ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ವರದಾನವಾದ ಉಣ್ಣೆ ಕಟಾವು ಯಂತ್ರ

ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಯಂತ್ರ ಬಾಡಿಗೆ
Published 26 ಜೂನ್ 2024, 5:14 IST
Last Updated 26 ಜೂನ್ 2024, 5:14 IST
ಅಕ್ಷರ ಗಾತ್ರ

ಕವಿತಾಳ: ಆಧುನಿಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಯಂತ್ರಗಳ ಬಳಕೆ ಹೆಚ್ಚಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಮಗದ ಮೂಲಕ ಐದು ವರ್ಷಗಳ ಹಿಂದೆ ಸರ್ಕಾರ ಪರಿಚಯಿಸಿದ್ದ ಉಣ್ಣೆ ಕಟಾವು ಯಂತ್ರ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ.

ಅಂದಾಜು ₹2.5 ಲಕ್ಷ ಬೆಲೆ ಬಾಳುವ ಯಂತ್ರವನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಮಗದ ವತಿಯಿಂದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ಪ್ರತಿ ಕುರಿಯ ಉಣ್ಣೆ ತೆಗೆಯಲು ₹5 ನಿಗದಿ ಮಾಡಿದ್ದು ಅದರಲ್ಲಿ ನಿಗಮಕ್ಕೆ ₹2, ಸಹಕಾರಿ ಸಂಘಕ್ಕೆ ₹1 ಮತ್ತು ಯಂತ್ರದ ಆಪರೇಟರ್‌ಗೆ ₹2 ಪಡೆಯಲು ನಿಗಮ ನಿರ್ದೇಶಿಸಿದೆ. ಕುರಿಗಾಹಿಗಳಿಂದ ಪಡೆಯುವ ಎರಡು ರೂಪಾಯಿಯಲ್ಲಿ ಬ್ಲೇಡ್‌ ಬದಲಾವಣೆ ಸೇರಿ ಯಂತ್ರದ ನಿರ್ವಹಣೆ ಮಾಡಬೇಕು.

ಕತ್ತರಿ ಬಳಸಿ ತೆಗೆಯುತ್ತಿದ್ದ ಉಣ್ಣೆ ಅರೆಬರೆ ಬರುತ್ತಿದ್ದ ಕಾರಣ ಅದನ್ನು ಬಿಸಾಡುತ್ತಿದ್ದರು. ಸದ್ಯ ಈ ಯಂತ್ರ ಬಳಿಸಿ ಉಣ್ಣೆ ಕಟಾವು ಮಾಡಿದಾಗ ಸಂಪೂರ್ಣ ಉಣ್ಣೆ ಬರುತ್ತದೆ, ಸಮಯದ ಉಳಿತಾಯದ ಜತೆಗೆ ಉಣ್ಣೆ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಲಾಭ ಪಡೆಯಬಹುದು ಎನ್ನುವುದು ಸಹಕಾರ ಸಂಘಗಳ ಅನಿಸಿಕೆ.

ಈ ಭಾಗದ ಕುರಿಗಳಲ್ಲಿ ಉಣ್ಣೆ ಉತ್ಪಾದನೆ ಕಡಿಮೆ. ಹೀಗಾಗಿ ಕುರಿಗಳಿಗೆ ಉಣ್ಣೆ ತೆಗೆದು ಕೀಟ ಬೀಳದಂತೆ ತಡೆಯಲು ಮಾತ್ರ ಯಂತ್ರ ಬಳಕೆಯಾಗುತ್ತಿದೆ. ಜಿಲ್ಲೆಯಲ್ಲಿ 13 ಸಂಘಗಳಿಗೆ ಯಂತ್ರ ವಿತರಣೆ ಮಾಡಲಾಗಿದೆ.
ಯಮನಪ್ಪ ವಾಲ್ಮೀಕಿ, ಸಹಾಯಕ ನಿರ್ದೇಶಕ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ರಾಯಚೂರು

‘ಒಂದು ಗಂಟೆ ಅವಧಿಯಲ್ಲಿ ಅಂದಾಜು 30 ರಿಂದ 40 ಕುರಿಗಳ ಉಣ್ಣೆ ತೆಗೆಯಬಹುದು. ಚರ್ಮಕ್ಕೆ ಗಾಯವಾಗುವುದಿಲ್ಲ, ಯಂತ್ರ ಬಳಕೆಯಿಂದ ಉದ್ದನೆಯ ಉಣ್ಣೆ ಬರುತ್ತದೆ ಅದನ್ನು ಪ್ರತಿ ಕೆ.ಜಿ. ಗೆ ₹70 ರಂತೆ ಸಂಘವೇ ಖರೀದಿಸುವುದರಿಂದ  ಕುರಿಗಾಹಿಗಳಿಗೆ ಈ ಯಂತ್ರ ವರದಾನವಾಗಲಿದೆ’ ಎಂದು ಮಲ್ಲದಗುಡ್ಡದ ಅಮೋಘ ಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್‌ ಹೇಳಿದರು.

‘ಕಂಬಳಿ ತಯಾರಿಕೆ ಜತೆಗೆ ಉಣ್ಣೆಯನ್ನು ತುಂಬಿದ ಗಾದೆ ರೂಪದ ಹಾಸಿಗೆ ಬಳಸಿ ಆಸ್ಪತ್ರೆಗಳಲ್ಲಿ ಆಕ್ಯೂಪಂಕ್ಚರ್‌ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಕುರಿ ಉಣ್ಣೆಗೆ ಬೇಡಿಕೆ ಹೆಚ್ಚಿದೆ. ಯಂತ್ರದಿಂದ ಉಣ್ಣೆ ತೆಗೆದು ಮಾರಾಟ ಮಾಡಿದರೆ ಗ್ರಾಮೀಣ ಭಾಗದ ಕುರಿಗಾಹಿಗಳು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಮಲ್ಲಯ್ಯ ಅಭಿಪ್ರಾಯಪಟ್ಟರು.

‘ಯಂತ್ರ ಬಳಕೆಯಿಂದ ಸಲೀಸಾಗಿ ಉಣ್ಣೆ ತೆಗೆಯಲು ಸಾಧ್ಯವಾಯಿತು. ವಿದ್ಯುತ್‌ ಚಾಲಿತ ಯಂತ್ರವಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕೈಕೊಟ್ಟರೆ ಸಮಸ್ಯೆಯಾಗುತ್ತದೆ. ಬ್ಯಾಟರಿ ಅಥವಾ ಸೋಲಾರ್‌ ವ್ಯವಸ್ಥೆಯಡಿ ಯಂತ್ರ ಬಳಸುವಂತಾದರೆ ಹೆಚ್ಚು ಉಪಯುಕ್ತವಾಗುತ್ತದೆ’ ಎಂದು ಕುರಿಗಾಹಿ ದೇವಣ್ಣ ಹೇಳಿದರು.

ಉಣ್ಣೆ ಕಟಾವು ಯಂತ್ರ
ಉಣ್ಣೆ ಕಟಾವು ಯಂತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT