ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ
ಕನಕಪುರ: ‘ಕೊರೊನಾ ಮಾಹಿತಿಯನ್ನು ಪಡೆಯಲು ಮನೆಯ ಬಳಿ ಹೋದಾಗ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ತಮಗೆ ಕೆಲಸ ಮಾಡಲು ಬಿಡದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಮರಳವಾಡಿ ಹೋಬಳಿ ಕಣಿವೆ ಮಾದಾಪುರ ಗ್ರಾಮದ ನಿರ್ಮಲ ದೂರು ನೀಡಿದ್ದಾರೆ. ಇದೇ ಗ್ರಾಮದ ವೆಂಕಟೇಗೌಡರ ಮಗ ರಾಮಕೃಷ್ಣ ಮತ್ತು ಅವರ ಸ್ನೇಹಿತ ಮಹದೇವ ವಿರುದ್ಧ ಪ್ರಕರಣ ದಾಖಲಾಗಿದೆ.
‘ನಿರ್ಮಲ ಕಣಿವೆ ಮಾದಾಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಸೋಂಕಿನ ಸಂಬಂಧ ಮನೆ ಮನೆಗೆ ತೆರಳಿ ಪಲ್ಸ್ ರೇಟ್ ಮತ್ತು ಆಕ್ಸಿಜನ್ ಲೆವಲ್ ಪರೀಕ್ಷಿಸುತ್ತಿದ್ದರು. ವೆಂಕಟೇಗೌಡರ ಮನೆಗೆ ಹೋದಾಗ ನೀನು ಕೀಳು ಜಾತಿಯವಳು ನಮ್ಮ ಮನೆಗೆ ಬಂದು ಏನು ಚೆಕ್ ಮಾಡೋದು ಎಂದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದರು’ ಎಂದು ದೂರಲಾಗಿದೆ.
‘ಅವರ ಮಗ ರಾಮಕೃಷ್ಣ ಸ್ನೇಹಿತ ಮಹದೇವ ಮತ್ತಿತರರನ್ನು ಗುಂಪುಕಟ್ಟಿಕೊಂಡು ಮನೆಯ ಹತ್ತಿರ ಬಂದು ನನಗೆ, ನನ್ನ ಪತಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಈ ವಿಚಾರವಾಗಿ ಠಾಣೆಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ನಿರ್ಮಲ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಮೋಹನ್ಕುಮಾರ್, ಎಸ್ ಐ ಮುರಳಿ.ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.