ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ನಿರ್ವಹಣೆ ಇಲ್ಲದೆ ಸೊರಗಿದ ವೃಕ್ಷೊದ್ಯಾನ

Published 27 ಮೇ 2024, 5:21 IST
Last Updated 27 ಮೇ 2024, 5:21 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕೆಂಗಲ್ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಿರುವ ಕೆಂಗಲ್ ಹನುಮಂತಯ್ಯ ವೃಕ್ಷೊದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ. ಅಲ್ಲದೆ, ಪ್ರವಾಸಿಗರನ್ನು ಸೆಳೆಯುವಲ್ಲಿಯೂ ವಿಫಲವಾಗಿದೆ.

ಜಿಲ್ಲೆಯವರಾದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ಅರಣ್ಯ ಇಲಾಖೆಯು ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ 2015ರಲ್ಲಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಿತ್ತು. ಹೆದ್ದಾರಿ ಪ್ರಯಾಣಿಕರಿಗೆ ಅನುಕೂಲ ಹಾಗೂ ವಿಶ್ರಾಂತಿ ಕಲ್ಪಿಸಿಕೊಡುವ ದೃಷ್ಟಿಯಿಂದ ನಿರ್ಮಾಣ ಮಾಡಲಾಗಿತ್ತು.

ಈ ಸುಂದರ ವೃಕ್ಷೊದ್ಯಾನ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರಿಗೆ ಅಗತ್ಯವಾದ ಉದ್ಯಾನ ಕೊರತೆ ನೀಗಿಸುತ್ತದೆ ಎಂಬ ಗುರಿ ಹೊಂದಲಾಗಿತ್ತು. ಆದರೆ, ಈ ಉದ್ಯಾನ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ವೃಕ್ಷೊದ್ಯಾನ ನಿರ್ಮಾಣ ಮಾಡಿದಾಗ ಸಕಲ ಸವಲತ್ತು ಒದಗಿಸಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿತ್ತು. ಪ್ರವಾಸಿಗರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ವಾಕಿಂಗ್ ಪಥ, ಮಕ್ಕಳು ಆಟವಾಡಲು ಉಪಕರಣ, ವೀಕ್ಷಣಾ ಗೋಪುರ, ಊಟ ಮಾಡಲು ಸಭಾಂಗಣ, ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಕಾರಣ ಈಗ ಎಲ್ಲವೂ ಅವ್ಯವಸ್ಥೆ ಆಗರವಾಗಿದೆ.

ನೂರಾರು ಹೆಕ್ಟೇರ್ ವಿಸ್ತೀರ್ಣದ ವೃಕ್ಷೊದ್ಯಾನ ನಿರ್ವಹಣೆಗಾಗಿ ಅರಣ್ಯ ಇಲಾಖೆ ನಾಲ್ಕು ಮಂದಿ ಗಾರ್ಡ್‌ಗಳನ್ನು ನಿಯೋಜಿಸಿದೆ. ಬೆಳಗ್ಗೆಯಿಂದ ಸಂಜೆವರೆಗೆ ಇಬ್ಬರು, ರಾತ್ರಿ ವೇಳೆ ಇಬ್ಬರು ಉದ್ಯಾನದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇವರಲ್ಲಿ ಇಬ್ಬರು ಕಾಯಂ ನೌಕರರು, ಇನ್ನಿಬ್ಬರು ಗುತ್ತಿಗೆ ಆಧಾರದ ನೌಕರರು. ಶೌಚಾಲಯ ಸ್ವಚ್ಛಗೊಳಿಸುವುದರಿಂದ ಹಿಡಿದು ಪ್ರವಾಸಿಗರನ್ನು ನಿಯಂತ್ರಿಸವವರೆಗೂ ಎಲ್ಲ ಕೆಲಸಗಳನ್ನು ಈ ಗಾರ್ಡ್‌ಗಳೇ ನೋಡಿಕೊಳ್ಳಬೇಕಾಗಿದೆ.

ಆರಂಭದಲ್ಲಿ ಪ್ರವಾಸಿಗರ ದಂಡು: ವೃಕ್ಷೊದ್ಯಾನ ಸಾರ್ವಜನಿಕ ಸೇವೆಗೆ ಮುಕ್ತವಾದ ನಂತರ ಪ್ರವಾಸಿಗರನ್ನು ಸೆಳೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು. ಪ್ರತಿದಿನ ಹೆದ್ದಾರಿ ಪ್ರಯಾಣಿಕರು ಇಲ್ಲಿ ಕೆಲಹೊತ್ತು ಸಮಯ ಕಳೆದು ಹೋಗುತ್ತಿದ್ದರು. ರಜಾ ದಿನಗಳಲ್ಲಿ ಪ್ರತಿದಿನ 500ರಿಂದ 600 ಮಂದಿ ಇಲ್ಲಿಗೆ ಭೇಟಿ ನೀಡಿದ ಉದಾಹರಣೆ ಇದೆ. ಆದರೆ, ನಂತರದ ದಿನಗಳಲ್ಲಿ ಉದ್ಯಾನ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾದ ಕಾರಣ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ.

ಈಗ ಪ್ರತಿದಿನ ಬೆರಳಣಿಕೆಯಷ್ಟು ಮಂದಿ ಮಾತ್ರ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಿ 100 ಮಂದಿ ಪ್ರವಾಸಿಗರು ಭೇಟಿ ನೀಡಿದರೆ ಅದೇ ಹೆಚ್ಚು. ಎಲ್ಲೆಂದರಲ್ಲಿ ಕಸ ಹರಡುವುದು, ಶೌಚಾಲಯ ಸಮರ್ಪಕವಾಗಿ ಬಳಸದಿರುವುದು, ಅಮೂಲ್ಯ ಗಿಡ ಕೀಳುವುದು, ಹುಲ್ಲು ಹಾಸು ಹಾಳು ಮಾಡುವುದು, ಮಕ್ಕಳಿಗೆ ಇರುವ ಆಟದ ವಸ್ತುಗಳನ್ನು ವಯಸ್ಕರು ಬಳಸುವುದು ಸೇರಿದಂತೆ ಅವ್ಯವಸ್ಥೆಯೇ ಹೆಚ್ಚಾಗಿದೆ ಎಂದು ಪ್ರವಾಸಿಗರೊಬ್ಬರು ದೂರುತ್ತಾರೆ.

ಹೋಟೆಲ್ ಇದ್ದರೂ ಊಟ ಇಲ್ಲ: ವೃಕ್ಷೊದ್ಯಾನದಲ್ಲಿ ಸಕಲ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಹೋಟೆಲ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಹೋಟೆಲ್ ನಡೆಸುತ್ತಿಲ್ಲ. ಹೋಟೆಲ್ ಅನ್ನು ಅರಣ್ಯ ಇಲಾಖೆ ವತಿಯಿಂದ ನಡೆಸಲಾಗುತ್ತದೆಯೋ ಅಥವಾ ಖಾಸಗಿ ಅವರಿಗೆ ನೀಡುವ ಪ್ರಕ್ರಿಯೆ ನಡೆದಿದೆಯೋ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಹಾಗಾಗಿ ಕಟ್ಟಡ ಇಂದಿಗೂ ಅನಾಥವಾಗಿ ಉಳಿದಿದೆ.

ಅರಣ್ಯ ಪ್ರವೇಶಿಸುವ ಪ್ರವಾಸಿಗರು: ಉದ್ಯಾನವನ್ನು ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ನಿರ್ಮಾಣ ಮಾಡಿರುವ ಕಾರಣ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರು ಸೀದಾ ಕಾಡಿನೊಳಗೆ ಪ್ರವೇಶ ಮಾಡುತ್ತಿರುವ ಪ್ರಕರಣ ನಡೆಯುತ್ತಿದೆ. ಇದು ಅರಣ್ಯ ಇಲಾಖೆಗೆ ತಲೆನೋವು ತರಿಸಿದೆ.

ಅರಣ್ಯದಲ್ಲಿ ಆನೆ, ಚಿರತೆ, ಕರಡಿ, ಜಿಂಕೆ, ಕಾಡುಹಂದಿ ಸೇರಿದಂತೆ ವಿವಿಧ ಪ್ರಾಣಿಗಳು ಓಡಾಡುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಇದರ ಬಗ್ಗೆ ಪ್ರವಾಸಿಗರಿಗೆ ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಕೆಲವರು ಗಾರ್ಡ್‌ಗಳ ಕಣ್ಣುತಪ್ಪಿಸಿ ಅರಣ್ಯ ಪ್ರವೇಶ ಮಾಡುತ್ತಿದ್ದಾರೆ. ಈ ಬಗ್ಗೆ ಸೂಚನಾ ಫಲಕ ಹಾಕಿ ಕಾಡಿಗೆ ಪ್ರವೇಶ ಮಾಡದಂತೆ ತಡೆಯಲು ಪರಿಣಾಮಕಾರಿಯಾಗಿ ಇಲಾಖೆ ಕ್ರಮ ವಹಿಸಬೇಕಿದೆ ಎಂದು ಇಲ್ಲಿಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ತಿಳಿಸುತ್ತಾರೆ.

ಉದ್ಯಾನ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಲಾಗಿದೆ. ಪ್ರವಾಸಿಗರಿಂದ ಹಣ ಪಡೆಯುವ ಇಲಾಖೆ ಉದ್ಯಾನ ಸೂಕ್ತವಾಗಿ ನಿರ್ವಹಣೆ ಮಾಡಿದರೆ ಪ್ರವಾಸಿಗರನ್ನು ಸೆಳೆಯಬಹುದು. ಇಲ್ಲಿಗೆ ಮತ್ತಷ್ಟು ಸಿಬ್ಬಂದಿ ಅವಶ್ಯ ಇದೆ. ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಚಿಕ್ಕಮಣ್ಣುಗುಡ್ಡೆ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.

ಸೂಕ್ತ ನಿರ್ವಹಣೆ ಇಲ್ಲದೆ ಒಣಗುತ್ತಿರುವ ವೃಕ್ಷೊದ್ಯಾನದ ಒಳಭಾಗ
ಸೂಕ್ತ ನಿರ್ವಹಣೆ ಇಲ್ಲದೆ ಒಣಗುತ್ತಿರುವ ವೃಕ್ಷೊದ್ಯಾನದ ಒಳಭಾಗ
ವೃಕ್ಷೊದ್ಯಾನದ ಒಳಗಿನ ಪ್ರವಾಸಿಗರ ರಸ್ತೆಯ ಅವ್ಯವಸ್ಥೆ
ವೃಕ್ಷೊದ್ಯಾನದ ಒಳಗಿನ ಪ್ರವಾಸಿಗರ ರಸ್ತೆಯ ಅವ್ಯವಸ್ಥೆ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷಿ ಉದ್ಯಾನ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಹೆದ್ದಾರಿ ಪಕ್ಕದಲ್ಲೇ ಉದ್ಯಾನ ಇರುವ ಕಾರಣ ಪ್ರವಾಸಿಗರನ್ನು ಸೆಳೆಯಲು ಇದು ಸೂಕ್ತವಾದ ಜಾಗವಾಗಿದೆ. ಇದರ ಜತೆಗೆ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಕೆಲವು ಜಾಗಗಳಿಗೆ ಸಫಾರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೆ ಪ್ರವಾಸಿಗರನ್ನು ಸೆಳೆಯಬಹುದು
ವಿ.ಬಿ.ಚಂದ್ರು ವಂದಾರಗುಪ್ಪೆ ಚನ್ನಪಟ್ಟಣ
ಆರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಉದ್ಯಾನ ಈ ರೀತಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಜಿಲ್ಲೆಯ ನಿವಾಸಿಗಳು ಸಹ ರಜಾ ದಿನ ಕಳೆಯಲು ಸೂಕ್ತವಾದ ಜಾಗ. ಉತ್ತಮ ಪ್ರವಾಸಿ ತಾಣವಾಗಿ ಮಾಡಬಹುದಾದ ಜಾಗವನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುವ ಅವಶ್ಯ ಇದೆ
ಎಚ್.ಮಂಗಳಮ್ಮ ಹೋರಾಟಗಾರ್ತಿ ಚನ್ನಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT