ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜಿಲ್ಲೆಯ ರಸ್ತೆಗಳಲ್ಲಿ ಮೈ ನಡುಕ!

ಹೊಂಡವಾಗಿ ಪರಿವರ್ತನೆಯಾದ ರಾಜ್ಯಹೆದ್ದಾರಿ
Last Updated 1 ನವೆಂಬರ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಬಹುತೇಕ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಕಳೆದ ವರ್ಷ ಮಳೆಗಾಲದಲ್ಲಿಯೇ ಹಾಳಾದರೂ ದುರಸ್ತಿಯಾಗಿರಲಿಲ್ಲ. ಈ ವರ್ಷವೂ ಅತಿಯಾದ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೊಂಡಗಳಾಗಿ ಪರಿವರ್ತನೆಯಾಗಿವೆ.

2019ರಲ್ಲಿ ಪ್ರವಾಹ ಮತ್ತು ಭಾರಿ ಮಳೆಯಿಂದ ಹಾನಿಯಾಗಿದ್ದ ರಸ್ತೆಗಳು, ಕಿರುಸೇತುವೆಗಳ ಸಮೀಕ್ಷೆ ಕೈಗೊಂಡಿದ್ದ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು. 2019–20 ವರ್ಷ ಉರುಳಿದರೂ ಅನುದಾನ ಬಿಡುಗಡೆ ಆಗದೆ ಇರುವುದಕ್ಕೆ ಜಿಲ್ಲೆಯಲ್ಲಿ ಯಾವುದೇ ರಸ್ತೆಯು ದುರಸ್ತಿ ಭಾಗ್ಯ ಕಾಣಲಿಲ್ಲ. ಕೋವಿಡ್‌ ಕಾರಣದಿಂದ 2020–21ನೇ ಸಾಲಿನಲ್ಲಿಯೂ ರಸ್ತೆ ದುರಸ್ತಿಗಾಗಿ ಅನುದಾನ ಮಂಜೂರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಅನುದಾನವಿಲ್ಲದೆ, ಹಳೆ ಬಿಲ್‌ ಪಾವತಿಸಲು ಸಾಧ್ಯವಾಗದೆ ಲೋಕೋಪಯೋಗಿ ಇಲಾಖೆ ಬಿಕೋ ಎನ್ನುತ್ತಿದೆ.

ಎರಡು ಮಳೆಗಾಲದ ಹೊಡೆತದಿಂದ ಗ್ರಾಮೀಣ ರಸ್ತೆಗಳು ದುರಸ್ತಿಯಾಗದ ಸ್ಥಿತಿಗೆ ತಲುಪಿವೆ. ಹಳ್ಳಗಳಿಗೆ ಅಡ್ಡಲಾಗಿ ಕಟ್ಟಿದ್ದ ಕಿರುಸೇತುವೆಗಳು ಕಿತ್ತುಹೋಗಿದ್ದು, ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಕೋವಿಡ್‌ ಕಾರಣದಿಂದ ಗ್ರಾಮೀಣ ಭಾಗಗಳಿಗೆ ಇನ್ನೂ ಸರ್ಕಾರಿ ಬಸ್‌ ಸಂಚಾರ ಆರಂಭವಾಗಿಲ್ಲ. ಕೊರೊನಾ ತೊಲಗಿದರೂ, ಗ್ರಾಮೀಣ ಭಾಗಗಳಿಗೆ ವಾಹನಗಳ ಸಂಚಾರ ಸಮಸ್ಯೆ ಹಾಗೇ ಉಳಿದುಕೊಳ್ಳಲಿದೆ.

ರಾಯಚೂರು–ಲಿಂಗಸುಗೂರು ಮಾರ್ಗದ ರಾಜ್ಯ ಹೆದ್ದಾರಿ ಸಂಖ್ಯೆ– 20 ಕಚ್ಚಾರಸ್ತೆಯಾಗಿ ಬದಲಾಗಿದೆ. ಕಲ್ಮಲಾ ಗ್ರಾಮದ ಬಳಿ ಹೆದ್ದಾರಿ ಕೆರೆಯಾಗಿ ಬದಲಾಗಿದೆ. ಈ ಮಾರ್ಗದಲ್ಲಿ ವಾಹನಗಳು ಪ್ರತಿ ನಿಮಿಷಕ್ಕೆ ಅರ್ಧ ಕಿಮೀ ಮಾತ್ರ ಕ್ರಮಿಸಲು ಸಾಧ್ಯವಾಗುತ್ತಿದೆ. ಸಂಪೂರ್ಣ ಹೆದ್ದಾರಿ ಕಿತ್ತುಹೋಗಿದೆ. ಹೆದ್ದಾರಿ ದುರಸ್ತಿಗಾಗಿ ವಿವಿಧ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಿವೆ. ಹೆದ್ದಾರಿಗಳ ದುರಸ್ತಿಗಾಗಿ ಉಸ್ತುವಾರಿ ಸಚಿವರು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ. ವಾಸ್ತವದಲ್ಲಿ ಯಾವುದೇ ಅನುದಾನವಿಲ್ಲದೆ ಕೆಲಸ ನಡೆಯುತ್ತಿಲ್ಲ.

ಗ್ರಾಮ ವಿಕಾಸ ಯೋಜನೆಯಡಿ ಪಂಚಾಯತ್‌ರಾಜ್‌ ಇಲಾಖೆಯು 2015–16ನೇ ಸಾಲಿನ ಇನ್ನೂ ಎಂಟು ರಸ್ತೆಗಳನ್ನು ಪೂರ್ಣಗೊಳಿಸಬೇಕಿದೆ. 2017–18ನೇ ಸಾಲಿನಲ್ಲಿ ಅನುಮೋದಿಸಲಾಗಿದ್ದ 29 ರಸ್ತೆ ಕಾಮಗಾರಿಗಳ ಪೈಕಿ ಮೂರು ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ.

ಲೋಕೋಪಯೋಗಿ ಇಲಾಖೆಯು ಬಾಕಿ 16 ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಎಸ್‌ಸಿಪಿ ಯೋಜನೆಯಡಿ 25 ರಸ್ತೆ ಕಾಮಗಾರಿಗಳು ಮತ್ತು ಟಿಎಸ್‌ಪಿ ಯೋಜನೆಯಡಿ ಇನ್ನೂ 17 ಕಾಮಗಾರಿಗಳನ್ನು ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT