಷರ ಗಾತ್ರ

ರಾಯಚೂರು: ಗ್ರಾಮ ಲೆಕ್ಕಾಧಿಕಾರಿಗಳ ಕುಂದುಕೊರತೆ, ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ಹೇರುತ್ತಿರುವುದನ್ನು ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ನೌಕರರು ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಅನ್ಯಾಯ ಹಾಗೂ ಒತ್ತಡ ಹೇರುವುದನ್ನು ಸರಿಪಡಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಸಂಘದ ಪದಾಧಿಕಾರಿಗಳ ಸಭೆಯನ್ನು ಎರಡು ಬಾರಿ ನಡೆಸಿ ಸುದೀರ್ಘವಾಗಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಇದುವರೆಗೆ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

1995ರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ಗೊತ್ತುಪಡಿಸಲಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಬೇರೆ ಇಲಾಖೆಯ ಮೇಲಧಿಕಾರಿಗಳು ಮನಸ್ಸಿಗೆ ತೋಚಿದ ಕೆಲಸವನ್ನು ನಿರ್ವಹಿಸುವಂತೆ ಮಾನಸಿಕ ಒತ್ತಡ ಹಾಕುತ್ತಿದ್ದಾರೆ. ಜಾಬ್‌ ಚಾರ್ಟ್‌ನಂತೆ ಕೆಲಸ ಮಾಡಲು ಅನುವು ಮಾಡಬೇಕು ಎಂದು ಆಗ್ರಹಿಸಿದರು.

ಕಂದಾಯ ಇಲಾಖೆಯ ಆಧಾರ ಸ್ಥಂಭಗಳಂತೆ ಹುದ್ದೆ ಸೃಷ್ಟಿ ಮಾಡಿದಾಗಿನಿಂದ ಪದೋನ್ನತಿಯಲ್ಲಿ ಅನ್ಯಾಯ ಆಗುತ್ತಿದೆ. 1997ರಲ್ಲಿ ರಚನೆ ಮಾಡಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಇದುವರೆಗೆ ಪರಿಷ್ಕರಣೆ ಮಾಡಿಲ್ಲ. ಇದರಿಂದ ಹೆಚ್ಚುವರಿ ಹುದ್ದೆಗಳನ್ನು ಸೃಜನೆ ಮಾಡಲಾಗಿದ್ದು, 15 ವರ್ಷ ಸೇವೆ ಮಾಡಿದರೂ ದ್ವಿತೀಯ ದರ್ಜೆ ಸಹಾಯಕ ಸ್ಥಾನಕ್ಕೆ ಮುಂಬಡ್ತಿ ಹೊಂದುವಂತಾಗಿದೆ ಎಂದು ದೂರಿದರು.

ಕೃಷಿ ಇಲಾಖೆಯವರು ಕೆಲಸದ ಒತ್ತಡದಿಂದ ಬೆಳೆವಿಮೆ ಕೆಲಸವನ್ನು ಮಾಡದೇ ನಿಗದಿತ ಅವಧಿಯಲ್ಲಿ ಗುರಿಯಂತೆ ಕೆಲಸ ಮಾಡಲು ಒತ್ತಡ ಹಾಕುತ್ತಿದ್ದು, ಈ ಒತ್ತಡದಿಂದ ಮುಕ್ತಗೊಳಿಸಬೇಕು. ದಿನನಿತ್ಯದ ಕೆಲಸಗಳನ್ನು ಗಣಕೀಕರಣಗೊಳಿಸುವಂತೆ ಒತ್ತಡ ಹಾಕಲಾಗಿದೆ. ಸೂಕ್ತ ಗಣಕಯಂತ್ರ, ಪ್ರಿಂಟರ್ ಹಾಗೂ ಆಪರೇಟರ್‌ ಒದಗಿಸಬೇಕು ಎಂದರು.

ರಜಾ ದಿನದಲ್ಲಿಯೂ ಜಿಲ್ಲಾಧಿಕಾರಿ ಮೂಲಕ ವಿಡಿಯೋ ಕಾನ್ಫರೆನ್ಸ್‌ ಮಾಡಿಸಿ ಬಿಡುವು ನೀಡದೆ ಕೆಲಸ ಮಾಡಿಸುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಸೇರಿಕೊಂಡು ರೂಪಿಸುವ ಯೋಜನೆಗಳನ್ನು ಪ್ರಗತಿ ಸಾಧಿಸುವ ನೆಪವೊಡ್ಡಿ ರಾತ್ರಿ ಹಗಲು ನೆಮ್ಮದಿ ಇಲ್ಲದಂತೆ ಮಾಡಲಾಗಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಒತ್ತಡ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಯಾಣ ಭತ್ಯೆಯನ್ನು ಒಂದು ಸಾವಿರಕ್ಕೆ ಹೆಚ್ಚಿಸಲು ಒತ್ತಾಯಿಸಲಾಗಿದ್ದು, ಆರನೇ ವೇತನ ಆಯೋಗದಲ್ಲಿ ₹ 500ಕ್ಕೆ ಹೆಚ್ಚಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿ ಸಾಹೇಬ ಪಾಟೀಲ ಸಾವನ್ನಪ್ಪಿರುವುದಕ್ಕೆ ವಿಶೇಷ ಪರಿಹಾರ ಮಂಜೂರು ಮಾಡಿಲ್ಲ. ₹20 ಲಕ್ಷ ಪರಿಹಾರ ನೀಡಬೇಕು. ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಿಯೋಜನೆಗೊಂಡ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕಗೊಂಡ ಸ್ಥಳಗಳಿಗೆ ಕಳುಹಿಸಿ ಕೆಲಸಕ್ಕೆ ಅನುವು ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಕ ಕಂದಾಯ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು

ಅಧ್ಯಕ್ಷ ಹನುಮೇಶ ಹೂಗಾರ, ಸುರೇಶ, ಶಿವಶಂಕರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT