ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಮೀಸಲಾತಿ ಒಪ್ಪದಿದ್ದಕ್ಕೆ ಸಚಿವ ಸ್ಥಾನ ತೊರೆದಿದ್ದ ಅಂಬೇಡ್ಕರ್: ಎನ್. ಮಹೇಶ್

ಮುಸ್ಲಿಮರ ಓಲೈಕೆ ವಿರೋಧಿಸಿದ್ದ ಸಂವಿಧಾನ ಶಿಲ್ಪಿ: ಭೀಮಾ ಸಮಾವೇಶದಲ್ಲಿ ಎನ್. ಮಹೇಶ್
Published 28 ಜನವರಿ 2024, 14:12 IST
Last Updated 28 ಜನವರಿ 2024, 14:12 IST
ಅಕ್ಷರ ಗಾತ್ರ

ರಾಮನಗರ: ‘ಪರಿಶಿಷ್ಟ ಸಮುದಾಯಗಳಂತೆ ಒಬಿಸಿ ಸಮುದಾಯಗಳಿಗೂ ಮೀಸಲಾತಿ ಕಲ್ಪಿಸಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಬಯಸಿದ್ದರು. ಆದರೆ, ಸರ್ಕಾರ ಒಪ್ಪಲಿಲ್ಲ. ಸಂವಿಧಾನ ಮತ್ತು ಅಂಬೇಡ್ಕರ್ ಅಭಿಪ್ರಾಯಕ್ಕೆ ವಿರುದ್ಧವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ 370ನೇ ಕಲಂ ಸೇರಿಸಲಾಯಿತು. ಇದರಿಂದಾಗಿ ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು’ ಎಂದು ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಬಯಸಿದ್ದ ಯೋಜನಾ ಆಯೋಗದ ಖಾತೆಯನ್ನು ನೆಹರು ಕೊಡಲಿಲ್ಲ. ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಹಿಂದೂ ಕೋಡ್‌ ಬಿಲ್‌ ಒಪ್ಪಲಿಲ್ಲ. ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ಮತ್ತು ದಲಿತರ ಕಡೆಗಣನೆಗೆ ಬೇಸತ್ತು ಅವರು ರಾಜೀನಾಮೆ ಕೊಟ್ಟಿದ್ದರು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸಿ, ಅಂಬೇಡ್ಕರ್ ಕನಸು ನನಸು ಮಾಡಿದರು. ಸಿದ್ದರಾಮಯ್ಯ ಅವರು ಹಿಂದುಳಿದವರ ಹೆಸರಿನಲ್ಲಿ ಈಗ ಶೋಷಿತ ಸಮುದಾಯದವರ ಸಮಾವೇಶ ಮಾಡುತ್ತಿದ್ದಾರೆ. ಇಷ್ಟು ವರ್ಷ ಗೆಣಸು ಕೆತ್ತುತ್ತಿದ್ದರೆ?’ ಎಂದು ಪ್ರಶ್ನಿಸಿದರು.

ಭೂ ಸುಧಾರಣೆ ಹೆಸರಲ್ಲಿ ಜಗಳ: ‘ಭೂ ಸುಧಾರಣಾ ಕಾಯ್ದೆ ತಂದು ಭೂ ರಹಿತರಿಗೆ ಭೂಮಿ ಹಂಚಿಕೆದ್ದಾಗಿ ಕಾಂಗ್ರೆಸ್ ಹೇಳುತ್ತದೆ. ಇದರಿಂದ, ಎಷ್ಟು ಜನರಿಗೆ ಭೂಮಿ ಸಿಕ್ಕಿದೆಯೋ ಇಲ್ಲವೊ. ಆದರೆ, ಅವರಿಗೆ ಮತಗಳು ಭದ್ರವಾದವು. ಕಾಯ್ದೆ ಹಿಂದೆ ಭೂ ಮಾಲೀಕರು ಮತ್ತು ಗೇಣಿದಾರರಿಗೂ ಜಗಳ ತಂದಿಡುವ ಉದ್ದೇಶವಿತ್ತಷ್ಟೇ’ ಎಂದು ವ್ಯಂಗ್ಯವಾಡಿದರು.

‘1970ರಲ್ಲಿ ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ ಎಂದರು. ಆದರೂ, ಬಡತನ ಹೋಗಿಲ್ಲ. ಈಗ ಸಿದ್ದರಾಮಯ್ಯ ಅಕ್ಕಿ ಕೊಟ್ಟು ಮತ ಕೇಳುತ್ತಿದ್ದಾರೆ. ಪರಿಶಿಷ್ಟರ ಅಭಿವೃದ್ಧಿಗೆ ಬದ್ಧ ಎನ್ನುವ ಅವರು, ಪರಿಶಿಷ್ಟರ ₹11,144 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ. ಇದನ್ನು ಪ್ರಶ್ನಿಸುವವರೇ ಇಲ್ಲವಾಗಿದೆ’ ಎಂದರು.

‘1952ರಿಂದ 30 ವರ್ಷಗಳವರೆಗೆ ಪಂಚವಾರ್ಷಿಕ ಯೋಜ‌ನೆಗಳಲ್ಲಿ ಕಾಂಗ್ರೆಸ್ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಬಿಡಿಗಾಸು ಕೊಡಲಿಲ್ಲ. 1984ರಲ್ಲಿ ಯೋಜನಾ ಆಯೋಗಕ್ಕೆ ಕೆ.ಆರ್. ನಾರಾಯಣ್ ಕಾಲಿಟ್ಟ ನಂತರ, ದಲಿತರಿಗೆ ಹಣ ಬಿಡುಗಡೆಯಾಯಿತು. ಪರಿಶಿಷ್ಟರ ಅಭಿವೃದ್ಧಿಗೆ ಯೋಜನೆ ರೂಪಿಸಲಾಯಿತು. ಕರ್ನಾಟಕದಲ್ಲಿ ಅದೇ ಎಸ್‌ಇಪಿ ಮತ್ತು ಟಿಎಸ್‌ಪಿ ಆಗಿದೆ’ ಎಂದು ಹೇಳಿದರು.

‘ಅಂಬೇಡ್ಕರ್‌ ಜನ್ಮಸ್ಥಳ, ಶಿಕ್ಷಣ ಸ್ಥಳ ಲಂಡನ್, ದೆಹಲಿಯ ಪರಿನಿಬ್ಬಾಣ ಸ್ಥಳ, ನಾಗಪುರದ ದೀಕ್ಷಾ ಭೂಮಿ ಹಾಗೂ ಮುಂಬೈನ ಚೈತ್ಯ ಭೂಮಿಯನ್ನು ಸುಮಾರು ₹2 ಸಾವಿರ ಕೋಟಿ ವೆಚ್ಚದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಅಂಬೇಡ್ಕರ್ ಕರ್ನಾಟಕಕ್ಕೆ ಭೇಟಿ ನೀಡಿದ್ದ 7 ಸ್ಥಳಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿತ್ತು. ನಂತರ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅದನ್ನು ಮರೆತಿದೆ’ ಎಂದು ತಿಳಿಸಿದರು.

‘ಸಂವಿಧಾನ ಮೆರವಣಿಗೆ ಮಾಡಿದವರು ಬದಲಾಯಿಸುತ್ತಾರೆಯೇ?’

‘ಗುಜರಾತ್‌ನಲ್ಲಿ ಮೋದಿ ಅವರು 2010ರಲ್ಲಿ ಆನೆ ಮೇಲೆ ಸಂವಿಧಾನವನ್ನಿಟ್ಟು ಮೆರವಣಿಗೆ ಮಾಡಿದ್ದರು. ಅಂಬೇಡ್ಕರ್ ವಿಷ ಕುಡಿದು ನಮಗೆ ಅಮೃತ ಕೊಟ್ಟಿದ್ದಾರೆ ಎಂದು ಸಂಸತ್ತಿನಲ್ಲಿ ಮೋದಿ ಹೇಳಿದ್ದಾರೆ. ಅಂತಹವರು ಸಂವಿಧಾನ ಬದಲಾಯಿಸುತ್ತಾರೆಯೇ? ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆಯ ಮಾತನಾಡಿದಾಗ, ಸಚಿವ ಸ್ಥಾನದಿಂದ ಕಿತ್ತು ಹಾಕಿದರು. ಸಂಸತ್ತಿನಲ್ಲಿ ಕ್ಷಮೆ ಕೇಳಿಸಿದರು. ನಾನು ಸಹ, ಬದಲಾವಣೆ ಮಾಡಲು ನಿನಗೂ ಆಗಲ್ಲ, ನಿಮ್ಮಪ್ಪನ ಕೈಲೂ ಆಗಲ್ಲ ಎಂದಿದ್ದೆ. ಅದು ಬಿಟ್ಟರೆ, ಮತ್ಯಾರೂ ಅಂತಹ ಹೇಳಿಕೆ ನೀಡಿಲ್ಲ. ಆದರೂ, ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಎನ್. ಮಹೇಶ್ ಹರಿಹಾಯ್ದರು.

‘ಮಾಜಿ ಪ್ರಧಾನಿ ವಾಜಪೇಯಿ ಅವರು ನಮ್ಮದು ಮನುಸ್ಮೃತಿ ಅಲ್ಲ, ಭೀಮಸ್ಮೃತಿ ಎಂದಿದ್ದರು. ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ಮೋದಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಸಹ ಬಂಧುತ್ವ ಭಾವನೆ ಬೆಳೆಯಬೇಕಾದರೆ ಅಂಬೇಡ್ಕರ್ ಭಾಷಣ ಕೇಳಬೇಕು ಎಂದಿದ್ದಾರೆ. ಸಂವಿಧಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಆರು ದಿನ ಚರ್ಚೆ ನಡೆದಿದ್ದು ಕರ್ನಾಟಕದಲ್ಲಿ ಮಾತ್ರ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT