ಶುಕ್ರವಾರ, ಜುಲೈ 1, 2022
27 °C
ಚನ್ನಪಟ್ಟಣ: ಸ್ವಾಭಿಮಾನಿ ಅಂಬೇಡ್ಕರ್ ಹಬ್ಬದ ಸಂಭ್ರಮ– ಜನಪದ ಕಲಾ ತಂಡಗಳ ಮೆರವಣಿಗೆ

ಅಂಬೇಡ್ಕರ್ ಚಿಂತನೆ ಬದಲಾವಣೆಗೆ ರಹದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಜೈಭೀಮ್ ಎಂದರೆ ಅಂಬೇಡ್ಕರ್ ಅವರ ಕನಸು, ಆಶಯಗಳು ಈಡೇರುವುದಿಲ್ಲ’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಕಾರ್ಯಾಧ್ಯಕ್ಷ ಭೀಮರಾವ್ ಯಶ್ವಂತ್ ರಾವ್ ಅಂಬೇಡ್ಕರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಬ್ಬ ಆಚರಣಾ ಸಮಿತಿ ಯಿಂದ ಶನಿವಾರ ನಡೆದ ಸ್ವಾಭಿಮಾನಿ ಅಂಬೇಡ್ಕರ್ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವೆಲ್ಲರೂ ವಿದ್ಯಾವಂತರಾಗಿ, ಜಾಗೃತರಾಗಿ ಅಂಬೇಡ್ಕರ್ ಅವರ ಚಿಂತನೆ, ವಿಚಾರಧಾರೆ ಅಳವಡಿಸಿಕೊಳ್ಳಬೇಕು. ಆ ಮೂಲಕ ಕ್ರಾಂತಿಯ ದಾರಿಯಲ್ಲಿ ನಡೆಯುವ ಮೂಲಕ ಅವರ ಕನಸು, ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ದೇಶದಲ್ಲಿ ಇಂದು ಸಾಮಾಜಿಕ ಬದಲಾವಣೆ ಆಗಿದೆ ಎಂದರೆ ಅದು ಅಂಬೇಡ್ಕರ್ ಅವರ ಕೊಡುಗೆಯಿಂದ ಮಾತ್ರ ಎಂದರು.

ಇಂದು ದೇಶದಲ್ಲಿ ಧರ್ಮ, ಜಾತಿ ಸಂಘರ್ಷ ಹೆಚ್ಚಾಗುತ್ತಿದೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಕೆಲವರು ವಿರೋಧಿಸುತ್ತಿದ್ದಾರೆ. ನಮ್ಮ ಹಕ್ಕು, ರಕ್ಷಣೆಯನ್ನು ನಾಶ ಮಾಡಲು ಹೊರಟಿದ್ದಾರೆ. ಇದಕ್ಕೆ ನಾವುಗಳು ಅವಕಾಶ ಮಾಡಿಕೊಡಬಾರದು. ನಾವು ಜಾಗೃತರಾಗಬೇಕು ಎಂದು ತಿಳಿಸಿದರು.

ಮುಂದೆ ದೇಶದಲ್ಲಿ ಜನಗಣತಿ ಪ್ರಾರಂಭವಾದಾಗ ಅಂಬೇಡ್ಕರ್ ಕನಸಿನಂತೆ ನಾವೆಲ್ಲರೂ ಬೌದ್ಧ ಧರ್ಮ ಸೇರಬೇಕಾಗಿದೆ ಎಂದು ಕರೆ ನೀಡಿದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಹಾದಿಬೀದಿಗಳಲ್ಲಿ, ರಸ್ತೆಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಹಾರ ಹಾಕಿ ಜಯಂತಿ ಮಾಡಿದರೆ ಸಾಲದು. ಪ್ರತಿಯೊಂದು ಮನೆ, ಮನಗಳಲ್ಲಿ ಅಂಬೇಡ್ಕರ್ ಅವರನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಕನಸಿನಂತೆ ನಾವು ಸ್ವಾಭಿಮಾನಿಗಳಾಗಿ, ವಿದ್ಯಾವಂತರಾಗಿ ಆಳುವ ವರ್ಗವಾಗಬೇಕೆ ಹೊರತು ಇನ್ನೊಬ್ಬರ ಗುಲಾಮರಾಗಬಾರದು. ಯಾರ ಮನೆ ಕಾಯುವ ದಾಸರಾಗಬಾರದು ಎಂದು ಕರೆ ನೀಡಿದರು.

ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಂತೆ ಬೋಧಿದತ್ತ ಥೇ ಅಧ್ಯಕ್ಷತೆವಹಿಸಿದ್ದರು. ಮುಸ್ಲಿಂ ಧರ್ಮಗುರು ಸೈಯದ್ ಅಬ್ದುಲ್ ಐ ಮೌಲಾನ, ಕ್ರೈಸ್ತ ಸಭಾಪಾಲಕ ರೆವರೆಂಡ್ ಪಿ.ವಿ.ಜಿ. ಕುಮಾರ್, ಬೌದ್ಧ ಮಹಾಸಭಾದ ಮಲ್ಲಿಕಾರ್ಜುನ ಬಾಲ್ಕಿ ಮಾತನಾಡಿದರು. 

‘ಮಹಾನಾಯಕ’ ಧಾರಾ ವಾಹಿಯ ಬಾಲಕ ಅಂಬೇಡ್ಕರ್ ಪಾತ್ರ ಧಾರಿ ಆಯುದ್ ಬನುಸಾಲಿ, ತಾಯಿ ದೀಪಾ ಮಯೂರ್ ಬನುಸಾಲಿ ಭಾಗವಹಿಸಿದ್ದರು. ಸಮಿತಿಯ ಸಂಚಾಲಕ ಜಯಕಾಂತ್ ಸ್ವಾಗತಿಸಿದರು. ರವಿಕುಮಾರ್ ನಿರೂಪಿಸಿದರು. ಹನುಮಂತಯ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿನ ಅಂಬೇಡ್ಕರ್ ಪುತ್ಥಳಿ ಬಳಿಯಿಂದ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು