ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಪತ್ರಿಕೆ ವಿತರಕರಿಗೆ ಅಪಘಾತ ಪರಿಹಾರ

Published 22 ಡಿಸೆಂಬರ್ 2023, 5:18 IST
Last Updated 22 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ರಾಮನಗರ: ಅಸಂಘಟಿತ ವಲಯದ ಕಾರ್ಮಿಕರಲ್ಲಿ ಒಬ್ಬರಾಗಿರುವ ಪತ್ರಿಕಾ ವಿತರಿಸುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಕಡೆಗೂ ಸ್ಪಂದಿಸಿದೆ. ನಸುಕಿನಲ್ಲಿ ಮನೆಮನೆಗೆ ಸುದ್ದಿ ತಲುಪಿಸುವ ವಿತರಕರಿಗೆ ಅಪಘಾತ ಪರಿಹಾರದ ಜೊತೆಗೆ, ವೈದ್ಯಕೀಯ ಚಿಕಿತ್ಸೆಗೆ ಸಹಾಯಹಸ್ತ ಚಾಚಿದೆ.

ಸಾಮಾಜಿಕ ಭದ್ರತೆ ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರರ್ತರ ಸಂಘ ಹಾಗೂ ವಿತರಕರ ಸಂಘವು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದವು. ಅಸಂಘಟಿತರಿಗೆ ಭದ್ರತೆ ನೀಡುವ ಬೇಡಿಕೆಗೆ ಸರ್ಕಾರ ಅಸ್ತು ಎಂದಿತ್ತು. ಅದರ ಬೆನ್ನಲ್ಲೇ, ವಿತರಕರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವ್ಯಾಪ್ತಿಗೆ ಸೇರಿಸಿ ಕಾರ್ಮಿಕ ಇಲಾಖೆ ನ. 22ರಂದು ಆದೇಶ ಹೊರಡಿಸಿತ್ತು.

ಭದ್ರತೆ ಸಿಕ್ಕಂತಾಯಿತು: ‘ನಸುಕಿನಲ್ಲಿ ಜನ ಸುಖನಿದ್ರೆಯಲ್ಲಿದ್ದರೆ, ಪತ್ರಿಕೆ ವಿತರಣೆ ಮಾಡುವ ಕಾರ್ಮಿಕರು ಚುಮು ಚುಮು ಚಳಿ ಲೆಕ್ಕಿಸದೆ ದಿನಪತ್ರಿಕೆಗಳ ಮುದ್ರಣಾಲಯದಿಂದ ಬರುವ ದಿನಪತ್ರಿಕೆಗಳನ್ನು ಮನೆ ಹಾಗೂ ಕಚೇರಿಗಳಿಗೆ ತಲುಪಿಸುವ ಕೆಲಸವನ್ನು ಆರಂಭಿಸುತ್ತಾರೆ. ಸರ್ಕಾರದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಚಿಕಿತ್ಸೆ ಆದೇಶದಿಂದ ನಮಗೆ ಭದ್ರತೆ ಭಾವ ಬಂದಿದೆ’ ಎಂದು ರಾಮನಗರದ ಹಿರಿಯ ಪತ್ರಿಕಾ ವಿತರಕ ತ್ರಿಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಿನಪತ್ರಿಕೆ ಹಾಕುವ ಕಾಯಕದಲ್ಲಿ ವಿದ್ಯಾರ್ಥಿಗಳಿಂದಿಡಿದು ವಯಸ್ಕರವರೆಗೆ ಹಲವರು ತೊಡಗಿಸಿಕೊಂಡಿದ್ದಾರೆ. ಸೈಕಲ್ ಮತ್ತು ಬೈಕ್‌ಗಳಲ್ಲಿ ಬೆಳಗ್ಗಿನ ಜಾವ ಹೊರಡುವ ಕಾರ್ಮಿಕರು, ಜನ ನಿದ್ರೆಯಿಂದ ಎದ್ದು ಮನೆ ಬಾಗಿಲು ತೆಗೆಯುವ ಹೊತ್ತಿಗೆ ದಿನಪತ್ರಿಕೆಗಳನ್ನು ತಲುಪಿಸಿರುತ್ತಾರೆ. ಹೆಚ್ಚೆಂದರೆ ನಸುಕಿನಲ್ಲಿ 5 ಗಂಟೆಯಿಂದ ಶುರುವಾಗುವ ನಮ್ಮ ಕೆಲಸ 7.30ರೊಳಗೆ ಮುಗಿಯಬೇಕು. ಸ್ವಲ್ಪ ತಡವಾದರೂ ಓದುಗರ ಅಸಹನೆಗೆ ಗುರಿಯಾಗುತ್ತೇವೆ’ ಎಂದರು.

ಕೇಳುವವರೇ ಇರಲಿಲ್ಲ: ‘ಪತ್ರಿಕೆ ವಿತರಣೆ ಕೆಲಸ ಮಾಡುವವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು. ಓದಿನ ಖರ್ಚು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅರೆಕಾಲಿಕವಾಗಿ ಈ ಕೆಲಸ ಮಾಡುತ್ತಿರುತ್ತಾರೆ. ನಸುಕಿನಲ್ಲಿ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಪತ್ರಿಕೆ ತಲುಪಿಸುವ ಇವರ ಬದುಕಿಗೆ ಯಾವುದೇ ಭದ್ರತೆ ಇರಲಿಲ್ಲ. ಅಪಘಾತ ಮತ್ತು ಅನಾರೋಗ್ಯವಾದರೆ ಕೇಳುವವರೇ ಇರಲಿಲ್ಲ’ ಎಂದು ಕನಕಪುರದ ನರಸಿಂಹಮೂರ್ತಿ ಹೇಳಿದರು.

‘ಕೆಲಸ ಮಾಡುವಾಗ ಎಷ್ಟೋ ಕಾರ್ಮಿಕರು ಅಪಘಾತಕ್ಕೀಡಾಗಿದ್ದಾರೆ. ಕೆಲವರು ಮೃತಪಟ್ಟಿದ್ದರೆ, ಉಳಿದವರು ಗಾಯಗೊಂಡಿದ್ದಾರೆ. ಪತ್ರಿಕಾ ಏಜೆಂಟರ ಬಳಿ ಕೆಲಸ ಮಾಡುವ ಅವರಿಗೆ ಏಜೆಂಟರು ಕೂಡ ಪರಿಹಾರ ನೀಡುವಷ್ಟು ಶಕ್ತರಿರುವುದಿಲ್ಲ. ಹಾಗಾಗಿ, ಸರ್ಕಾರವೇ ನಮಗೆ ಸಾಮಾಜಿಕ ಭದ್ರತೆ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿದ್ದೆವು. ಇದೀಗ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿರುವುದು ಖುಷಿಯ ವಿಚಾರ’ ಎಂದರು.

ತ್ರಿಮೂರ್ತಿ ಪತ್ರಿಕಾ ವಿತರಕರು ರಾಮನಗರ
ತ್ರಿಮೂರ್ತಿ ಪತ್ರಿಕಾ ವಿತರಕರು ರಾಮನಗರ
ನರಸಿಂಹಮೂರ್ತಿ ಪತ್ರಿಕಾ ವಿತರಕರು ಕನಕಪುರ
ನರಸಿಂಹಮೂರ್ತಿ ಪತ್ರಿಕಾ ವಿತರಕರು ಕನಕಪುರ
ಸುಭಾಷ್ ಎಂ. ಆಲದಕಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮನಗರ ಜಿಲ್ಲೆ
ಸುಭಾಷ್ ಎಂ. ಆಲದಕಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮನಗರ ಜಿಲ್ಲೆ

Highlights - ಅಂಕಿ ಅಂಶ ₹2 ಲಕ್ಷಅಪಘಾತದಲ್ಲಿ ಮೃತಪಟ್ಟರೆ ಸಿಗುವ ಪರಿಹಾರ₹2 ಲಕ್ಷಅಪಘಾತದಲ್ಲಿ ಶಾಶ್ವತ ಅಂಗವಿಕಲರಾದರೆ ಸಿಗುವ ಪರಿಹಾರ ಮೊತ್ತ₹1 ಲಕ್ಷಅಪಘಾತದ ಚಿಕಿತ್ಸೆ ಅಥವಾ ಗಂಭೀರ ಕಾಯಿಲೆಗೆ ಸಿಗುವ ಚಿಕಿತ್ಸಾ ವೆಚ್ಚ

Quote - ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವವರ ಬದುಕಿಗೆ ಭದ್ರತೆ ಕೊಡಿ ಎಂಬ ನಮ್ಮ ಕೂಗನ್ನು ಸರ್ಕಾರ ಆಲಿಸಿರುವುದು ಸಂತಸದ ವಿಷಯ. ಕಡೆಗೂ ನಮ್ಮ ಬದುಕಿಗೆ ಭದ್ರತೆ ಸಿಕ್ಕಿದೆ - ತ್ರಿಮೂರ್ತಿ ಪತ್ರಿಕಾ ವಿತರಕರು ರಾಮನಗರ

Quote - ಅಸಂಘಟಿತರಾಗಿಯೇ ಇದ್ದ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾದುದು. ನಮಗೆಲ್ಲಾ ಖುಷಿಯ ವಿಚಾರವಿದು - ನರಸಿಂಹಮೂರ್ತಿ ಪತ್ರಿಕಾ ವಿತರಕರು ಕನಕಪುರ

Cut-off box - ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ * ಕರ್ನಾಟಕದ ನಿವಾಸಿಯಾಗಿರಬೇಕು.* 16ರಿಂದ 59 ವರ್ಷದೊಳಗಿನವರಾಗಿಬೇಕು.* ಕೇಂದ್ರ ಸರ್ಕಾರದ ಇ–ಶ್ರಮ್ ಪೋರ್ಟಲ್‌ನಲ್ಲಿ ‘ನ್ಯೂಸ್ ಪೇಪರ್ ಬಾಯ್’ ಎಂಬ ವರ್ಗದಡಿ ನೋಂದಣಿಯಾಗಿರಬೇಕು.* ಆದಾಯ ತೆರಿಗೆ ಪಾವತಿದಾರರಾಗಿರಬಾರದು.* ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು.

Cut-off box - ‘ನೋಂದಣಿಗೆ ವಿಶೇಷ ಅಭಿಯಾನ’ ‘ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಭರಿಸುವ ಯೋಜನೆಗೆ ‘ಇ–ಶ್ರಮ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ಕಾರ್ಮಿಕರಿಗೆ ಈ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದಲ್ಲಿ ನೋಂದಣಿಗೆ ವಿಶೇಷ ಅಭಿಯಾನ ನಡೆಸಲಾಗುವುದು. ಪತ್ರಿಕೆ ವಿತರಿಸುವ ಕಾರ್ಮಿಕರೆಲ್ಲರನ್ನು ನಿಗದಿತ ಸ್ಥಳದಲ್ಲೇ ಸೇರಿಸಿ ಇಲಾಖೆಯ ಸಿಬ್ಬಂದಿ ಅಲ್ಲಿಗೆ ತೆರಳಿ ನೋಂದಣಿ ಕಾರ್ಯ ಮುಗಿಸುತ್ತಾರೆ. ಇದರಿಂದಾಗಿ ನೋಂದಣಿ ಕಾರ್ಯವೂ ಬೇಗನೆ ಮುಗಿಯುತ್ತದೆ. ಈ ಕುರಿತು ಪತ್ರಿಕಾ ವಿತರಕರನ್ನು ಸಂಪರ್ಕಿಸಲಾಗಿದ್ದು ಸದ್ಯದಲ್ಲೇ ನೋಂದಣಿ ಅಭಿಯಾನ ಶುರು ಮಾಡಲಾಗುವುದು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT