ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಎರಡು ಕೆರೆ ತುಂಬಿದರೂ ವಾರಕ್ಕೊಮ್ಮೆ ನೀರು!

ದೊಡ್ಡ ಕೆರೆ, ಸಣ್ಣ ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚಳ
Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಜನತೆಯ ಕುಡಿಯುವ ನೀರಿನ ಜಲಮೂಲಗಳಾದ ದೊಡ್ಡ ಕೆರೆ ಮತ್ತು ಸಣ್ಣ ಕೆರೆ ಎರಡೂ ತುಂಬಿದ್ದರೂ 6 ದಿನಕ್ಕೊಮ್ಮೆ ನೀರು ಪೂರೈಸುತ್ತಿರುವ ನಗರಸಭೆ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ನಾಗರಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಮಲ್ಲಿಕಾರ್ಜುನ ಪಾಟೀಲ್ ಅವರು ನಗರಸಭೆ ಅಧ್ಯಕ್ಷರಾದ ನಂತರ 4 ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ತೀರ್ಮಾನ ಕೈಗೊಂಡು ಆ ಪ್ರಕಾರ ಕಾರ್ಯಾನುಷ್ಠಾನ ಮಾಡಿದ ಸಮಯದಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಬೇಸಿಗೆ ಕಾಲ ಆರಂಭಗೊಳ್ಳುತ್ತಿದ್ದಂತೆ 6 ದಿನಕ್ಕೊಮ್ಮೆ ನೀರು ಬಿಡುವುದಾಗಿ ಪ್ರಕಟಿಸಿದಾಗ್ಯೂ ಸಾರ್ವಜನಿಕರು ಪ್ರಶ್ನಿಸದೆ ಸಮ್ಮತಿಸಿದರು. ಈಗ ಎರಡೂ ಕೆರೆಯಲ್ಲಿ ಸಾಕಷ್ಟು ನೀರಿದ್ದರೂ 6 ದಿನಕ್ಕೊಮ್ಮೆ ಪೂರೈಸುವುದು ಸರಿಯಲ್ಲ ಎಂದು ನಗರಾಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ವೀರಭದ್ರಪ್ಪ ಕುರುಕುಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೊಡ್ಡಕೆರೆ 75 ಎಂ.ಜಿ. ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 60 ಎಂ.ಜಿ. ನೀರು ಸಂಗ್ರಹವಿದೆ. ಸಣ್ಣ ಕೆರೆ 14 ಎಂ.ಜಿ. ಸಂಗ್ರಹ ಸಾಮರ್ಥ್ಯ ಹೊಂದಿದ್ದು ಇದರಲ್ಲೂ ಸಹ 12 ಎಂ.ಜಿ.ಗಿಂತಲೂ ಅಧಿಕ ನೀರು ಸಂಗ್ರಹವಿದೆ.

ಮಳೆಗಾಲ ಪ್ರಾರಂಭವಾಗಿದ್ದು ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಬರುತ್ತಿದೆ. ತುರ್ವಿಹಾಳದಲ್ಲಿ ನಿರ್ಮಿಸಲಾಗಿರುವ 150 ಎಕರೆ ಜಮೀನಿನಲ್ಲಿರುವ ಬೃಹತ್ ಕೆರೆಯಲ್ಲಿ 3.5 ಮೀಟರ್ ನೀರಿನ ಸಂಗ್ರಹವಿದೆ. ಆದಾಗ್ಯೂ 6 ದಿನಕ್ಕೊಮ್ಮೆ ನೀರು ಪೂರೈಸುವ ನಗರಸಭೆ ಆಡಳಿತ ಮಂಡಳಿಯ ನಿರ್ಧಾರ ಸರಿಯಲ್ಲ ಎಂದು ಹಿರಿಯ ನಾಗರಿಕರಾದ ಪಂಪನಗೌಡ ಪಾಟೀಲ್, ಶಂಕ್ರಗೌಡ, ಶಂಕ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಶಾಸಕ ವೆಂಕಟರಾವ್ ನಾಡಗೌಡರು, ರಂಜಾನ್ ತಿಂಗಳಲ್ಲಿ 4 ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ಹೇಳಿ ಒಂದು ತಿಂಗಳು ಮಾತ್ರ ನೀರು ಬಿಡಲಾಯಿತು. ನಂತರ ಯಾಕೆ ಸ್ಥಗಿತಗೊಳಿಸಿದರೋ ಗೊತ್ತಿಲ್ಲ. ಇನ್ನಾದರೂ 4 ದಿನಕ್ಕೊಮ್ಮೆ ನೀರು ಬಿಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲ ಚಂದ್ರಶೇಖರ ಗೊರಬಾಳ ಒತ್ತಾಯಿಸಿದ್ದಾರೆ.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ರಸ್ತೆ, ಚರಂಡಿ ಸ್ವಚ್ಛತೆ, ಬೀದಿದೀಪ ಅಳವಡಿಕೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕುಡಿಯುವ ನೀರನ್ನು 4 ದಿನಕ್ಕೊಮ್ಮೆ ಪೂರೈಸುವ ಜೊತೆಯಲ್ಲಿ ಶುದ್ಧೀಕರಿಸಿ ಸರಬರಾಜು ಮಾಡಬೇಕು ಎಂದು ವೆಲ್ಪೇರ್ ಪಾರ್ಟಿ ಮುಖಂಡ ಖಾನ್‍ಸಾಬ, ಸಮುದಾಯದ ಸಂಘಟನಾ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಮನವಿ ಮಾಡಿದ್ದಾರೆ.

ಈ ಕುರಿತು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ‘ತುರ್ವಿಹಾಳ ಬಳಿ ಇರುವ ಜಲಸಂಗ್ರಹಗಾರ 674.10 ಎಂ.ಜಿ ಸೇರಿ ಮೇ 30ಕ್ಕೆ ಒಟ್ಟು 766.10 ಎಂ.ಜಿ ನೀರಿನ ಲಭ್ಯತೆ ಇದ್ದ ಸಮಯದಲ್ಲಿ ಪ್ರತಿದಿನ ಪೂರೈಕೆಯಾಗುವ 18.72 ಎಂ.ಎಲ್.ಡಿ. ನೀರಿನ ಆಧಾರದಿಂದ 68 ದಿನಗಳ ವರೆಗೆ ಪೂರೈಸಬೇಕಾದ ಲೆಕ್ಕಾಚಾರದಿಂದ 5 ದಿನಬಿಟ್ಟು 6ನೇ ದಿನಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಇನ್ನು ನೀರಾವರಿ ಸಲಹಾ ಸಮಿತಿ ಸಭೆ ಆಗಿಲ್ಲ. ಕಾಲುವೆಗೆ ನೀರು ಬಿಡುವ ದಿನಾಂಕವನ್ನು ಆಧರಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ತುರ್ವಿಹಾಳ ಕೆರೆಯಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದೆ. ಆದಾಗ್ಯೂ 4 ದಿನಕ್ಕೊಮ್ಮೆ ನೀರು ಪೂರೈಸುವ ಬಗ್ಗೆ ಸರ್ವ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT