ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬೋರ್‌ವೆಲ್‍ಗಳ ಮೊರೆ ಹೋದ ಜಿಲ್ಲಾಡಳಿತ

Published 18 ಮಾರ್ಚ್ 2024, 5:06 IST
Last Updated 18 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಜನರ ಜೀವ ನದಿಗಳಾದ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳು ಬತ್ತಿ ಹೋಗಿವೆ. ಅಂತರ್ಜಲ ಕುಸಿದು ತೆರೆದ ಬಾವಿ ಹಾಗೂ ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿದೆ. ಆಗಲೇ ಬಿಸಿಲು ಗರಿಬಿಚ್ಚಿಕೊಂಡಿದ್ದು, ಬಿಸಿಗಾಳಿಗೆ ಕೆರೆ ಕಟ್ಟೆಗಳಲ್ಲಿನ ನೀರು ಕಡಿಮೆಯಾಗತೊಡಗಿದೆ.

ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯದ ನೀರೇ ಜಿಲ್ಲೆಯ ಜನರ ನೀರಿನ ದಾಹ ತೀರಿಸುತ್ತಿವೆ. ಜವಳು ಜಮೀನುಗಳಲ್ಲಿರುವ ಬೋರ್‌ವೆಲ್‌ಗಳ ನೀರನ್ನು ಶುದ್ಧೀಕರಿಸಿ ಜನರಿಗೆ ಸರಬರಾಜು ಮಾಡಲಾಗುತ್ತಿದೆ. ರಾಯಚೂರು, ಮಸ್ಕಿ ನಗರ ಪಟ್ಟಣಗಳಲ್ಲಿ ಮೂರರಿಂದ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಬ್ಯಾರೇಜ್‌ಗಳಲ್ಲಿ ನಿಂತ ಅಲ್ಪಸ್ವಲ್ಪ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೆಲ ಪಟ್ಟಣಗಳ ಆಡಳಿತ ಮಂಡಳಿ ಅದೇ ನೀರನ್ನೇ ಶುದ್ಧೀಕರಿಸಿ ಪೂರೈಕೆ ಮಾಡುತ್ತಿದೆ. ವಾರಕ್ಕೆ ಒಮ್ಮೆ ಅಥವಾ ಎರಡು ಸಾರಿ ಬರುವ ಕುಡಿಯುವ ನೀರನ್ನು ಮನೆಗಳಲ್ಲಿ ಡ್ರಮ್‌, ನೀರಿನ ತೊಟ್ಟಿಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಜನರು ಎಚ್ಚರಿಕೆಯಿಂದ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕುಡಿಯುವ ನೀರಿಗಾಗಿ ಕೊಡಗಳನ್ನು ಬೈಕ್‌, ಸೈಕಲ್‌ ಮೇಲೆ ಇಟ್ಟುಕೊಂಡು ಶುದ್ಧ ನೀರು ಇರುವ ಪ್ರದೇಶಗಳಿಗೆ ಜನ ಹೋಗುತ್ತಿರುವುದು ಸಾಮಾನ್ಯವಾಗಿದೆ. ಮಹಿಳೆಯರು ಸಹ ಕೈಗಾಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ಮನೆಗಳಿಗೆ ನೀರು ಒಯ್ಯುತ್ತಿದ್ದಾರೆ. ನೀರಿನ ಚಿಂತೆ ಹಾಗೂ ಬಿಸಿಲಿನ ತಾಪ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ನಿದ್ದೆಗೀಡು ಮಾಡಿದೆ.

ಸಾಮಾಜಿಕ ಕಾರ್ಯಕ್ರಮ, ಮದುವೆ, ಮುಂಜಿವೆ, ನಾಮಕರಣಕ್ಕೆ ನೆಂಟರನ್ನು ಕರೆಯಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ಇರುವ ವ್ಯವಸ್ಥೆಯಲ್ಲೇ ಎಲ್ಲ ಕಾರ್ಯವನ್ನೂ ಮಾಡಿ ಮುಗಿಸಲಾಗುತ್ತಿದೆ. ನೀರಿಲ್ಲದ ಕಾರಣ ನೆಂಟರು ಸಹ ಗ್ರಾಮಗಳಿಗೆ ಬರಲು ಹಿಂದೆಮುಂದೆ ನೋಡುತ್ತಿದ್ದಾರೆ.

374 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ರಾಯಚೂರು ಜಿಲ್ಲಾಡಳಿತವು ಫೆಬ್ರುವರಿ ತಿಂಗಳಲ್ಲೇ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಗ್ರಾಮಗಳ ಮಾಹಿತಿ ತರಿಸಿಕೊಂಡಿದೆ. ಜಿಲ್ಲೆಯ 374 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಶುರುವಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾರ್ಯಪಡೆ ಸಮಿತಿಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಫೆಬ್ರುವರಿ ಮೊದಲ ವಾರದಲ್ಲಿ ರಾಯಚೂರಿಗೆ ಬಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೂಡ ಕುಡಿಯುವ ನೀರಿನ ವಿಚಾರದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,074 ಕಂದಾಯ ಗ್ರಾಮಗಳಿದ್ದು, ಅದರಲ್ಲಿ 374 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಲಿದೆ. ರಾಯಚೂರು ತಾಲ್ಲೂಕಿನಲ್ಲಿ-78, ಮಾನ್ವಿಯಲ್ಲಿ 47, ದೇವದುರ್ಗದಲ್ಲಿ 52, ಲಿಂಗಸುಗೂರಿನಲ್ಲಿ 72, ಸಿಂಧನೂರಿನಲ್ಲಿ 53, ಸಿರವಾರದಲ್ಲಿ 31, ಮಸ್ಕಿಯ 41 ಗ್ರಾಮಗಳಲ್ಲಿ ನೀರಿಲ್ಲ. ಜಿಲ್ಲೆಯಲ್ಲಿ ಎರಡು ಜೀವನದಿಗಳಾದ ಕೃಷ್ಣಾ, ತುಂಗಭದ್ರಾ ಇದ್ದರೂ ಈಗಲೇ ಬರಿದಾಗಿದೆ. ತುಂಗಭದ್ರಾ ಜಲಾಶಯ ಆಗಲೇ ನೆಲಕಚ್ಚಿದ್ದು, ರಾಯಚೂರು ನಗರಕ್ಕೆ ಮಾತ್ರ ಇನ್ನೂ ಎರಡು ತಿಂಗಳು ನೀರು ಪೂರೈಸಬಹುದು. ಮೇ, ಜೂನ್‍ನಲ್ಲಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.

ಏಪ್ರಿಲ್, ಮೇನಲ್ಲಿ ಗಂಭೀರ ಪರಿಸ್ಥಿತಿ ನಿಯಂತ್ರಿಸಲು ಉತ್ತಮ ಅಂತರ್ಜಲ ಹೊಂದಿರುವ 269 ಬೋರ್‌ವೆಲ್‌ಗಳನ್ನು ಗುರುತಿಸಿ, ಅದರಲ್ಲಿ 59 ಬೋರ್‌ವೆಲ್‌ಗಳ ಮಾಲೀಕರಿಗೆ ಮುಂಗಡ ಹಣ ಕೊಟ್ಟು ಬಾಡಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹30.06 ಕೋಟಿ, ತಾಲ್ಲೂಕುಗಳ ತಹಶೀಲ್ದಾರರ ಖಾತೆಗಳಲ್ಲಿ ಒಟ್ಟು ₹4.74 ಕೋಟಿ ಇದೆ. ಕುಡಿಯುವ ನೀರಿನ ನಿರ್ವಹಣೆಗೆ ಮೊದಲ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ. ಬರ, ಕುಡಿಯುವ ನೀರಿನ ಸಮಸ್ಯೆ ಹಾಗೂ ಚುನಾವಣೆ ಕಾರ್ಯಗಳನ್ನು ಏಕಕಾಲಕ್ಕೆ ನಿಭಾಯಿಸಬೇಕಿದೆ. ಈ ದಿಸೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸುತ್ತಾರೆ.

‘ಜಲಾಶಯದ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಕೆರೆ ಪರಿಸರದಲ್ಲಿ 150 ಅಡಿಯಲ್ಲಿ ನೀರು ಲಭ್ಯ ಇದೆ. ಆದರೆ, ಜಲಮೂಲ ಇಲ್ಲದ ಪ್ರದೇಶಗಳಲ್ಲಿ 600 ಅಡಿ ವರೆಗೆ ಅಂತರ್ಜಲ ಮಟ್ಟ ಕುಸಿದಿದೆ. ಎರಡು ತಿಂಗಳ ಮಟ್ಟಿಗೆ ಅಗತ್ಯವಿರುವಷ್ಟು ನೀರು ಇದೆ’ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜು ಹೇಳುತ್ತಾರೆ.

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಮಾನ್ವಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಮಾರ್ಚ್ 5ರಿಂದ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಲಾಗುತ್ತಿದ್ದು, ಕೆರೆಗಳ ಭರ್ತಿಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪಟ್ಟಣದ ಜುಮ್ಮಲದೊಡ್ಡಿ, ಬೆಳಗಿನ ಪೇಟೆ ಮತ್ತಿತರ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮಹಿಳೆಯರು ನಿತ್ಯ ಜುಮ್ಮಲದೊಡ್ಡಿ ಕೆರೆಯ ದಡದಲ್ಲಿ ಚಿಲುಮೆ ಮೂಲಕ ನೀರು ಹೊತ್ತು ತರುತ್ತಿದ್ದಾರೆ.

‘ಜಿಲ್ಲಾಡಳಿತಕ್ಕೆ ₹28 ಲಕ್ಷ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾದರೆ ಕುಡಿಯುವ ನೀರು ಪೂರೈಕೆಗಾಗಿ ಬಳಸಿಕೊಳ್ಳಲಾಗುವುದು’ ಎಂದು ಪುರಸಭೆಯ ಮುಖ್ಯಾಧಿಕಾರಿ ಗಂಗಾಧರ ತಿಳಿಸಿದ್ದಾರೆ.

52ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ

ದೇವದುರ್ಗ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸುಮಾರು 52ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಬಹುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ.

ಕೃಷ್ಣಾ ನದಿ ನೀರು ಬತ್ತಿದ ಹಿನ್ನೆಲೆ ದೇವದುರ್ಗದ ಯಲ್ಲಾಲಿಂಗ ಕಾಲೊನಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿನ ಸುಮಾರು 10 ಕ್ಕೂ ಹೆಚ್ಚು ದೊಡ್ಡಿ ಮತ್ತು ತಾಂಡಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಟ್ಯಾಂಕರ್ ಮೂಲಕ ವಾರದಲ್ಲಿ ಮೂರು ಬಾರಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲ್ಲೂಕಿನ ಭೂಮನಗುಂಡ ಗ್ರಾಮ ಪಂಚಾಯಿತಿಯಲ್ಲಿನ ಗ್ರಾಮಗಳಿಗೆ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ ಎನ್ನುತ್ತಾರೆ ದೇವದುರ್ಗ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ.

ಲಿಂಗಸುಗೂರು ತಾಲ್ಲೂಕಿನಲ್ಲಿ ಚಿತ್ತಾಪುರ, ಸಜ್ಜಲಗುಡ್ಡ, ಚಿಕ್ಕ ಉಪ್ಪೇರಿ ಸೇರಿದಂತೆ ಕೆಲವೆಡೆ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತ ಸಾಗಿದೆ. 15 ಗ್ರಾಮಗಳಲ್ಲಿ ಖಾಸಗಿ ಮಾಲೀಕರಿಂದ ಕೊಳವೆಬಾವಿ ಬಾಡಿಗೆ ಪಡೆದು ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಇನ್ನುಳಿದ 14 ಗ್ರಾಮಗಳಲ್ಲಿ ಸಮಸ್ಯೆ ಉದ್ಭವಿಸಿದರೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯವಾಗಲಿದೆ.

25 ಕೆರೆಗಳ ಭರ್ತಿಗೆ ಸಿದ್ಧತೆ

ಮಸ್ಕಿ: ತಾಲ್ಲೂಕಿನ 45 ಗ್ರಾಮಗಳನ್ನು ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳೆಂದು ಗುರುತಿಸಲಾಗಿದೆ.

ಕೋಳಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವೆಂಕಟೇಶ್ವರ ಕ್ಯಾಂಪ್‌ನಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ಆ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ 25 ಕುಡಿಯುವ ನೀರಿನ ಕೆರೆಗಳು ಇದ್ದು ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಟ್ಟಿದ್ದರಿಂದ 25 ಕೆರೆಗಳನ್ನು ತುಂಬಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಿವೆ.

ಈಗಾಗಲೇ ಎರಡು ಕೆರೆಗಳು ಭರ್ತಿಯಾಗಿದ್ದು ಉಳಿದ 23 ಕೆರೆಗಳು ಶೇ 80ರಷ್ಟು ಭರ್ತಿಯಾಗಿವೆ. ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳು ನೀರಿನ ಸಂಕಷ್ಟದಿಂದ ಹೊರಬರಲಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಹೇಳುತ್ತಾರೆ.

ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ

ಕವಿತಾಳ: ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಮತ್ತು ನಿರ್ವಹಣೆ ಸಮಸ್ಯೆಯಿಂದ ಬೇಸಿಗೆ ಆರಂಭದಲ್ಲಿಯೇ ಪಟ್ಟಣ ಸೇರಿದಂತೆ ವಿವಿಧೆಡೆ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯ ನೀರು ಪೂರೈಸುವ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದ್ದರೂ ಬಹುತೇಕ ವಾರ್ಡ್‌ಗಳಲ್ಲಿ ಎರಡು ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.
ಸಮೀಪದ ಬಸಾಪುರ ಗ್ರಾಮಕ್ಕೆ ಪೂರೈಸುವ ಕೆರೆ ನೀರಿನಲ್ಲಿ ಕಸ, ಕಡ್ಡಿ ಮತ್ತು ಹುಳಗಳು ಬರುತ್ತಿದ್ದು ದುರ್ವಾಸನೆ ಬೀರುತ್ತಿರುವ ನೀರು ಬಳಕೆಗೂ ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಪರಸಾಪುರ ಗ್ರಾಮದಲ್ಲಿ ನೀರಿನ ಕೊರತೆ ಎದುರಾಗಿದ್ದು ಸಮರ್ಪಕ ನೀರು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಅಂದಾಜು 1 ಸಾವಿರ ಜನಸಂಖ್ಯೆಯನ್ನು ಹೊಂದಿದ ಚಿಂಚರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಡೋಣಿ ತಿಮ್ಮಾಪುರದಲ್ಲಿ ಎರಡು ಕೊಳವೆಬಾವಿಗಳಿದ್ದು ಒಂದರಲ್ಲಿ ನೀರು ಕುಸಿತವಾಗಿದೆ. ಇನ್ನೊಂದು ಊರಿಂದ ಎರಡು ಕಿ.ಮೀ. ದೂರದಲ್ಲಿದ್ದು ಪೈಪ್ ಒಡೆದ ಪರಿಣಾಮ ನೀರು ಪೂರೈಕೆಯಲ್ಲಿ ಸತತ ವ್ಯತ್ಯಯ ಉಂಟಾಗುತ್ತಿದೆ. ಗ್ರಾಮದಲ್ಲಿ ಕೆಲವು ಕುಟುಂಬಗಳು ದುಡಿಯಲು ಬೆಂಗಳೂರಿಗೆ ಗುಳೆ ಹೋಗಿವೆ. ಹೀಗಿದ್ದರೂ ಗ್ರಾಮಸ್ಥರಿಗೆ ಸಮರ್ಪಕ ನೀರು ಸಿಗುತ್ತಿಲ ಎಂದು ಜನರು ಆರೋಪಿಸಿದರು.

‘ನಸುಕಿನ ಜಾವ 5 ಗಂಟೆಗೆ ನೀರು ಪೂರೈಸುವುದರಿಂದ ಮನೆ ಕೆಲಸ ಬಿಟ್ಟು ನೀರು ತರುವಂತಾಗಿದೆ. ಪಾತ್ರೆ, ಪಗಡೆ, ಬಟ್ಟೆ ತೊಳೆಯಲು, ಸ್ನಾನಕ್ಕೆ, ಅಡುಗೆಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಸಾಕಾಗುತ್ತಿಲ್ಲ’ ಎಂದು ಆದಮ್ಮ, ಬಸ್ಸಮ್ಮ ಮತ್ತು ಸಾಬಮ್ಮ ಅಳಲು ತೋಡಿಕೊಂಡರು.

ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಜಲಕುಂಭದಿಂದ ನೀರು ತುಂಬುತ್ತಿರುವ ಗ್ರಾಮಸ್ಥರು
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಜಲಕುಂಭದಿಂದ ನೀರು ತುಂಬುತ್ತಿರುವ ಗ್ರಾಮಸ್ಥರು
ಕವಿತಾಳ ಸಮೀಪದ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ನೀರಿಗಾಗಿ ಕಾಯ್ದು ನಿಂತಿರುವ ಮಹಿಳೆಯರು
ಕವಿತಾಳ ಸಮೀಪದ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ನೀರಿಗಾಗಿ ಕಾಯ್ದು ನಿಂತಿರುವ ಮಹಿಳೆಯರು
ರಾಯಚೂರು ತಾಲ್ಲೂಕಿನಲ್ಲಿರುವ ತುಂಗಭದ್ರಾ ನೀರಿಲ್ಲದೆ ಸಂಪೂರ್ಣ ಒಣಗಿದೆ
ರಾಯಚೂರು ತಾಲ್ಲೂಕಿನಲ್ಲಿರುವ ತುಂಗಭದ್ರಾ ನೀರಿಲ್ಲದೆ ಸಂಪೂರ್ಣ ಒಣಗಿದೆ

ಪೂರಕ ಮಾಹಿತಿ: ಮಂಜುನಾಥ ಎನ್.ಬಳ್ಳಾರಿ, ಪ್ರಕಾಶ ಮಸ್ಕಿ, ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT