ಗುರುವಾರ , ಆಗಸ್ಟ್ 11, 2022
26 °C

ಗುರಿ ಸಾಧನೆಗೆ ದೃಢ ನಿರ್ಧಾರ ಅಗತ್ಯ: ಕೆ.ಎನ್‌‌. ರಮೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಸಾಧನೆ ಮತ್ತು ಸೇವೆ ನಿಂತ ನೀರಾಗಬಾರದು. ಅದು ಹರಿಯುವ ನೀರಿನಂತಾಗಬೇಕು. ಎಲ್ಲರಿಂದಲೂ ಸೇವೆ ಸಿಗಬೇಕು’ ಎಂದು ಡಿವೈಎಸ್‌ಪಿ ಕೆ.ಎನ್‌‌. ರಮೇಶ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ರಮೇಶ್‌ ಚಾರಿಟಬಲ್‌ ಟ್ರಸ್ಟ್‌ನಿಂದ ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಗುರುವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ದೃಢ ನಿರ್ಧಾರದೊಂದಿಗೆ ನಾವು ಪ್ರಯತ್ನಿಸಿದಾಗ ನಮ್ಮ ಗುರಿ ತಲುಪುತ್ತೇವೆ. ಇದಕ್ಕೆ ಇಂದು ಸನ್ಮಾನಿತರಾಗುತ್ತಿರುವ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಎಲ್ಲರಿಗೂ ಸಮಾನವಾಗಿ ಶಿಕ್ಷಣ ನೀಡಿರುತ್ತಾರೆ. ಯಾರು ಆಸಕ್ತಿಯಿಂದ ಕೇಳಿರುತ್ತಾರೋ, ತಂದೆ, ತಾಯಿಯರ ಸಂಕಷ್ಟ ಅರ್ಥ ಮಾಡಿಕೊಂಡಿರುತ್ತಾರೋ ಅಂತಹ ಮಕ್ಕಳು ಗುರಿ ತಲುಪಿರುತ್ತಾರೆ. ಇದು ಇಲ್ಲಿಗೆ ನಿಲ್ಲಬಾರದು. ನಿಮ್ಮ ಪ್ರಯತ್ನವು ಗುರಿ ಮುಟ್ಟುವವರೆಗೂ ಸಾಗಬೇಕು ಎಂದು ಸಲಹೆ
ನೀಡಿದರು.

ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಮಾತನಾಡಿ, ‘ಮಕ್ಕಳು ಶೇಕಡ 100ರಷ್ಟು ಅಂಕ ಪಡೆದು ಸಾಧನೆ ಮಾಡಿದಾಗ, ಶಾಲೆಗೆ ಶೇಕಡ 100 ಫಲಿತಾಂಶ ಬಂದಾಗ ಶಿಕ್ಷಕರಿಗೆ ಆಗುವ ಸಂತೋಷಕ್ಕೆ ಮಿತಿ ಇರುವುದಿಲ್ಲ. ಸಂತೋಷ ಏನೆಂಬುದು ಆ ಶಿಕ್ಷಕರಿಗೆ ಮಾತ್ರ ಗೊತ್ತಾಗುತ್ತದೆ. ನಾನು ಒಬ್ಬ ಶಿಕ್ಷಕನಾಗಿದ್ದರಿಂದ ಅಂತಹ ಸಂತೋಷ ಅನುಭವಿಸಿದ್ದೇನೆ’ ಎಂದು
ಹೇಳಿದರು.

ಶಿಕ್ಷಕರಾಗಲಿ, ವಿದ್ಯಾರ್ಥಿಗಳಾಗಲಿ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಬರಲು ಸಾಧ್ಯ. ಸಾಧನೆ ಎನ್ನುವುದು ಯಾರಿಗೂ ಸುಮ್ಮನೆ ಸಿಗುವುದಿಲ್ಲ. ಇಂದು ಏನು ಸಾಧನೆ ಮಾಡಿದ್ದೀರೋ ಅದು ನಿಮ್ಮ ಜೀವನದ ಅಡಿಪಾಯ. ಇದರ ಮೇಲೆ ಮುಂದೆ ಭವಿಷ್ಯವನ್ನು ಗಟ್ಟಿಯಾಗಿ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಹೋರಾಟ ನಡೆಸುತ್ತಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನ ಪಡೆಯುವ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ನಿಮ್ಮ ಸಹಾಯಕ್ಕೆ ಇವರೆಲ್ಲಾ ಬಂದಿದ್ದಾರೆ. ಸಮಾಜದಲ್ಲಿ ನೀವು ಉನ್ನತ ಸ್ಥಾನಕ್ಕೆ ತಲುಪಿದಾಗ ಯಾರಿಗೆ ಸಹಾಯದ ಅವಶ್ಯಕತೆ ಇರುತ್ತದೋ ಅವರಿಗೆ ಸಹಾಯ ಮಾಡಬೇಕು. ಸೇವೆ ಎಂಬುದು ನಿರಂತರವಾಗಿ ನಡೆಯಬೇಕು ಎಂದು
ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 95ಕ್ಕಿಂತ ಹೆಚ್ಚು ಅಂಕಗಳಿಸಿದ ತಾಲ್ಲೂಕಿನ 157 ವಿದ್ಯಾರ್ಥಿಗಳು ಮತ್ತು ಶೇಕಡ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ನಗರಸಭೆ ಪೌರಾಯುಕ್ತೆ ಬಿ. ಶುಭಾ, ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ, ಸಬ್‌ ಇನ್‌ಸ್ಪೆಕ್ಟರ್‌ ಉಷಾನಂದಿನಿ, ಉದ್ಯಮಿ ಗುಂಡಣ್ಣ, ರಮೇಶ್‌ ಚಾರಿಟಬಲ್‌ ಟ್ರಸ್ಟ್‌ನ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು