ಶನಿವಾರ, ಜೂನ್ 19, 2021
26 °C

ಆಯುಷ್ ವೈದ್ಯರ ಕಾಯಂಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಕೋವಿಡ್ ಸೋಂಕು ತಡೆಗೆ ಶ್ರಮಿಸುತ್ತಿರುವ ಆಯುಷ್ ವೈದ್ಯರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಸೇವಾ ಭದ್ರತೆ ಕೂಡ ನೀಡಿಲ್ಲ. ಕೋವಿಡ್ ವಾರಿಯರ್ಸ್‌ಗಳಾಗಿ ದುಡಿಯುತ್ತಿರುವ ನಮ್ಮ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಆಯುಷ್‌ ವೈದ್ಯರು ದೂರಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವ ಆಯುಷ್ ವೈದ್ಯರನ್ನು ಸರ್ಕಾರ ಕೋವಿಡ್ ತೀವ್ರವಾಗಿರುವ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದೆ. ಕನಿಷ್ಠ ವೇತನಕ್ಕೆ ಜೀವದ ಹಂಗು ತೊರೆದು ಕಾರ್ಯ ನಿರ್ವಹಣೆ ಮಾಡುತ್ತಿರುವ ನಮಗೆ ಸರ್ಕಾರ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಕರ್ತವ್ಯದ ವೇಳೆ ಸೋಂಕು ತಗುಲಿದರೆ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಸಾರ್ವಜನಿಕರಿಗೆ ಸಿಗುವ ವೈದ್ಯಕೀಯ ಸೌಲಭ್ಯವೂ ವೈದ್ಯರಿಗೆ ಸಿಗದಂತಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಆಯುಷ್ ವೈದ್ಯಾಧಿಕಾರಿಗಳು ವೇತನ ಪರಿಷ್ಕರಣೆ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶೀಘ್ರ ಸಿಹಿಸುದ್ದಿ ನೀಡುವ ಆಶ್ವಾಸನೆ ಕೊಟ್ಟು ವೈದ್ಯರನ್ನು ಸಾಗಹಾಕಿದ್ದರು. ಆದರೆ, ಈವರೆಗೆ ಭರವಸೆ ಈಡೇರಿಲ್ಲ. ಇದೀಗ ಕೋವಿಡ್ ಎರಡನೇ ಅಲೆ ಅಪ್ಪಳಿಸಿದೆ. ಆಯುಷ್‌ ವೈದ್ಯರು ಫ್ರಂಟ್‌ಲೈನ್ ವಾರಿಯರ್ಸ್ ಆಗಿ ಕಾರ್ಯ ನಿರತರಾಗಿದ್ದಾರೆ.
ಆದರೆ, ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದ್ದಾರೆ.

ಕೆಲವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಹಲವರು ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಭರಿಸಿ ಚಿಕಿತ್ಸೆ ಪಡೆದು ಬದುಕಿ ಬಂದ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಉದಾಹರಣೆಗಳಿವೆ ಎಂದು ತಿಳಿಸಿದ್ದಾರೆ.

‘ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಕೊಡುವ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದಲ್ಲಿ ಭರವಸೆಯಲ್ಲಿಯೇ ಕಾಲ ತಳ್ಳುತ್ತಿದೆ. ಗಂಭೀರ ಪರಿಸ್ಥಿತಿಯಲ್ಲಿ ನಿಷ್ಠೆಯಿಂದ ಕರ್ತವ್ಯ ಸಲ್ಲಿಸುತ್ತಿರುವ ನಮಗೆ ವೇತನದ ಜೊತೆಗೆ ಸೇವಾಭದ್ರತೆ ನೀಡಬೇಕು. ಕೋರ್ಟ್ ಆದೇಶದಂತೆ ನಮ್ಮ ಸೇವೆಯನ್ನು ಸರ್ಕಾರ ಕಾಯಂಗೊಳಿಸಬೇಕು’ ಎಂದು ಕರ್ನಾಟಕ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ವಿಜಯಕುಮಾರ್ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.