ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲು ಡಿಕ್ಕಿ: ಇಯರ್ ಫೋನ್ ಹಾಕಿಕೊಂಡು ಹಳಿ ಮೇಲೆ ಹೋಗುತ್ತಿದ್ದ ಯುವಕ ಸಾವು

Published 28 ಜೂನ್ 2024, 13:32 IST
Last Updated 28 ಜೂನ್ 2024, 13:32 IST
ಅಕ್ಷರ ಗಾತ್ರ

ಬಿಡದಿ: ಕಿವಿಗೆ ಇಯರ್ ಫೋನ್ ಹಾಕಿಕೊಂಡು ರೈಲು ಹಳಿಗೆ ಹೊಂದಿಕೊಂಡಂತೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲೊಂದು ಡಿಕ್ಕಿ ಹೊಡೆದಿದ್ದರಿಂದ, ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ರೈಲು ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆಚಿಟ್ಟನಹಳ್ಳಿಯ ಎ.ಎಸ್. ಶ್ರೀನಿವಾಸ್ (26) ಮೃತ ಯುವಕ.

ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ಬೆಳಿಗ್ಗೆ ಬಿಡದಿ ನಿಲ್ದಾಣಕ್ಕೆ ರೈಲೊಂದರಲ್ಲಿ ಬಂದಿಳಿದಿದ್ದರು. ನಂತರ, ಕಿವಿಗೆ ಇಯರ್ ಫೋನ್ ಹಾಕಿಕೊಂಡು ‌ನಿಲ್ದಾಣದಿಂದ ಅನತಿ ದೂರದಲ್ಲಿ ಹಳಿ‌ಗೆ ಹೊಂದಿಕೊಂಡಂತೆ ನಡೆದುಕೊಂಡು ಹೋಗುತ್ತಿದ್ದರು.

ಆಗ, ಅದೇ ಮಾರ್ಗದಲ್ಲಿ ಬಂದಿರುವ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಇಯರ್ ಫೋನ್ ಹಾಕಿದ್ದರಿಂದಾಗಿ ಶ್ರೀನಿವಾಸ್ ಅವರಿಗೆ ರೈಲು ಬಂದಿರುವುದು ಗೊತ್ತಾಗಿಲ್ಲ. ಡಿಕ್ಕಿಯ ರಭಸಕ್ಕೆ ಅವರು ಹಳಿ ಪಕ್ಕಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಘಟನೆಯು ನಿಲ್ದಾಣದ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಚನ್ನಪಟ್ಟಣ ರೈಲ್ವೆ ಠಾಣೆ ಪೊಲೀಸರು ತಿಳಿಸಿದರು.

ಮಧ್ಯಾಹ್ನ 12ರ ಸುಮಾರಿಗೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಶವವನ್ನು ಗಮನಿಸಿ ನಿಲ್ದಾಣದ ಅಧಿಕಾರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ, ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಕುಟುಂಬದವರಿಗೆ ವಿಷಯ ತಿಳಿಸಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT