ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಕ್ಷೇತ್ರದ ಅಭಿವೃದ್ಧಿಗೆ ನನಗೆ ಮತ ನೀಡಿ: ಎನ್.ಪ್ರತಾಪ ರೆಡ್ಡಿ

Published 1 ಜೂನ್ 2024, 15:31 IST
Last Updated 1 ಜೂನ್ 2024, 15:31 IST
ಅಕ್ಷರ ಗಾತ್ರ

ರಾಯಚೂರು: ‘ಈಶಾನ್ಯ ಪದವೀಧರ ಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಪ್ರತಾಪ ರೆಡ್ಡಿ ಮನವಿ ಮಾಡಿದರು.

‘ನಾನು 2018ರಲ್ಲಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದೆ. ಆದರೆ ಕೆಲವು ಮತದಾರರು ಚುನಾವಣಾ ಆಯೋಗದ ಸೂಚನೆಯ ನಿಯಮಾನುಸಾರ ಮತದಾನ ಮಾಡದೇ ಇದ್ದುದರಿಂದ ಅಲ್ಪ ಮತಗಳಿಂದ ಪರಾಭವಗೊಂಡಿದ್ದೆ’ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ನಾನು ಧೃತಿಗೆಡದೆ ಇಂದಿಗೂ ಈ ಕ್ಷೇತ್ರ ವ್ಯಾಪ್ತಿಯ ಪದವೀಧರರ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಸಕ್ರಿಯವಾಗಿದ್ದೇನೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲ ಏಳು ಜಿಲ್ಲೆಗಳನ್ನು ಒಳಗೊಂಡ ಸರ್ಕಾರಿ ನೌಕರರ ವೃಂದ ಮತ್ತು ನೇಮಕಾತಿ ಅಡಿಯಲ್ಲಿ (ಸಿ ಮತ್ತು ಆ‌ರ್, ರೂಲ್) 7 ಜಿಲ್ಲೆಗಳ ಮಟ್ಟಿಗೆ ಪ್ರತ್ಯೇಕ ನಿಯಮಾವಳಿ ರೂಪಿಸುತ್ತೇನೆ. 371 ಜೆ ಕಲಂ ಅನುಷ್ಠಾನ ಸಮಿತಿಯನ್ನು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸುತ್ತೇನೆ. ಸಮಿತಿಯಲ್ಲಿ 7 ಜಿಲ್ಲೆಗಳ ಆಯ್ದ ಚುನಾವಣಾ ಪ್ರತಿನಿಧಿಯ ಈ ಭಾಗದ ಸಂಪನ್ಮೂಲ ವ್ಯಕ್ತಿಗಳನ್ನು ಆಸಕ್ತ ತಜ್ಞರನ್ನು ಒಳಪಟ್ಟ ಸಮಿತಿಯನ್ನು ರಚಿಸಲಾಗುವುದು’ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಪ್ರತಿವರ್ಷ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳನ್ನು ಹಂತ ಹಂತವಾಗಿ ಅನುದಾನಕ್ಕೆ ಒಳಪಡಿಸಲಾಗುವುದು ಎಂದರು.

ಅನುದಾನಕ್ಕೆ ಒಳಪಡುವ ಶಿಕ್ಷಣ ಸಂಸ್ಥೆಗಳು (ಟ್ಯೂಶನ್) ಶುಲ್ಕದಲ್ಲಿ ಪ್ರತಿಶತ ಶೇ 50ರಷ್ಟು ಹಣವನ್ನು ಆಡಳಿತ ಮಂಡಳಿಗೆ ನಿರ್ವಹಣೆಗಾಗಿ ನೀಡಬೇಕು. ಇದರಿಂದ ಸಾವಿರಾರು ಖಾಸಗಿ ಶಾಲಾ ಶಿಕ್ಷಕರು, ಉಪನ್ಯಾಸಕರ ಸೇವಾ ಭದ್ರತೆಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು.

ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿದರೆ ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಖಾಸಗಿ ಶಾಲಾ–ಕಾಲೇಜುಗಳ ನೋಂದಣಿ ಮತ್ತು ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಸರಳೀಕೃತ ಕಾನೂನುಗಳನ್ನು ರಚಿಸುವ ದಿಸೆಯಲ್ಲಿ ಪ್ರಯತ್ನ ಮಾಡುವೆ ಎಂದು ಹೇಳಿದರು.

ವೀರೇಶ ಕುಮಾರ, ಮಹೇಶ ಪಾಟೀಲ, ಮರಿಸ್ವಾಮಿ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT