ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಆಟಿಕೆ ಖರೀದಿಸಲು ಬೊಂಬೆ ನಗರಿಗೆ ಬಂದ ಆಘ್ಗನ್‌ ಕೌನ್ಸೆಲ್‌ ಜನರಲ್‌

Published 28 ಫೆಬ್ರುವರಿ 2024, 7:48 IST
Last Updated 28 ಫೆಬ್ರುವರಿ 2024, 7:48 IST
ಅಕ್ಷರ ಗಾತ್ರ

ಚನ್ನಪಟ್ಟಣ: ಆಫ್ಗಾನಿಸ್ತಾನದ ಕೌನ್ಸೆಲ್‌ ಜನರಲ್ ಝಕೀಯ ವಾರ್ದಕ್ ಅವರು ಮಂಗಳವಾರ ನಗರದ ಮೆಹದಿನಗರ ಹಾಗೂ ತಾಲ್ಲೂಕಿನ ಕರಿಯಪ್ಪನದೊಡ್ಡಿ ಗ್ರಾಮದ ಮಕ್ಕಳ ಆಟಿಕೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ್ದರು.

ಚನ್ನಪಟ್ಟಣ ತಾಲ್ಲೂಕಿನ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ತಯಾರು ಮಾಡಿದ್ದ ಮರದ ಆಟಿಕೆಗಳನ್ನು 2023ರಲ್ಲಿ ಆಫ್ಗಾನಿಸ್ತಾನಕ್ಕೆ ಕಳುಹಿಸಿ ಕೊಡಲಾಗಿತ್ತು.

ಇದರಿಂದ ಪ್ರೇರಣೆಗೊಂಡ ಅಲ್ಲಿನ ಸರ್ಕಾರ ಮಕ್ಕಳಿಗೆ ಮತ್ತಷ್ಟು ಆಟಿಕೆ ಖರೀದಿಸುವ ಬಯಕೆಯೊಂದಿಗೆ ಝಕೀಯಾ ವಾರ್ದಕ್ ಅವರನ್ನು ಮರದ ಆಟಿಕೆ ವೀಕ್ಷಣೆಗೆ ಕಳುಹಿಸಿಕೊಟ್ಟಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದರು.

ಆಟಿಕೆ ತಯಾರಿಕೆ ವೀಕ್ಷಿಸಿದ ಅವರು, ಕುಶಲಕರ್ಮಿಗಳ ಜೊತೆ ಮಾತುಕತೆ ನಡೆಸಿದರು. ಆಟಿಕೆ ತಯಾರಿಕೆ ಬಗ್ಗೆ ಕಲಾವಿದರನ್ನು ಕೇಳಿ  ತಿಳಿದುಕೊಂಡ ಅವರು, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು ಪೂರಕವಾಗಿವೆ ಎಂದು ಹೊಗಳಿದರು.

ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಂ (ಯುಎನ್ಓಡಿಸಿ) ರಾಜ್ಯ ಸಂಜೀವಿನಿ ಗ್ರಾಮೀಣ ಜೀವನೋಪಾಯ ಯೋಜನೆಯ ಮೂಲಕ ಚನ್ನಪಟ್ಟಣದ ಆಟಿಕೆಗಳನ್ನು ಆಫ್ಗಾನಿಸ್ತಾನಕ್ಕೆ ಕಳುಹಿಸಿ ಕೊಡಲಾಗಿತ್ತು.   

ಉಗ್ರರ ದಾಳಿಯಲ್ಲಿ ತಂದೆ, ತಾಯಿ ಕಳೆದುಕೊಂಡು ತಬ್ಬಲಿಗಳಾಗಿರುವ ಆಘ್ಗನ್‌ ಮಕ್ಕಳು ಡ್ರಗ್ಸ್ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲ್ಲಿನ ಮರದ ಆಟಿಕೆ ಕಳುಹಿಸಲಾಗಿತ್ತು. ಇದು ಆ ದೇಶದ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸಹಕಾರಿಯಾಗಿತ್ತು.

ರಾಮನಗರ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT