ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ಯೋಜನೆ ಸದುಪಯೋಗಕ್ಕೆ ಸಲಹೆ

ಚಿಕ್ಕಕಲ್‌ಬಾಳ್‌ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
Last Updated 12 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ಹಾರೋಹಳ್ಳಿ (ಕನಕಪುರ): ‘ರೈತರ ಅಭಿವೃದ್ಧಿಗಾಗಿ ಚಿಕ್ಕಕಲ್‌ಬಾಳ್‌ ಕೃಷಿಪತ್ತಿನ ಸಹಕಾರ ಸಂಘದಿಂದ ಪ್ರಸಕ್ತ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ ₹ 3.72 ಕೋಟಿ ಸಾಲ ನೀಡಲಾಗಿದೆ. ರೈತರು ಸಕಾಲಕ್ಕೆ ಮರುಪಾವತಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು’ ಎಂದು ವಿಧಾನ ಪರಿಷತ್ ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ರವಿ ಹೇಳಿದರು.

ಇಲ್ಲಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕಲ್‌ಬಾಳ್‌ ಗ್ರಾಮದಲ್ಲಿ ಸೊಸೈಟಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿಯನ್ನೇ ನಂಬಿರುವ ರೈತರು ಬೆಲೆ ಸಮಸ್ಯೆ, ಬೆಳೆ ಹಾನಿ ಮೊದಲಾದ ಕಾರಣಗಳಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ದಾರಿ ತುಳಿದಿದ್ದರು. ರೈತರ ಆತ್ಮಹತ್ಯೆ ತಡೆಗಟ್ಟುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಪ್ರತಿ ರೈತರ ₹ 50 ಸಾವಿರ ಸಾಲ ಮನ್ನಾ ಮಾಡಿದ್ದರು’ ಎಂದರು.

‘ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ₹ 2 ಲಕ್ಷದವರೆಗೆ ಸಾಲ ಮನ್ನಾ ಮಾಡಿದ್ದಾರೆ. ಚಿಕ್ಕಕಲ್‌ಬಾಳ್‌ ಸೊಸೈಟಿ ಒಂದರಲ್ಲೇ 560 ರೈತರ ₹ 4.22 ಕೋಟಿ ಸಾಲ ಮನ್ನಾ ಆಗಿದ್ದು, ರೈತರಿಗೆ ಮತ್ತೆ ಶೂನ್ಯ ಬಡ್ಡಿದರಲ್ಲಿ ಸಾಲ ನೀಡಲಾಗಿದೆ. ರೈತರು ಸಕಾಲಕ್ಕೆ ಮರುಪಾವತಿಸಿದರೆ ಶೂನ್ಯ ಬಡ್ಡಿದರವಿರುತ್ತದೆ. ವಿಳಂಬವಾದರೆ ಶೇ 12 ವಾರ್ಷಿಕ ಬಡ್ಡಿ ಕಟ್ಟಬೇಕು’ ಎಂದು ಎಚ್ಚರಿಸಿದರು.

‘ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಸಾಲಮನ್ನಾ ಮಾಡುವುದಿಲ್ಲ. ಈ ಹಿಂದೆ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಒಂದು ನಯಾ ಪೈಸೆಯೂ ಬಂದಿಲ್ಲ. ಬಿಜೆಪಿ ರೈತರ ವಿರೋಧಿ ಹಾಗೂ ಸಾಲ ಮನ್ನಾ ವಿರೋಧಿ ಸರ್ಕಾರ’ ಎಂದು ಛೇಡಿಸಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ‘ಸಹಕಾರ ಸಂಘಗಳು ಇರುವುದೇ ರೈತರಿಗಾಗಿ. ಸಹಕಾರ ಸಂಘಗಳು ಕಡಿಮೆ ಬಡ್ಡಿದರಲ್ಲಿ ಸಾಲ ಕೊಡುತ್ತಿವೆ. ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸಿ, ವಿಶ್ವಾಸ ಗಳಿಸಿ ಮತ್ತೆ ಸಾಲ ಪಡೆಯಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರಿಂದ ಸಾಲ ಪಡೆಯಬೇಡಿ’ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿಕ್ಕಕಲ್‌ಬಾಳ್‌ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ ಮಾತನಾಡಿ, ‘ಉತ್ತಮ ಮನುಷ್ಯರಾಗಿ ಬಾಳುವ ಮೂಲಕ ಸಮಾಜದಲ್ಲಿ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿ. ಸಣ್ಣ ಪ್ರಮಾಜದಲ್ಲಿ ಹೆಂಚಿನ ಮನೆಯಲ್ಲಿದ್ದ ಸೊಸೈಟಿ ಇಂದು ಸುಸಜ್ಜಿತವಾದ ಸುಂದರ ಕಟ್ಟಡ ಹೊಂದಿದೆ. ಗ್ರಾಮದಲ್ಲಿ ಸೊಸೈಟಿ ಇರುವುದೇ ಒಂದು ಹೆಮ್ಮೆ. ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು’ ಎಂದು ಆಶೀರ್ವಚನ ನೀಡಿದರು.

ಸ್ತ್ರೀ ಶಕ್ತಿ ಮಹಿಳೆಯರ ಗುಂಪಿಗೆ ₹ 10 ಲಕ್ಷ ಸಾಲ ಮಂಜೂರಾತಿ ಚೆಕ್‌ ವಿತರಣೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವೆಂಕಟೇಶಯ್ಯ, ರಾಮನಗರ ಜಿಲ್ಲಾ ಉಪ ನಿಬಂಧಕ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ ಸಿದ್ದರಾಜು, ಕೊಟ್ಟಗಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್‌.ಸುರೇಶ್‌, ಉಪಾಧ್ಯಕ್ಷೆ ಚಂದ್ರಕಲಾ ಜಗದೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಟಿ.ಶಿವಮಾದು, ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಮಹದೇವಯ್ಯ, ಜೆಡಿಎಸ್‌ ಮುಖಂಡ ಕೃಷ್ಣಪ್ಪ, ಪ್ರಕಾಶ್‌, ನಾಗರಾಜು, ಎಪಿಎಂಸಿ ನಿರ್ದೇಶಕ ದೇವುರಾವ್‌ ಜಾದವ್‌, ಕಾಂಗ್ರೆಸ್‌ ಮುಖಂಡ ಪರಮೇಶ್‌, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೃಷ್ಣಮ್ಮ ತಿಮ್ಮಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ, ಲಕ್ಷ್ಮಣ್‌, ಗುರುಮೂರ್ತಿ, ಗೌರಮ್ಮ, ಜಯಮ್ಮ, ಬಿಡಿಸಿಸಿ ಬ್ಯಾಂಕ್‌ ಕೆ.ಎನ್‌.ಕಾರ್ತಿಕ್‌, ಎಚ್‌.ಗೋಪಾಲಕೃಷ್ಣ, ಯೋಗೇಶ್‌, ಮುಖಂಡರಾದ ಶಂಭಯ್ಯ, ಹರೀಶ್‌, ಸಹಕಾರ ಸಂಘದ ಅಧ್ಯಕ್ಷ ಪಿ.ಎಸ್‌.ಜಗದೀಶ್‌, ಉಪಾಧ್ಯಕ್ಷ ಎಂ.ಟಿ.ನಂಜುಂಡಯ್ಯ, ನಿರ್ದೇಶಕರಾದ ಮಹದೇವಯ್ಯ, ಜಿ.ಸಿ.ಶಿವಲಿಂಗೇಗೌಡ, ಮಾದೇಗೌಡ, ಚಂದ್ರಮೂರ್ತಿ, ಮರಿಲಿಂಗಯ್ಯ, ಎ.ಎಲ್‌.ಭುವನೇಶ್ವರಿದೇವಿ, ಶಶಿಕಲಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎಲ್‌. ಪುಟ್ಟಸ್ವಾಮಿ, ಗುಮಾಸ್ತ ಸಿ.ಜಿ.ಶೈಲೇಶ್‌, ಲೆಕ್ಕಿಗರಾದ ಶೃತಿ, ಸಿಬ್ಬಂದಿ ಶಿವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT