ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಮುಲ್‌ ಚುನಾವಣೆ: ನಾಮಪತ್ರ ಭರಾಟೆ

ಪಿ. ನಾಗರಾಜು, ಲಿಂಗೇಶ್‌, ಜಯಮುತ್ತು ಸೇರಿದಂತೆ ಪ್ರಮುಖರಿಂದ ಉಮೇದುವಾರಿಕೆ ಸಲ್ಲಿಕೆ
Last Updated 2 ಮೇ 2019, 14:19 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಮಂಡಳಿಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ದು, ಗುರುವಾರ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಬೆಂಗಳೂರಿನ ಬಮೂಲ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಬೆಂಗಳೂರು ಡೇರಿಯು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಜಿಲ್ಲೆಯ ಐದು ಕ್ಷೇತ್ರ ಸೇರಿದಂತೆ ಒಟ್ಟು 13 ಕ್ಷೇತ್ರಗಳಿಗೆ ಮೇ 12 ರಂದು ಮತದಾನವು ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಇದೇ 4 ಕಡೆಯ ದಿನವಾಗಿದೆ.

ನಾಗರಾಜು ನಾಮಪತ್ರ: ರಾಮನಗರ ಕ್ಷೇತ್ರದಿಂದ ಕೆಎಂಎಫ್‌ ಹಾಲಿ ಅಧ್ಯಕ್ಷ ಪಿ. ನಾಗರಾಜು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಐದನೇ ಬಾರಿಗೆ ಅವರು ಸ್ಪರ್ಧೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಬಿಡದಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ತಾಲ್ಲೂಕಿನ ವಿವಿಧ ಎಂಪಿಸಿಎಸ್‌ಗಳ ಪದಾಧಿಕಾರಿಗಳು ಸಾಥ್‌ ನೀಡಿದರು.

‘ಸಹಕಾರಿ ಕ್ಷೇತ್ರದಲ್ಲಿ ನಾಲ್ಕು ಬಾರಿ ನೀವು ನನಗೆ ಆಶೀರ್ವಾದ ಮಾಡಿದ ಫಲವಾಗಿ ಹಲವು ರೈತಪರವಾದ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಈ ಬಾರಿಯೂ ಎಲ್ಲ ಮುಖಂಡರ ಆಶೀರ್ವಾದದಿಂದ ಸ್ಪರ್ಧೆ ಮಾಡಿದ್ದೇನೆ. ಎಲ್ಲರೂ ಪಕ್ಷಬೇಧ ಮರೆತು ಬೆಂಬಲಿಸಬೇಕು’ ಎಂದು ಅವರು ಮನವಿ ಮಾಡಿದರು.

ಮುಖಂಡರಾದ ಸಿದ್ದಲಿಂಗೇಗೌಡ, ಎಚ್.ಸಿ.ರಾಜಣ್ಣ, ಶಂಕರಪ್ಪ ಮಾತನಾಡಿದರು. ರಾಮನಗರ ತಾಲೂಕಿನ ಎಂಪಿಸಿಎಸ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಜೆಡಿಎಸ್ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.

ಇತರರಿಂದಲೂ ನಾಮಪತ್ರ: ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳಿಂದಲೂ ಗುರುವಾರ ಹಲವರು ನಾಮಪತ್ರ ಸಲ್ಲಿಸಿದರು.ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ನಿರ್ದೇಶಕ ರಾಜ್‌ಕುಮಾರ್ ಉಮೇದುವಾರಿಕೆ ಹಾಕಿದರು.

ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಗಳನ್ನು ಒಳಗೊಂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಬೆಂಬಲಿತರಾದ ವಂದಲಗದೊಡ್ಡಿಯ ಎಚ್‌.ಎಸ್‌. ಹರೀಶ್‌ ನಾಮಪತ್ರ ಹಾಕಿದರು. ಇದೇ ಕ್ಷೇತ್ರದಿಂದ ಅಂಗರಹಳ್ಳಿಯ ರಮೇಶ್‌ ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಮಾಗಡಿ ಹಾಗೂ ಕುದೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಜೆಡಿಎಸ್ ಮುಖಂಡರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬೋರ್‌ವೆಲ್‌ ನರಸಿಂಹಮೂರ್ತಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಹಾಲಿ ನಿರ್ದೇಶಕ ನರಸಿಂಹಮೂರ್ತಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರ ಕ್ಷೇತ್ರದಿಂದ ಜೆಡಿಎಸ್ ಮುಖಂಡರಾದ ಶಿವಲಿಂಗಯ್ಯ ಕೂಡ ನಾಮಪತ್ರ ಸಲ್ಲಿಸಿದ್ದು, ಕುತೂಹಲ ಕೆರಳಿಸಿದೆ.

**
ಚನ್ನಪಟ್ಟಣ ಕದನ ಕುತೂಹಲ
ಚನ್ನಪಟ್ಟಣ ಕ್ಷೇತ್ರದಿಂದ ಗುರುವಾರ ಜೆಡಿಎಸ್‌ ಮುಖಂಡರಾದ ಲಿಂಗೇಶ್‌ಕುಮಾರ್ ಹಾಗೂ ಜಯಮುತ್ತು ಇಬ್ಬರೂ ಉಮೇದುವಾರಿಕೆ ಸಲ್ಲಿಸಿದ್ದು, ಚುನಾವಣೆಯ ಕುತೂಹಲ ಹೆಚ್ಚಿಸಿದೆ.

ಒಂದೇ ಪಕ್ಷದವರಾಗಿದ್ದಾಗ್ಯೂ ಇಬ್ಬರ ನಡುವೆ ಈಚೆಗೆ ರಾಜಕೀಯ ಜಿದ್ದಾಜಿದ್ದಿ ಹೆಚ್ಚಿದೆ. ಇದು ಈಗ ಬಮುಲ್‌ ಚುನಾವಣೆಗೂ ವಿಸ್ತರಿಸಿದೆ. ಇಬ್ಬರೂ ಕಣದಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಈ ನಡುವೆ ಬಿಜೆಪಿ ಪಾಳಯದಿಂದ ಸಿ.ಪಿ. ಯೋಗೇಶ್ವರ್‌ ಸಹೋದರ ಸಿ.ಪಿ. ರಾಜೇಶ್ ಸ್ಪರ್ಧೆಯ ಸುಳಿವು ನೀಡಿದ್ದರು. ಆದರೆ ಅವರ ಉಮೇದುವಾರಿಕೆ ಖಾತ್ರಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT