ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World AIDS Day | ಎಚ್ಐವಿ ಸೋಂಕಿತರ ಶಸ್ತ್ರಚಿಕಿತ್ಸೆಗೆ ಹಿಂದೇಟು

ಸರ್ಕಾರ ಬೆಂಬಲಕ್ಕೆ ನಿಂತರೂ ನೆರವಿಗೆ ಬಾರದ ವೈದ್ಯರು
Published 30 ನವೆಂಬರ್ 2023, 19:29 IST
Last Updated 30 ನವೆಂಬರ್ 2023, 19:29 IST
ಅಕ್ಷರ ಗಾತ್ರ

ರಾಯಚೂರು: ಎಚ್ಐವಿ ಸೋಂಕಿತರ ಆರೋಗ್ಯ ರಕ್ಷಣೆಗೆ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಸೋಂಕಿನಿಂದ ಬಳಲುತ್ತಿರುವವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತುದಿಗಾಲ ಮೇಲೆ ನಿಂತರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ.

ವೈದ್ಯರು ನೆಪ ಹೇಳುತ್ತ ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತ ದಿನ ಕಳೆಯುತ್ತಿದ್ದಾರೆ. ಕೊನೆಗೆ ಕಾಯಿಲೆ ಗಂಭೀರ ಸ್ವರೂಪ ಪಡೆಯುತ್ತಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಶಿಫಾರಸು ಮಾಡುತ್ತಿದ್ದಾರೆ. ಹೀಗಾಗಿ ಬಡವರು ತೊಂದರೆ ಅನುಭವಿಸುತ್ತಿದ್ದಾರೆ.

ಎಚ್‌ಐವಿ, ಏಡ್ಸ್‌ ತಡೆ ಮತ್ತು ನಿಯಂತ್ರಣ ಕಾಯ್ದೆ (2017) ಜಾರಿಯಾಗಿದೆ. ಎಚ್‌ಐವಿ ಸೋಂಕಿತರಿಗೆ ಮಾಡುವ ಯಾವುದೇ ರೀತಿಯ ಕಳಂಕ, ತಾರತಮ್ಯ ಶಿಕ್ಷಾರ್ಹವಾಗಿದೆ. ₹1 ಲಕ್ಷ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ ವೈದ್ಯರು ನಿರಾಕ ರಣೆಯನ್ನೂ ಮಾಡದೇ ಶಸ್ತ್ರಚಿಕಿತ್ಸೆಯನ್ನೂ ಕೈಗೊಳ್ಳದೆ ತಾಂತ್ರಿಕ ಕಾರಣ ತೋರಿಸಿ ದಿನ ಕಳೆಯುತ್ತಿದ್ದಾರೆ.

‘ಸಾಮಾನ್ಯ ಕುಟುಂಬದ ವ್ಯಕ್ತಿಗಳು ಸಾಲ ಮಾಡಿ ಹಣ ಹೊಂದಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಸೋಂಕಿತರು ನಿತ್ಯ ರಿಮ್ಸ್‌ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿದ್ದಾರೆ’ ಎಂದು ಎಚ್‌ಐವಿ ಸೋಂಕಿತ ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.

‘ಕೆಲ ಸೋಂಕಿತರು ಮಾಂಸಗಡ್ಡೆ, ಗರ್ಭಚೀಲ ಇನ್ನಿತರ ತೊಂದರೆಯಿಂದ ಬಳಲುತ್ತಿದ್ದಾರೆ. ರಿಮ್ಸ್‌ ವೈದ್ಯರು ಶಸ್ತ್ರಚಿಕಿತ್ಸೆ ಮಾಡದೇ ದಿನ ಕಳೆಯುತ್ತ ಸಾಗಿದ್ದಾರೆ. ಎಚ್‌ಐವಿ ಸೋಂಕಿತರು ಹಲವು ಬಾರಿ ನಮ್ಮ ಸಂಸ್ಥೆಗೆ ಬಂದು ಅಳಲು ತೋಡಿಕೊಂಡಿದ್ದಾರೆ. ಚಿಕಿತ್ಸೆ ನೀಡಬೇಕಾದ ವೈದ್ಯರೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿರುವುದು ಬೇಸರ ಉಂಟು ಮಾಡಿದೆ’ ಎಂದು ಹೊಸ ಬೆಳಕು ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ದೇವರಾಜ ಹೇಳುತ್ತಾರೆ.

‘ಸರ್ಕಾರಿ ಆಸ್ಪತ್ರೆ ಯಲ್ಲಿ ಶಸ್ತ್ರಚಿಕಿತ್ಸೆ ಮಾಡದ ಕಾರಣ ಸೋಂಕಿತರಿಂದಲೇ ₹5 ಸಾವಿರ ಬೆಲೆಯ ಕಿಟ್‌ ತರಿಸಿಕೊಂಡು ಖಾಸಗಿ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತಾರತಮ್ಯ ನಿಲ್ಲಬೇಕು. ಸೋಂಕಿತರಿಗೆ ಮಾನವೀಯ ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವಂತೆ ಆಗಬೇಕು’ ಎನ್ನುತ್ತಾರೆ ಅವರು.

‘ಎಚ್ಐವಿ ಸೋಂಕಿತ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳು ಆಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಸಿಸೇರಿಯನ್‌ ಸಹ ಮಾಡಲಾಗಿದೆ. ಇತರ ಕಾಯಿಲೆಗಳ ಶಸ್ತಚಿಕಿತ್ಸೆ ಮಾಡಲು ವೈದ್ಯರು ನಿರಾಕರಿಸಿರುವುದು ಹಾಗೂ ಅನಗತ್ಯವಾಗಿ ಸಮಯ ಮುಂದೂಡಿದ್ದರ ಮಾಹಿತಿ ಇಲ್ಲ. ಲಿಖಿತ ದೂರು ಕೊಟ್ಟರೆ ಡಿಎಚ್ಒ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT