ಶುಕ್ರವಾರ, ಮೇ 14, 2021
32 °C

ಗೌರಿಪುರ: ಉದ್ಘಾಟನೆ ಕಾಣದ ಶುದ್ಧ ನೀರಿನ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಇಲ್ಲಿನ ಹಕ್ಕಿಪಿಕ್ಕಿ ಕಾಲೊನಿಯಲ್ಲಿ (ಗೌರಿಪುರ) ಸುಮಾರು ಮೂರು ವರ್ಷಗಳ ಹಿಂದೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಉದ್ಘಾಟನೆಗೊಂಡಿಲ್ಲ. ಹಾಗಾಗಿ, ಶುದ್ಧ ನೀರು ಕುಡಿಯುವ ಬುಡಕಟ್ಟು ಜನರ ಆಸೆ ಮರೀಚಿಕೆಯಾಗಿಯೇ ಉಳಿದಿದೆ.

ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಗೌರಿಪುರದಲ್ಲಿ ಘಟಕದ ಕಟ್ಟಡ ನಿರ್ಮಿಸಿದೆ. ಆದರೆ, ಇಂದಿಗೂ ಈ ಘಟಕ ಕಾರ್ಯಾರಂಭ ಮಾಡಿಲ್ಲ. ಈ ಕಾಲೊನಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಗ್ರಾಮಕ್ಕೆ ಪ್ರತ್ಯೇಕವಾಗಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಆದರೆ, ಈ ಘಟಕದಿಂದ ಶುದ್ಧ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ.

‘ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಮೂರು ವರ್ಷ ತೆಗೆದುಕೊಂಡಿದ್ದರು. ಆದರೆ, ಯಾವುದೇ ನಿರ್ವಹಣೆ ಮಾಡದೆ ಶಿಥಿಲಗೊಂಡಿದೆ. ಈ ಬಗ್ಗೆ ರಾಮನಗರದ ಹಾಲು ಉತ್ಪಾದಕರ ಶಿಬಿರದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಂದಿಗೂ ಜನರು ಕೊಳವೆಬಾವಿ ನೀರನ್ನೇ ಕುಡಿಯುವಂತಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.

‘ಸುಮಾರು ₹ 2 ಲಕ್ಷ ವೆಚ್ಚದಡಿ ಈ ಘಟಕ ನಿರ್ಮಾಣಗೊಂಡಿದೆ. ಗುತ್ತಿಗೆದಾರರಿಗೆ ಈಗಾಗಲೇ ಹಣ ನೀಡಲಾಗಿದೆ. ಆದರೆ, ಜನರ ಉಪಯೋಗಕ್ಕೆ ಇಲ್ಲದಂತಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜ್ ದೂರಿದರು.

‘ದಿನನಿತ್ಯ ರಾಮನಗರ ಹಾಲು ಉತ್ಪಾದಕರ ಶಿಬಿರಕ್ಕೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮೂರು ವರ್ಷ ಕಳೆದರೂ ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲದಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ತಿಳಿಸಿದರು.

ಶೀಘ್ರವೇ ಕ್ರಮ: ‘ಹಕ್ಕಿಪಿಕ್ಕಿ ಕಾಲೊನಿಯ ಶುದ್ಧ ನೀರಿನ ಘಟಕದ ಕೆಲಸ ಪೂರ್ಣಗೊಂಡಿದೆ. ಕಾಯಿನ್ ಬೂತ್‌ ಅಳವಡಿಸಿದರೆ ಗ್ರಾಮಸ್ಥರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸಿಗುತ್ತದೆ. ಇನ್ನು ಮೂರು ದಿನಗಳಲ್ಲಿ ಕಾಯಿನ್ ಬೂತ್‌ ಅಳವಡಿಸಿ ನೀರು ಪೂರೈಕೆಗೆ ಕ್ರಮವಹಿಸಲಾಗುವುದು’ ಎಂದು ಬೆಂಗಳೂರು ಹಾಲು ಒಕ್ಕೂಟದ ರಾಮನಗರ ಶಿಬಿರದ ಉಪ ವ್ಯವಸ್ಥಾಪಕ ಗಣೇಶ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.