ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಸ್ಥಳ ಪ್ರಚಾರಕ್ಕೆ ಸಲಹೆ

ವಿಶ್ವ ಪ್ರವಾಸೋದ್ಯಮ ದಿನ ಪೂರ್ವಭಾವಿ ಸಭೆಯಲ್ಲಿ ಸಿಇಒ ದಿಗ್ವಿಜಯ್ ಸೂಚನೆ
Published 21 ಸೆಪ್ಟೆಂಬರ್ 2023, 6:03 IST
Last Updated 21 ಸೆಪ್ಟೆಂಬರ್ 2023, 6:03 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ ಸ್ಥಳಗಳ ಪ್ರಚಾರ ಮಾಡುವ ಮೂಲಕ, ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬೇಕು. ಇದಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶ್ವ ಪ್ರವಾಸೋದ್ಯಮ ದಿನದ (ಸೆ. 27) ಅಂಗವಾಗಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಾದ್ಯಂತ ಪ್ರವಾಸೋದ್ಯಮ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಂತೆ, ರಾಮನಗರದಲ್ಲೂ ಈ ದಿನವನ್ನು ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಈ ಸಲ ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಎಂಬ ಸಂದೇಶದಡಿ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಪ್ರವಾಸೋದ್ಯಮ ಕುರಿತು ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಕ್ಕಳಲ್ಲಿ ಪ್ರವಾಸೋದ್ಯಮ ಕುರಿತು ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

‘ಕಾರ್ಯಕ್ರಮದ ಅಂಗವಾಗಿ ರಾಮನಗರದ ಕೂಟಗಲ್ ಬಳಿ ಇರುವ ತಿಮ್ಮಪ್ಪನ ಬೆಟ್ಟದ ಬಳಿ ಗಿಡಗಳನ್ನು ನೆಡಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಕುರಿತು ಹಾಗೂ ರಾಮನಗರದ ಪ್ರವಾಸೋದ್ಯಮ ಪ್ರವರ್ತಕ ಸಂಘಗಳ ವತಿಯಿಂದ ಮಳಿಗೆಗಳನ್ನು ತೆರೆಯಬೇಕು’ ಎಂದು ಹೇಳಿದರು.

‘ಪ್ರವಾಸೋದ್ಯಮ ದಿನ ಕಾರ್ಯಕ್ರಮ ಆಯೋಜಿಸುವ ಮುನ್ನ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಸ್ಥಳೀಯ ಸಂಸ್ಥೆಗಳೊಂದಿಗೆ ಕೈಗೊಳ್ಳಬಹುದಾದ ಮುನ್ನೆಚರಿಕೆ ಕ್ರಮಗಳ ಕುರಿತು ಚರ್ಚಿಸಬೇಕು’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕುಮಾರ್ ಅವರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ್ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಪ್ರವರ್ತಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT