ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಕ್ಕೆ ಕಡಿವಾಣ: ಸುರಕ್ಷತೆಗೆ ಆದ್ಯತೆ

ನೂತನ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಗಿರೀಶ್‌ ಹೇಳಿಕೆ
Last Updated 15 ಸೆಪ್ಟೆಂಬರ್ 2020, 15:03 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಬದ್ಧವಾಗಿದ್ದು, ಪೊಲೀಸರ ಸಂಘಟಿತ ದಾಳಿಗಳು ಮುಂದುವರಿಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್‌. ಗಿರೀಶ್‌ ಹೇಳಿದರು.

"ಹಿಂದೆ ವಿವಿಧೆಡೆ ಕೆಲಸ ಮಾಡಿದ ಅನುಭವ ನನಗಿದೆ. ಸದ್ಯ ಜಿಲ್ಲೆಯಲ್ಲಿ ಅಧಿಕಾರಿಗಳ ಉತ್ತಮ ತಂಡವಿದೆ. ಕಾನೂನು ಸುವ್ಯಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಹಿಂದಿನ ಎಸ್ಪಿ ಅನೂಪ್ ಶೆಟ್ಟಿ ಉತ್ತಮ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಜೂಜು, ಅಕ್ರಮ ಮದ್ಯ ಮಾರಾಟ, ಮರಳು ಗಣಿಗಾರಿಕೆ ಸೇರಿದಂತೆ ಯಾವುದೇ ಸಕ್ರಮ ಎಲ್ಲ ಅಕ್ರಮ ಚಟುವಟಿಕೆಗಳ ಮೇಲಿನ ದಾಳಿ ಮುಂದುವರಿಯಲಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡ್ರಗ್ಸ್‌ಗೆ ಕಡಿವಾಣ: ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಸೇರಿದಂತೆ ಮಾದಕ ವಸ್ತು ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 15 ದಿನಗಳಲ್ಲಿ ಸುಮಾರು 100 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಮಾರಾಟ ವ್ಯವಸ್ಥೆಗೆ ಪೂರೈಕೆ ಮಾಡುವವರ ಮೇಲೂ ಕ್ರಮ ಕೈಗೊಂಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ದಾಳಿಗಳನ್ನು ಸಂಘಟಿಸುತ್ತಿದ್ದೇವೆ. ಇಂತಹ ವಸ್ತುಗಳಿಂದ ಮಕ್ಕಳು ದೂರ ಉಳಿಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ. ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು ಎಂದು ಸಲಹೆ ನೀಡಿದರು.

ಸುರಕ್ಷತೆಗೆ ಆದ್ಯತೆ: ಸಾರ್ವಜನಿಕರ ಸುರಕ್ಷತೆಗೆ ಇಲಾಖೆ ಆದ್ಯತೆ ನೀಡಲಿದೆ. ಜನರು ತಮ್ಮಲ್ಲಿರುವ ಹೆಚ್ಚಿನ ಹಣ ಮತ್ತು ಒಡವೆಯನ್ನು ಮನೆಯಲ್ಲೇ ಇಟ್ಟುಕೊಳ್ಳುವುದಕ್ಕಿಂತ ಬ್ಯಾಂಕ್ ಲಾಕರ್‌ಗಳಲ್ಲಿ ಸುರಕ್ಷಿತವಾಗಿ ಇಡುವುದು ಉತ್ತಮ ಎಂದು ಸಲಹೆ ನೀಡಿದರು.

ಎಎಸ್ಪಿ ರಾಮರಾಜನ್, ಡಿವೈಎಸ್ಪಿ ಪುರುಷೋತ್ತಮ್, ಓಂ ಪ್ರಕಾಶ್, ವೈರ್‌ಲೆಸ್ ವಿಭಾಗದ ಇನ್‌ಸ್ಪೆಕ್ಟರ್‌ ಶಿವಕುಮಾರ್ ಇದ್ದರು.

ಹೊಯ್ಸಳ ಮಾದರಿ ಸೇವೆ

ಸಾರ್ವಜನಿಕರಿಗೆ ತಕ್ಷಣವೇ ಪೊಲೀಸ್ ಸೇವೆ ಒದಗಿಸಲು ಹೊಯ್ಸಳ ಮಾದರಿಯಲ್ಲಿ ಸೇವೆಯನ್ನು ಶೀಘ್ರ ಆರಂಭಿಸುವುದಾಗಿ ಎಸ್ಪಿ ಗಿರೀಶ್‌ ತಿಳಿಸಿದರು. 112 ಸಂಖ್ಯೆಗೆ ಕರೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ತೊಂದರೆಗೆ ಒಳಗಾಗಿರುವ ಸಾರ್ವಜನಿಕರಿಂದ ಕರೆ ಬಂದ ತಕ್ಷಣವೇ ಸಮೀಪದ ಪೊಲೀಸರು ನೆರವಿಗೆ ಧಾವಿಸಲಿದ್ದಾರೆ ಎಂದರು.

***
ಯಾವುದೇ ಒತ್ತಡಕ್ಕೆ ಮಣಿಯದೆಯೇ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತೇನೆ. ಅಗತ್ಯಬಿದ್ದಲ್ಲಿ ಸಾರ್ವಜನಿಕರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು

- ಎಸ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT