ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಉಪಯೋಗಕ್ಕೆ ಬಾರದ ಅಂಬೇಡ್ಕರ್ ಭವನ

ಸಮರ್ಪಕ ನಿರ್ವಹಣೆ ಇಲ್ಲದೆ ಭವನದ ಆವರಣದಲ್ಲಿ ತುಂಬಿದ ಕಸಕಡ್ಡಿ
Published 21 ಆಗಸ್ಟ್ 2023, 5:44 IST
Last Updated 21 ಆಗಸ್ಟ್ 2023, 5:44 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆಯಾಗಿ ಎರಡೂವರೆ ವರ್ಷ ಕಳೆಯುತ್ತಿದ್ದರೂ ಉಪಯೋಗಕ್ಕೆ ಬಾರದೆ ವ್ಯರ್ಥವಾದಂತಾಗಿದೆ.

2006ರಲ್ಲಿ ಸುಮಾರು ₹2.9 ಕೋಟಿ ಅಂದಾಜು ವೆಚ್ಚದಲ್ಲಿ ಭವನದ ಕಾಮಗಾರಿ ಆರಂಭಿಸಲಾಯಿತು. 2021ರ ಜನವರಿ 22ರಂದು ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಎಂ.ರಾಮುಲು ಅವರಿಂದ ಭವನ ಲೋಕಾರ್ಪಣೆ ಮಾಡಲಾಗಿತ್ತು. ಆ ಮೂಲಕ ತಾಲ್ಲೂಕಿನ ದಲಿತ ಸಮುದಾಯದ ಬಹುದಿನದ ಆಸೆ ಈಡೇರಿತ್ತು. ಆದರೆ ಉದ್ಘಾಟನೆಯಾಗಿ ಎರಡೂವರೆ ವರ್ಷ ಕಳೆದರೂ ಉಪಯೋಗದ ಭಾಗ್ಯವಿಲ್ಲದಂತಾಗಿದೆ.

ಮೊದಲು ಸರ್ಕಾರ ಬಿಡುಗಡೆ ಮಾಡಿದ್ದ ₹2.9 ಕೋಟಿ ಅನುದಾನ ಸಾಲದೆ ₹2 ಕೋಟಿ ಹೆಚ್ಚುವರಿ ಅನುದಾನ ತಂದು ಭವನ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಶೇ 90ಕ್ಕೂ ಹೆಚ್ಚು ಭಾಗದ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿತ್ತು. ಉದ್ಘಾಟನೆಯಾದ 15 ದಿನಗಳೊಳಗಾಗಿ ಉಳಿದ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಶಾಸಕ ಎಚ್.ಡಿ.ಕುಮಾರಸ್ವಾಮಿ ನೀಡಿದ್ದರು. ಆದರೆ ಎರಡೂವರೆ ವರ್ಷವಾದರೂ ಭರವಸೆ ಈಡೇರಿಲ್ಲ.

ತಾಲ್ಲೂಕಿನ ದಲಿತ ಸಮುದಾಯದ ಸಭೆ, ಸಮಾರಂಭಗಳಿಗೆ ಬಳಸುವ ಉದ್ದೇಶದಿಂದ ಸುಸಜ್ಜಿತ ಭವನ ನಿರ್ಮಾಣ ಮಾಡುವ ಕಾಮಗಾರಿಗೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಮೂಲಗಳಿಂದ ಹಣ ಹೊಂದಿಸಲಾಗಿತ್ತು. ಭವನದಲ್ಲಿ ವಿಶಾಲವಾದ ಸಭಾಂಗಣ, ಕಚೇರಿ, ಶೌಚಾಲಯ, ಕೊಠಡಿಗಳು ಸೇರಿದಂತೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು.

ಪೀಠೋಪಕರಣಗಳ ಅಳವಡಿಕೆ ಸೇರಿದಂತೆ ಕೆಲವು ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿತ್ತು. ಕಟ್ಟಡದ ತಳಪಾಯ ಕೆಳಮಟ್ಟದಲ್ಲಿರುವ ಕಾರಣ ಅಲ್ಲಿ ಮಳೆಯ ನೀರು ನಿಲ್ಲುವುದು, ಜತೆಗೆ ಚರಂಡಿಯ ನೀರು ಅಲ್ಲಿಗೆ ಸೇರುವ ಕಾರಣ ಅದನ್ನು ಸರಿಪಡಿಸದ ಹೊರತು ಭವನ ಉಪಯೋಗ ಇಲ್ಲದಂತಾಗಿದೆ ಎಂದು ತಾಲ್ಲೂಕಿನ ದಲಿತ ಸಮುದಾಯದ ಮುಖಂಡರು ತಿಳಿಸುತ್ತಾರೆ.

ಸುಮಾರು 16 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಭವನದ ಕಾಮಗಾರಿಯನ್ನು ಶಾಸಕ ಎಚ್.ಡಿ. ಕುಮಾರಸ್ವಾಮಿ ಅರೆಬರೆ ಮುಗಿಸಿ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಇದರಲ್ಲಿ ರಾಜಕೀಯ ಅಡಗಿದೆ ಎಂದು ತಾಲ್ಲೂಕಿನ ಕೆಲವು ದಲಿತ ಮುಖಂಡರು ಆರೋಪಿಸಿದ್ದರು. ವಿಪಕ್ಷಗಳ ದಲಿತ ಮುಖಂಡರ ಆರೋಪ, ಎಚ್ಚರಿಕೆಗಳ ನಡುವೆಯೂ ಭವನ ಉದ್ಘಾಟನೆ ಸಾಂಗವಾಗಿ ನೆರವೇರಿತ್ತು.

ಉದ್ಘಾಟನೆಯಾದ ನಂತರ ಮರೆತರು: ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಿದ ಶಾಸಕ ಎಚ್.ಡಿ. ಕುಮಾರಸ್ವಾಮಿ ಆನಂತರ ಅಂಬೇಡ್ಕರ್ ಭವನವನ್ನು ಮರೆತರು ಎಂದು ತಾಲ್ಲೂಕಿನ ದಲಿತ ಸಮುದಾಯದ ಕೆಲವು ಮುಖಂಡರು ಆರೋಪಿಸುತ್ತಾರೆ.

ತಾಲ್ಲೂಕಿನ ದಲಿತ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಕುಮಾರಸ್ವಾಮಿ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಈಗ ಗೆದ್ದು ಮತ್ತೆ ಶಾಸಕರಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದರೂ ಅಂಬೇಡ್ಕರ್ ಭವನದ ಕಾಮಗಾರಿ ಮುಗಿಸುವ ಮನಸ್ಸು ಮಾಡುತ್ತಿಲ್ಲ. ಮೇ ನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿಯೂ ಕೇವಲ ಭರವಸೆ ನೀಡಿ ಗೆದ್ದು ಹೋದ ಮೇಲೆ ಭವನವನ್ನು ಮರೆತಿದ್ದಾರೆ ಎಂದು ವಿಪಕ್ಷಗಳ ದಲಿತ ಸಮುದಾಯದ ಮುಖಂಡರು ಆರೋಪಿಸುತ್ತಾರೆ.

ಕುಮಾರಸ್ವಾಮಿ ಅವರು ಭವನವನ್ನು ಮರೆತಿಲ್ಲ. 16 ವರ್ಷಗಳಿಂದ ನಿಂತುಹೋಗಿದ್ದ ಭವನ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೆ ಕುಮಾರಸ್ವಾಮಿ. ಸಣ್ಣಪುಟ್ಟ ಕಾಮಗಾರಿ ಹೊರತುಪಡಿಸಿ ಭವನ ಸಂಪೂರ್ಣವಾಗಿದೆ. ಉಳಿದಿರುವ ಭವನ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಶಾಸಕರು ₹2 ಕೋಟಿ ಹೆಚ್ಚುವರಿ ಅನುದಾನ ನೀಡಲಿದ್ದಾರೆ. ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಮಾತುಕತೆ ನಡೆದಿದೆ. ಶೀಘ್ರವೇ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ದಲಿತ ವರ್ಗದ ಜೆಡಿಎಸ್ ಪಕ್ಷದ ಮುಖಂಡರು ತಿಳಿಸುತ್ತಾರೆ.

ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ಭವನದ ಆವರಣದಲ್ಲಿ ಕಸಕಡ್ಡಿ ತುಂಬಿದೆ.
ಜತೆಗೆ ಭವನದ ಗೇಟಿಗೆ ಬೀಗ ಜಡಿಯಲಾಗಿದೆ. ಹಿಂಬದಿಯಲ್ಲಿ ಗಿಡ ಬೆಳೆದು ಕಸಕಡ್ಡಿ ಆವರಿಸಿದೆ. ಭವನದ ಹಿಂಬದಿಯಲ್ಲಿರುವ ಶೌಚಾಲಯಕ್ಕೂ ಬೀಗ ಜಡಿಯಲಾಗಿದೆ. ಭವನ ಕಾಯಲು ಕಾವಲುಗಾರನನ್ನು ನೇಮಿಸಿಲ್ಲದ ಕಾರಣ ಸಂಜೆಯ ವೇಳೆ ಹಾಗೂ ರಾತ್ರಿಯ ವೇಳೆ ಪುಂಡುಪೋಕರಿಗಳ ಮೋಜಿನ ತಾಣವಾಗಿ ಭವನ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಸುಸಜ್ಜಿತ ಕಟ್ಟಡವೊಂದು ಈ ರೀತಿ ವ್ಯರ್ಥವಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನ ನೀಡಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ನೀಡಿ ಎನ್ನುವುದು ತಾಲ್ಲೂಕಿನ ದಲಿತ ಸಮುದಾಯದ ಒತ್ತಾಯವಾಗಿದೆ.

ಬೆಂಗಳೂರು ಮೈಸೂರು ಹೆದ್ದಾರಿ ಕಡೆಯಿಂದ ಅಂಬೇಡ್ಕರ್ ಭವನದ ದೃಶ್ಯ
ಬೆಂಗಳೂರು ಮೈಸೂರು ಹೆದ್ದಾರಿ ಕಡೆಯಿಂದ ಅಂಬೇಡ್ಕರ್ ಭವನದ ದೃಶ್ಯ
ಅಂಬೇಡ್ಕರ್ ಭವನದ ಹಿಂದೆ ಗಿಡಗಂಟೆ ಬೆಳೆದಿರುವುದು
ಅಂಬೇಡ್ಕರ್ ಭವನದ ಹಿಂದೆ ಗಿಡಗಂಟೆ ಬೆಳೆದಿರುವುದು
ಭವನದ ಆವರಣದಲ್ಲಿ ನಿರ್ಮಾಣವಾಗಿ ಬೀಗ ಜಡಿದುಕೊಂಡಿರುವ ಶೌಚಾಲಯ
ಭವನದ ಆವರಣದಲ್ಲಿ ನಿರ್ಮಾಣವಾಗಿ ಬೀಗ ಜಡಿದುಕೊಂಡಿರುವ ಶೌಚಾಲಯ
ಅಂಬೇಡ್ಕರ್ ಭವನದ ಗೇಟಿಗೆ ಬೀಗ ಜಡಿದಿರುವುದು
ಅಂಬೇಡ್ಕರ್ ಭವನದ ಗೇಟಿಗೆ ಬೀಗ ಜಡಿದಿರುವುದು
ಮಲ್ಲೇಶ್ ದ್ಯಾವಪಟ್ಟಣ
ಮಲ್ಲೇಶ್ ದ್ಯಾವಪಟ್ಟಣ
ಎಸ್.ಜಯಸಿಂಹ
ಎಸ್.ಜಯಸಿಂಹ

ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಿಸಿ ಕುವೆಂಪುನಗರ ಒಂದನೇ ಅಡ್ಡರಸ್ತೆಯ ಕಿರಿದಾದ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕೆಲವು ಸರ್ಕಾರಿ ಕಚೇರಿಗಳನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರ ಮಾಡಿ ಅದನ್ನು ಉಪಯೋಗಿಸಿಕೊಳ್ಳಬಹುದು ಎಂದು ದಲಿತ ಸಮುದಾಯದ ಮುಖಂಡ ಮತ್ತೀಕೆರೆ ಹನುಮಂತಯ್ಯ ಹೇಳಿದರು. ಉದ್ಘಾಟನೆಯಾಗಿ ಎರಡೂವರೆ ವರ್ಷ ಕಳೆದರೂ ಭವನ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ. ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿದರೆ ಸರ್ಕಾರದ ಲಕ್ಷಾಂತರ ಬಾಡಿಗೆಯ ಹಣ ಬೊಕ್ಕಸಕ್ಕೆ ಉಳಿಯುತ್ತದೆ. ಸರ್ಕಾರಿ ಕಚೇರಿಗಳು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ ಜನರಿಗೂ ಅನುಕೂಲವಾಗುತ್ತದೆ ಎಂದರು.

₹2 ಕೋಟಿ ಬಿಡುಗಡೆಗೆ ಅನುಮೋದನೆ ಭವನದ ಉಳಿಕೆ ಕಾಮಗಾರಿಯನ್ನು ಮುಗಿಸುವ ಸಲುವಾಗಿ ಕುಮಾರಸ್ವಾಮಿ ಅವರು ಮೊದಲ ಹಂತವಾಗಿ ಸರ್ಕಾರದಿಂದ ₹80 ಲಕ್ಷ ಅನುದಾನ ಕೊಡಿಸಿದ್ದು ಭವನಕ್ಕೆ ಪೀಠೋಪಕರಣ ಖರೀದಿಸಲಾಗಿದೆ. ಉಳಿದಂತೆ ಕೆಳಮಹಡಿಯ ಊಟದ ಹಾಲ್‌ನಲ್ಲಿ ನೀರು ಶೀತವೇರುತ್ತಿದೆ. ಅದನ್ನು ತಡೆಗಟ್ಟಲು ಬೇಕಾದ ವ್ಯವಸ್ಥೆ ಮಾಡಲು ₹2 ಕೋಟಿ ಅನುದಾನ ನೀಡಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಕೊಡಿಸಿದ್ದಾರೆ. ಹಣ ಬಿಡುಗಡೆಯಾಗಬೇಕಿದೆ. ಹಣ ಬಿಡುಗಡೆಯಾದರೆ ಭವನ ಬಳಕೆಗೆ ಸಿದ್ಧವಾಗುತ್ತದೆ. ಮಲ್ಲೇಶ್ ದ್ಯಾವಪಟ್ಟಣ ದಲಿತ ಮುಖಂಡ ಚನ್ನಪಟ್ಟಣ

ಭವನದ ವಿಚಾರದಲ್ಲಿ ರಾಜಕೀಯ ಬೇಡ ಚುನಾವಣಾ ಸಂದರ್ಭದಲ್ಲಿ ಮಾತ್ರ ಅಂಬೇಡ್ಕರ್ ಭವನ ಎಲ್ಲರಿಗೂ ನೆನಪಿಗೆ ಬರುತ್ತದೆ. ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿಯ ಕೊರತೆಯಿಂದ ಭವನಕ್ಕೆ ಗ್ರಹಣ ಬಡಿದಂತಾಗಿದೆ. ಭವನದ ಕೆಳಮಹಡಿಯಲ್ಲಿ ಮಳೆಯ ನೀರು ನಿಲ್ಲುತ್ತದೆ. ಕಾರ್ಯಕ್ರಮ ಮಾಡಲು ಬೇಕಾದ ಯಾವುದೇ ಸೌಲಭ್ಯ ಅಲ್ಲಿ ಇಲ್ಲ. ಭವನ ಸಂಪೂರ್ಣ ವಿಚಾರದಲ್ಲಿ ರಾಜಕೀಯ ಮಾಡಬಾರದು. ಸಂಬಂಧಪಟ್ಟವರು ಭವನವನ್ನು ಶೀಘ್ರ ಪೂರ್ಣಗೊಳಿಸಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡಲಿ. ಎಸ್.ಜಯಸಿಂಹ ಕಲಾವಿದರ ಒಕ್ಕೂಟದ ಅಧ್ಯಕ್ಷ ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT