ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು

Published 15 ಆಗಸ್ಟ್ 2023, 4:12 IST
Last Updated 15 ಆಗಸ್ಟ್ 2023, 4:12 IST
ಅಕ್ಷರ ಗಾತ್ರ

ರಾಮನಗರ: ಭಾರತದ ಸ್ವಾತಂತ್ರ್ಯ ಹೋರಾಟದ ಸಾಗರದಲ್ಲಿ ಲೆಕ್ಕವಿಲ್ಲದಷ್ಟು ತೊರೆಗಳು ಸೇರಿವೆ. ಹಳ್ಳಿಯಿಂದಿಡಿದು ದಿಲ್ಲಿಯವರೆಗೆ ಹೊತ್ತಿಕೊಂಡಿದ್ದ ಸ್ವಾತಂತ್ರ್ಯದ ಕಿಡಿಯು, ಕಡೆಗೂ ಬ್ರಿಟಿಷರು ಭಾರತ ಬಿಟ್ಟು ತೊಲಗುವಂತೆ ಮಾಡಿತು. 1947ರಲ್ಲಿ ದೇಶದ ಸ್ವಾಭಿಮಾನದ ತ್ರಿವರ್ಣವು ಹಾರಾಡಿತು.

ಸ್ವಾತಂತ್ರ್ಯ ಹೋರಾಟ ಕಿಚ್ಚು ಅಂದಿನ ಮೈಸೂರು ರಾಜ್ಯದ ಭಾಗವಾಗಿದ್ದ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದಲ್ಲಿ ಜೋರಾಗಿತ್ತು. ಸ್ವರಾಜ್ಯಕ್ಕಾಗಿ ಈ ಭಾಗದ ಅನೇಕರು ಹೋರಾಟಕ್ಕೆ ಧುಮುಕಿದ್ದರು. ಮಹಾತ್ಮ ಗಾಂಧೀಜಿ ಅವರು ಸಹ ಈ ಭಾಗದಲ್ಲಿ ಸಂಚರಿಸಿ, ಭಾಷಣ ಮಾಡಿ ಹೋರಾಟದ ಕಾವನ್ನು ಹೆಚ್ಚುವಂತೆ ಮಾಡಿದ್ದರು.

ಈ ಭಾಗದ ಸ್ವಾತಂತ್ರ್ಯ ಹೋರಾಟದಲ್ಲಿ 1938ರ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹವು ದೇಶದ ಗಮನ ಸೆಳೆದಿತ್ತು. ಅದರ ಯಶಸ್ಸಿಗೆ ಜಿಲ್ಲೆಯ ಭಾಗದ ಹೋರಾಟಗಾರರು ಸಹ ಕೈ ಜೋಡಿಸಿದ್ದರು. 

ಗಾಂಧೀಜಿ ಅವರ ಆತ್ಮೀಯರಾಗಿದ್ದ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ವಿ. ವೆಂಕಟಪ್ಪನವ ಮೂಲಕವೇ ಅಂದಿನ ಕ್ಲೋಸ್‍ಪೇಟೆಯಾಗಿದ್ದ ಇಂದಿನ ರಾಮನಗರದಲ್ಲಿ ತಮ್ಮ ಅಭಿಯಾನಕ್ಕಾಗಿ ನಿಧಿ ಸಂಗ್ರಹ ಪ್ರವಾಸ ಮಾಡುತ್ತಾರೆ. ಸತ್ಯಾಗ್ರಹಿಗಳನ್ನು ಭೇಟಿ ಮಾಡುತ್ತಾರೆ. ರಾಮನಗರದ ಗಾಂಧಿ ಎನಿಸಿಕೊಂಡಿದ್ದ ಗಾಂಧಿ ಕೃಷ್ಣಪ್ಪನವರ ಮನೆಯಲ್ಲಿ ಗಾಂಧೀಜಿ ವಾಸ್ತವ್ಯ ಮಾಡುತ್ತಾರೆ.

ನಂತರ, ಈಗಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಎಳನೀರು ಕುಡಿದು ನಡೆದು ಹೊರಡುವ ಅವರು, ಕಟ್ಟಡವೊಂದರ ಬಳಿ ಹೋರಾಟಗಾರರನ್ನು ಉದ್ದೇಶಿಸಿ ಭಾಷಣ ಕೂಡ ಮಾಡಿದ್ದರು ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ, ಈ ರಸ್ತೆಗೆ ಎಂ.ಜಿ. ರಸ್ತೆ ಬಂದು ಎನ್ನುತ್ತಾರೆ. ತಲೆಮಾರುಗಳಿಂದ ತಲೆಮಾರಿಗೆ ಹರಿದು ಬಂದಿರುವ ಈ ಮಾಹಿತಿಗೆ ದಾಖಲೆಗಳಿಲ್ಲ ಎಂಬುದು ಬೇಸರದ ಸಂಗತಿ.

‘ಚರಿತ್ರೆ ಬರೆಯುವುದು ಸವಾಲಿನ ಕೆಲಸವೇ ಸರಿ. ಶಿವಪುರ ಧ್ವಜ ಸತ್ಯಾಗ್ರಹದಿಂದಿಡಿದು ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯವರು ನೇರವಾಗಿ ಭಾಗವಹಿಸಿದ್ದಾರೆ. ಗಾಂಧೀಜಿ ಜೊತೆ ಸಂಪರ್ಕ ಹೊಂದಿದವರೂ ಇದ್ದರು. ಆದರೆ, ಈಗ ಅವರ‍್ಯಾರೂ ಇಲ್ಲ. ಬಾಯಿಂದ ಬಾಯಿಗೆ ಹೋರಾಟದ ಚರಿತ್ರೆಯ ತುಣುಕುಗಳು ಹರಿದು ಬಂದಿರುವುದರನ್ನು ಬಿಟ್ಟರೆ, ಅದನ್ನು ದಾಖಲೆ ಸಮೇತ ಸಂಗ್ರಹಿಸುವ ಕೆಲಸಗಳು ನಡೆದಿಲ್ಲ. ಸ್ಮಾರಕ ನಿರ್ಮಾಣವೂ ಅಂದು ಯಾರಿಗೂ ಹೊಳೆಯಲಿಲ್ಲ. ಇಂದಿಗೂ ಯಾರಲ್ಲೂ ಆ ಕಳಕಳಿ ಇಲ್ಲ. ಆದರೂ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಜಿಲ್ಲೆಯವರನ್ನು ಸ್ವಾತಂತ್ರ್ಯ ದಿನದದಂದು ಸ್ಮರಿಸಬೇಕು. ಅದುವೇ ನಾವು ಕೊಡುವ ನಿಜವಾದ ಗೌರವ’ ಎಂದು ಸಾಹಿತಿ ಡಾ. ಎಂ. ಭೈರೇಗೌಡ ಹೇಳಿದರು.

ಇಬ್ಬರಿಗೆ ಸನ್ಮಾನ

ಜಿಲ್ಲೆಯಲ್ಲಿ ಜೀವಂತವಿದ್ದ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಇತ್ತೀಚೆಗೆ ಕನಕಪುರದ ಕೊತ್ತನೂರು ಗ್ರಾಮದ ಮೂಲೆಕೇರಿ ಮರಿಯಪ್ಪ ನಿಧನರಾದರು. ಸದ್ಯ ನಮ್ಮೊಂದಿಗೆ ಇರುವ ದೊಡ್ಡಾಲಹಳ್ಳಿಯ ಪುಟ್ಟಸ್ವಾಮಿ ಮತ್ತು ಬೂದನಗುಪ್ಪೆಯ ಕರಿಯಪ್ಪ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಪ್ರಜಾವಾಣಿ ತಂಡ: ಓದೇಶ ಸಕಲೇಶಪುರ, ದೊಡ್ಡಬಾಣಗೆರೆ ಮಾರಣ್ಣ, ಎಚ್‌.ಎಂ. ರಮೇಶ್, ಬರಡನಹಳ್ಳಿ ಕೃಷ್ಣಮೂರ್ತಿ

ಕಾನಕಾನಳ್ಳಿಗೆ ಬಂದಿದ್ದ ಬಾಪು

ಕನಕಪುರ: ಸರ್ದಾರ್ ವೆಂಕಟರಾಮಯ್ಯ ಅವರಲ್ಲಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಬೆರಗಾಗಿದ್ದ ಗಾಂಧೀಜಿ ಕಾನಕಾನಳ್ಳಿಗೆ ಭೇಟಿ ನೀಡಿದ್ದರು.

ಹಾರೋಹಳ್ಳಿ ಎಚ್.ಎಸ್. ದೊರೆಸ್ವಾಮಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.

1940ರಲ್ಲಿ ಕರಿಯಪ್ಪ ಕನಕಪುರದಲ್ಲಿ ರೂರಲ್ ಎಜುಕೇಷನ್ ಸೊಸೈಟಿ ಪ್ರಾರಂಭಿಸಿದ್ದರು. ಅವರು ಸ್ವಾತಂತ್ರ ಹೋರಾಟದ ಚಳವಳಿಗೆ ಸೊಸೈಟಿಯನ್ನು ಕೇಂದ್ರ ಸ್ಥಾನವಾಗಿ ಮಾಡಿಕೊಂಡಿದ್ದರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ, ಗಾಂಧೀಜಿ ಕರೆ ಮೇರೆಗೆ ಕರ ನಿರಾಕರಿಸಿ ಪ್ರತಿಭಟಿ ಸಲಾಗಿತ್ತು. ಸೋರೆಕಾಯಿದೊಡ್ಡಿ, ವೆಂಕಟರಾಯನದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಹೋರಾಟವು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದಾಗಿ, ಬ್ರಿಟಿಷ್ ಸರ್ಕಾರ ಎರಡು ಗ್ರಾಮಗಳ ಮೇಲೆ ಭೂ ಕಂದಾಯದ ಜೊತೆಗೆ ಪುಂಡ ಕಂದಾಯವನ್ನು ವಿಧಿಸಿತ್ತು ಎನ್ನುತ್ತವೆ ಚರಿತ್ರೆಯ ಪುಟಗಳು.

ಹೋರಾಟದ ಸ್ಮಾರಕ ಗಾಂಧಿ ಭವನ

ಚನ್ನಪಟ್ಟಣ: ನಗರದಲ್ಲಿರುವ ಗಾಂಧಿ ಸ್ಮಾರಕ ಭವನ ಸ್ವಾತಂತ್ರ್ಯ ಹೋರಾಟದ ಕುರುಹಿನ ಏಕೈಕ ಸ್ಮಾರಕವಾಗಿದೆ. ಗಾಂಧೀಜಿಯವರು 1936ರಲ್ಲಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರ ಸವಿನೆನಪಿಗಾಗಿ ಬೆಂಗಳೂರು– ಮೈಸೂರು ಹೆದ್ದಾರಿಯ ಪಕ್ಕ ಭವನವನ್ನು ನಿರ್ಮಿಸಲಾಗಿದೆ. ಗಾಂಧೀಜಿ ಅವರು ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರ ಸಭೆಯನ್ನು ಈ ಜಾಗದಲ್ಲಿ ನಡೆಸಿದ್ದರು ಎನ್ನುತ್ತದೆ ಇತಿಹಾಸ.

ಕುವೆಂಪುನಗರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಆರ್ಯಪುತ್ರ ಎಂಬುವರು ಈಗಿರುವ ಗಾಂಧಿ ಭವನದ ಖಾಲಿ ಜಾಗದಲ್ಲಿ ಗುಡಿಸಲೊಂದನ್ನು ಹಾಕಿಕೊಂಡು ಗಾಂಧೀಜಿ ಬರುವಿಕೆಗಾಗಿ ಕಾದಿದ್ದರು. ಆಗ ಗಾಂಧೀಜಿಯವರು ಕರ್ನಾಟಕ ಪ್ರವಾಸ ಮಾಡಿಕೊಂಡು ಮೈಸೂರು ಮಾರ್ಗವಾಗಿ ಚನ್ನಪಟ್ಟಣಕ್ಕೆ ಬಂದಾಗ, ಆರ್ಯಪುತ್ರ ನಿವಾಸಕ್ಕೆ ಭೇಟಿ ನೀಡಿದ್ದರು.

ತಿಟ್ಟಮಾರನಹಳ್ಳಿ ವಿ.ವೆಂಕಟಪ್ಪ, ಕೆಂಗಲ್ ಹನುಮಂತಯ್ಯ, ಅಬ್ಬೂರು ಗೋಪಣ್ಣ, ಮತ್ತೀಕೆರೆ ಡಿ.ಲಿಂಗಯ್ಯ, ನಾಗವಾರ ಎನ್.ತಿಮ್ಮಯ್ಯ, ಅಬ್ಬೂರು ಕೃಷ್ಣಮೂರ್ತಿ, ಸಿಂಗರಾಜಪುರದ ಎಸ್.ಸಿ. ಲಿಂಗಪ್ಪ ಅವರು ಸೇರಿದಂತೆ ಹೋರಾಟಗಾರರ ಜೊತೆ ಸಭೆಯೊಂದನ್ನು ನಡೆಸಿದ್ದರು.

1950ರಲ್ಲಿ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಗಾಂಧಿ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಕಟ್ಟಡದ ನಿರ್ಮಾಣದ ಉಸ್ತುವಾರಿಯನ್ನು ಹೋರಾಟಗಾರ ವಿ. ವೆಂಕಟಪ್ಪ ಅವರಿಗೆ ವಹಿಸಲಾಗಿತ್ತು. ಕೆಲ ವರ್ಷ ಕಟ್ಟಡದಲ್ಲಿ ಗ್ರಂಥಾಲಯವಿತ್ತು. ನಂತರ ಬೇರೆಡೆಗೆ ಸ್ಥಳಾಂತರಗೊಂಡಿತು.

ಸ್ವಾತಂತ್ರ್ಯ ಹೋರಾಟದ ನಂಟಿರುವ ಕಟ್ಟಡ ಇದೀಗ, ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ. ಕಟ್ಟಡವನ್ನು ಕೆಡವಿ ಸುಸಜ್ಜಿತವಾದ ಭವನ ನಿರ್ಮಾಣಕ್ಕೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹5 ಕೋಟಿ ಅನುದಾನ ಬಿಡುಗಡೆಯಾಗಿದೆ.

ಆದರೆ, ಜಾಗ ಗಾಂಧಿಭವನದ ಹೆಸರಿನಲ್ಲಿ ಇಲ್ಲದ ಕಾರಣ ಕಟ್ಟಡ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಗಾಂಧಿ ಭವನ ನಿರ್ಮಾಣ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ. ಆದರೂ, ಭವನ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ.

ನಿರ್ವಹಣೆ ಇಲ್ಲದೆ ಸೊರಗಿರುವ ಚನ್ನಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಗಾಂಧಿ ಸ್ಮಾರಕ ಭವನ
ನಿರ್ವಹಣೆ ಇಲ್ಲದೆ ಸೊರಗಿರುವ ಚನ್ನಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಗಾಂಧಿ ಸ್ಮಾರಕ ಭವನ
ರಾಮನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT