ಮಂಗಳವಾರ, ಸೆಪ್ಟೆಂಬರ್ 21, 2021
21 °C

ಚನ್ನಪಟ್ಟಣ: ಜನಪದ ಕಲೆ ಉಳಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಅಳಿವಿನಂಚಿನಲ್ಲಿರುವ ಜನಪದ ಕಲೆಗಳನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘ, ಸಂಸ್ಥೆಗಳ ಕಾರ್ಯ ಶ್ಲಾಘನೀಯವಾದುದು ಎಂದು ವಂದಾರಗುಪ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಮಾರ್ ಪ್ರಶಂಸಿಸಿದರು.

ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದ ಚಿಕ್ಕ ತಿರುಪತಿ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಪಂಚಮುಖಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬುಧವಾರ ನಡೆದ ಜನಪದ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಎಂದೆಂದಿಗೂ ಸಾವಿಲ್ಲದ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾದ ಜನಪದ ಕಲೆಗಳನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಲಾವಿದ ಜಯಸಿಂಹ ಮಾತನಾಡಿ, ಜನಪದ ಕಲೆ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಆ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಶ್ರಮಿಸುತ್ತಿದ್ದು ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಕಲೆ ಮತ್ತು ಸಂಸ್ಕೃತಿ ಉತ್ಸವದಂತಹ ಮಾನವೀಯ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೆಂಕಟರಮಣಸ್ವಾಮಿ ದೇವಾಲಯದ ಅರ್ಚಕ ಪುಟ್ಟಸ್ವಾಮೀಜಿ ಮಾತನಾಡಿ, ಸಂಘ, ಸಂಸ್ಥೆಗಳು ಜನಪದ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆ ಜೊತೆಗೆ ಕಲಾವಿದರನ್ನು ಬೆಳೆಸುವ ಮೂಲಕ ಸಮಾಜಮುಖಿಯಾಗಿ ಚಿಂತಿಸಬೇಕು. ತೆರೆಮರೆಯಲ್ಲಿ ನೂರಾರು ಕಲಾವಿದರಿದ್ದು ಅವರಿಗೆ ವೇದಿಕೆ ಕಲ್ಪಿಸಬೇಕು ಎಂದರು.

ಕಲಾವಿದರಾದ ರಾಂಪುರ ಸಿದ್ದರಾಜು ಮತ್ತು ತಂಡ, ತಂಬೂರಿ ಶಿವಣ್ಣ, ಮಲ್ಲಯ್ಯ, ರಘು ಮತ್ತು ತಂಡ ಜನಪದ, ತತ್ವಪದ, ವಚನಗಳ ಗಾಯನ ನಡೆಸಿಕೊಟ್ಟಿತು. ಕಲಾವಿದ ಮಧು ಕೂಡ್ಲೂರು ಸೋಮನ ಕುಣಿತ, ಪರಮೇಶ್ವರ ತಂಡ ಗೊರವರ ಕುಣಿತ, ವೀರಗಾಸೆ, ಪೂಜಾ ಕುಣಿತ, ತಮಟೆ ವಾದನ ನಡೆಸಿಕೊಟ್ಟರು.

ಉಪನ್ಯಾಸಕ ಬಿ.ಪಿ. ಸುರೇಶ್ ನಿರೂಪಿಸಿದರು. ಆರ್.ಕೆ. ಸ್ವಾಮಿ ಸ್ವಾಗತಿಸಿದರು. ಕಲಾವಿದ ಎಂ.ಪಿ. ಮರಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.