ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧೆ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿಲ್ಲ

ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿ ಮಂಜುನಾಥ ಸಿ.ಎನ್
Published 4 ಏಪ್ರಿಲ್ 2024, 7:37 IST
Last Updated 4 ಏಪ್ರಿಲ್ 2024, 7:37 IST
ಅಕ್ಷರ ಗಾತ್ರ

ರಾಮನಗರ: ‘ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನಾನು ಸ್ಪರ್ಧಿಸಿದ್ದೇನೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಯಾವುದೇ ಪಕ್ಷ ಅಥವಾ ನಾಯಕರ ಆಮಿಷಕ್ಕೆ ಒಳಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಸ್ವಯಂಪ್ರೇರಿತವಾಗಿ ಕಣಕ್ಕಿಳಿದಿದ್ದೇನೆ’ ಎಂದು ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿ ಮಂಜುನಾಥ್ ಸಿ.ಎನ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಸದ್ಯ ಕಣದಲ್ಲಿರುವ ಮಂಜುನಾಥ್ ಅವರ ಮೂಲ ಕೂಡ ಚನ್ನರಾಯಪಟ್ಟಣ. ಅವರು ಇಲ್ಲಿ ಬಂದು ಸ್ಪರ್ಧಿಸುವುದನ್ನು ಒಪ್ಪುವವರು, ನನ್ನ ಸ್ಪರ್ಧೆಯನ್ನು ಪ್ರಶ್ನಿಸುವುದು ಎಷ್ಟು ಸರಿ?’ ಎಂದರು.

‘ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ನಾನು, ಹಾಸನ ಜಿಲ್ಲೆಯಲ್ಲಿ ಮೂವತ್ತು ವರ್ಷಗಳಿಂದ ವಿವಿಧ ಚಳವಳಿ ಹಾಗೂ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ. ಬಹುಜನ ಸಮಾಜ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಯ ಸದಸ್ಯನಾಗಿಯೂ ಸೇವೆ ಸಲ್ಲಿಸಿರುವ ನಾನು, ಕಳೆದ ಸಲ ಬಿಎಸ್‌ಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ’ ಎಂದು ತಿಳಿಸಿದರು.

‘ಪಕ್ಷದ ನಾಯಕರು ಹಾಸನಕ್ಕೆ ಬೇರೊಬ್ಬ ಅಭ್ಯರ್ಥಿಯ ಹೆಸರುನ್ನು ಅದಾಗಲೇ ಘೋಷಿಸಿದ್ದರು. ಹಾಗಾಗಿ, ನನಗೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲು ಬಿ ಫಾರಂ ಕೊಟ್ಟರು. ಅವರ ಸೂಚನೆಯಂತೆ ಇಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಸ್ಪರ್ಧೆಗೆ ಕಾಂಗ್ರೆಸ್ ಒತ್ತಡ ಅಥವಾ ಆಮಿಷ ಕಾರಣ ಎನ್ನುವವರು, ನನ್ನ ಮೊಬೈಲ್ ಕರೆಗಳನ್ನು ಪರಿಶೀಲಿಸಲಿ. ಯಾರಾದರೂ ನಾಯಕರು ನನ್ನೊಂದಿಗೆ ಮಾತನಾಡಿದ್ದರೆ ಪರಿಶೀಲಿಸಲಿ. ಆಗ ನಾನು ಕಣದಿಂದ ಹಿಂದೆ ಸರಿಯುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಡಾ. ಸಿ.ಎನ್. ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಾನು ಬಹುಜನ್ ಭಾರತ್ ಪಾರ್ಟಿಯಿಂದ ಕಣಕ್ಕಿಳಿದಿದ್ದೇನೆ. ಮತದಾರರು ಪಕ್ಷಗಳ ಚಿಹ್ನೆ ನೋಡಿ ಮತ ಹಾಕುತ್ತಾರೆ. ಈ ಆಧುನಿಕ ಯುಗದಲ್ಲಿ ಒಂದೇ ರೀತಿ ಹೆಸರುಗಳಿವೆ ಎಂಬ ಕಾರಣಕ್ಕೆ ಗೊಂದಲಕ್ಕೊಳಗಾಗಿ ಬೇರೆಯವರಿಗೆ ಮತ ಹಾಕುವಷ್ಟು ಯಾರೂ ದಡ್ಡರಿಲ್ಲ’ ಎಂದು ಹೇಳಿದರು.

ಭೀಮ್ ಆರ್ಮಿಯ ರಾಮನಗರ ತಾಲ್ಲೂಕು ಅಧ್ಯಕ್ಷ ಹರೀಶ್, ಬಹುಜನ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಎಚ್., ಕರ್ನಾಟಕ ರಾಜ್ಯ ಕೊರಮ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ ಹಾಗೂ ಮಾದಿಗ ದಂಡೋರದ ಆರ್. ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT