ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಮತದಾನಕ್ಕೆ ಸಿದ್ಧತೆ ಪೂರ್ಣ

ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿ; 6ರಂದು ಮತಎಣಿಕೆ ಕಾರ್ಯ
Last Updated 2 ನವೆಂಬರ್ 2018, 14:02 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆಯು ಶನಿವಾರ ನಡೆಯಲಿದ್ದು, ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ.

ಮುಂಜಾನೆ 7ರಿಂದಲೇ ಮತದಾನಕ್ಕೆ ಅವಕಾಶ ಇರಲಿದೆ. ಕ್ಷೇತ್ರದಲ್ಲಿನ ಪ್ರತಿ ಮತಗಟ್ಟೆಗೂ ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಈಗಾಗಲೇ ರವಾನೆ ಆಗಿದ್ದಾರೆ. ಶಾಂತಿ ಮತ್ತು ವ್ಯವಸ್ಥಿತವಾದ ಚುನಾವಣಾ ಪ್ರಕ್ರಿಯೆಗೆ ಬೇಕಾದ ಎಲ್ಲ ಕಾರ್ಯಗಳೂ ಸರಾಗವಾಗಿ ನಡೆದಿವೆ.

ಮಾದರಿ ಮತಗಟ್ಟೆ: ರಾಮನಗರ ನಗರಸಭೆ ಕಚೇರಿಯ ಕೊಠಡಿ ಸಂಖ್ಯೆ 1ರಲ್ಲಿನ ಮತಗಟ್ಟೆ ಸಂಖ್ಯೆ 64ನ್ನು ಮಾದರಿ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ. ಇಲ್ಲಿ ಮತದಾರರಿಗೆ ಬೇಕಾದ ಎಲ್ಲ ಅವಶ್ಯ ಸೌಲಭ್ಯವನ್ನು ನೀಡಲಾಗಿದೆ.ಪಿಂಕ್ ಮತಗಟ್ಟೆ: ರಾಮನಗರದ ಕಾಯಿಸೊಪ್ಪಿನ ಬೀದಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಪಿಂಕ್ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಯಲ್ಲಿನ ಚುನಾವಣಾ ಸಿಬ್ಬಂದಿ, ಭದ್ರತೆ ಸಿಬ್ಬಂದಿ ಎಲ್ಲವೂ ಮಹಿಳೆಯರೇ ಆಗಿದ್ದಾರೆ.

ಮಹಿಳಾ ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಇಲ್ಲಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಮತಗಟ್ಟೆಯ ಒಳ–ಹೊರ ಆವರಣವನ್ನು ಗುಲಾಬಿ ಬಣ್ಣದಿಂದ ಸಿಂಗರಿಸಲಾಗಿದೆ.

ಚುನಾವಣೆ ಪ್ರಕ್ರಿಯೆಗಳ ಉಸ್ತುವಾರಿಗಾಗಿ ಆಯೋಗವು 42 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಿದೆ. ಒಟ್ಟು 28 ಕಡೆ ವಿಡಿಯೊ ವೆಬ್‌ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.

ಅಂಗವಿಕಲರಿಗೆ ವಾಹನ ಸೌಲಭ್ಯ: ಕ್ಷೇತ್ರದಲ್ಲಿನ ಪ್ರತಿ ಅಂಗವಿಕಲರಿಗೂ ಆಯೋಗವು ಉಚಿತ ವಾಹನ ಸೌಲಭ್ಯವನ್ನು ಕಲ್ಪಿಸಿದೆ.
ಚುನಾವಣಾ ಸಿಬ್ಬಂದಿಯು ಅಂಗವಿಕಲರ ಮನೆ ಬಾಗಿಲಿಗೆ ತೆರಳಿ ಅವರನ್ನು ಮತಗಟ್ಟೆಗೆ ಕರೆತಂದು, ಮತದಾನದ ಬಳಿಕ ಮನೆಗೆ ವಾಪಸ್ ಬಿಡಲಿದ್ದಾರೆ. ಅಂಗವಿಕಲರ ಅನುಕೂಲಕ್ಕಾಗಿ 78 ವೀಲ್‌ ಚೇರ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಮತ ಖಾತ್ರಿಗೆ ವಿವಿಪ್ಯಾಟ್: ಕಳೆದ ಬಾರಿಯಂತೆ ಈ ಬಾರಿಯೂ ಚುನಾವಣಾ ಆಯೋಗ ಇವಿಎಂ ಮತಯಂತ್ರದ ಜೊತೆಗೆ ವಿವಿಪ್ಯಾಟ್ ಅಳವಡಿಕೆಯನ್ನು ಜಾರಿಗೆ ತಂದಿದೆ. ಮತದಾರರು ಮತ ಚಲಾವಣೆಯ ನಂತರ ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ಪಕ್ಕದಲ್ಲಿನ ವಿ.ವಿ. ಪ್ಯಾಟ್ ಯಂತ್ರದ ಪರದೆಯಲ್ಲಿ ವೀಕ್ಷಿಸಬಹುದಾಗಿದೆ. ಈ ಮಾಹಿತಿಯು ಕೇವಲ 7 ಸೆಕೆಂಡುಗಳ ಕಾಲ ಪರದೆ ಮೇಲೆ ಮೂಡಿರುತ್ತದೆ.

ಬಿಗಿ ಭದ್ರತೆ: ಚುನಾವಣೆಯ ಭದ್ರತೆಗೆಂದು ಇಬ್ಬರು ಡಿವೈಎಸ್‍ಪಿ, 4 ಇನ್‌ಸ್ಪೆಕ್ಟರ್‌, 16 ಸಬ್ ಇನ್‌ಸ್ಪೆಕ್ಟರ್‌, 15 ಸಹಾಯಕ ಸಬ್ ಇನ್‌ಸ್ಪೆಕ್ಟರ್‌, 230 ಹೆಡ್ ಕಾನ್‌ಸ್ಟೆಬಲ್‌, 300 ಕಾನ್‌ಸ್ಟೆಬಲ್‌, 350 ಹೋಮ್‌ಗಾರ್ಡ್‌, 2 ಕೆಎಸ್‍ಆರ್‌ಟಿಸಿ ತುಕಡಿ, 4 ಅರೆ ಮಿಲಿಟರಿ ಪಡೆ, 1 ಕ್ಷಿಪ್ರ ಕಾರ್ಯಪಡೆಯನ್ನು ಚುನಾವಣೆ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್‌ ತಿಳಿಸಿದ್ದಾರೆ.

ವಾಹನಗಳ ಬಳಕೆ: ಚುನಾವಣಾ ಸಿಬ್ಬಂದಿಯ ಓಡಾಟಕ್ಕಾಗಿ 36 ಬಸ್‌, 24 ಮಿನಿ ಬಸ್‌, 67 ಜೀಪ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ನಿಷೇಧಾಜ್ಞೆ ಜಾರಿ: ಮತದಾನದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 12 ಗಂಟೆಯವರೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯು ಜಾರಿಯಲ್ಲಿರುತ್ತದೆ.

ಮಸ್ಟರಿಂಗ್‌ ಪ್ರಕ್ರಿಯೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಚುನಾವಣೆಯ ಮಸ್ಟರಿಂಗ್ ಪ್ರಕ್ರಿಯೆಯು ಅಚ್ಚುಕಟ್ಟಾಗಿ ನಡೆಯಿತು.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡವರು ಬೆಳಗ್ಗೆಯಿಂದಲೇ ಕಾಲೇಜಿನ ಕೊಠಡಿ ಸೇರಿದ್ದರು. ತಮಗೆ ನಿಯೋಜಿಸಲಾದ ಸ್ಥಳವನ್ನು ಹುಡುಕಿಕೊಂಡರು. ಅವರು ತೆರಳಬೇಕಾದ ಮತಗಟ್ಟೆ ಹಾಗೂ ವಾಹನ ಸೌಲಭ್ಯದ ವಿವರವನ್ನು ನೀಡಲಾಯಿತು. ಜಿಲ್ಲಾಧಿಕಾರಿ ಕೆ. ರಾಜೇಂದ್ರ ಹಾಗೂ ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಅಂತಿಮ ಹಂತದ ತರಬೇತಿಯನ್ನೂ ನೀಡಲಾಯಿತು.

ತಮಗೆ ನೀಡಲಾದ ಎಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ಅಗತ್ಯ ಸಲಕರಣೆಗಳನ್ನು ಪರಿಶೀಲಿಸಿಕೊಂಡ ಸಿಬ್ಬಂದಿಯು ಮಧ್ಯಾಹ್ನದ ನಂತರ ಮತಗಟ್ಟೆಗಳತ್ತ ತೆರಳಿದರು.

ಡಿಗ್ರಿ ಕಾಲೇಜಿನಲ್ಲಿ ಎಣಿಕೆ: ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ಮತಯಂತ್ರಗಳನ್ನು ರಾಮನಗರದ ಎಸ್ಪಿ ಕಚೇರಿ ಪಕ್ಕದಲ್ಲಿರುವ ಪ್ರಥಮ ದರ್ಜೆ ಕಾಲೇಜು ಆವರಣಕ್ಕೆ ತರಲಾಗುತ್ತದೆ. ಅಲ್ಲಿ ಎರಡು ಸ್ಟ್ರಾಂಗ್‌ ರೂಮ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಮತಯಂತ್ರಗಳನ್ನು ಇರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೇ ಇದೇ 6ರಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT