ಗುರುವಾರ , ಅಕ್ಟೋಬರ್ 17, 2019
21 °C
ಬಮೂಲ್‌ ನಿರ್ದೇಶಕರು, ಹಾಲು ಉತ್ಪಾದಕರಿಂದ ಪ್ರತಿಭಟನೆ

‘ಡೇರಿ ಮಾರುಕಟ್ಟೆಗೆ ವಿದೇಶಿಗರ ಲಗ್ಗೆ ಬೇಡ’

Published:
Updated:
Prajavani

ರಾಮನಗರ: ಕೇಂದ್ರ ಸರ್ಕಾರವು ಹಾಲು ಉತ್ಪನ್ನಗಳ ಆಮದು ಸುಂಕ ಕಡಿತಗೊಳಿಸಿ ಎಫ್‌ಟಿಎ ಅಡಿಯಲ್ಲಿ ದೇಶದ ಹಾಲು ಉತ್ಪನ್ನಗಳ ಮಾರುಕಟ್ಟೆಯನ್ನು ಇತರೆ ದೇಶಗಳಿಗೆ ಮಾರಾಟ ಮಾಡಲು ಮುಕ್ತಗೊಳಿಸುತ್ತಿರುವ ಕ್ರಮವನ್ನು ವಿರೋಧಿಸಿ ಬಮೂಲ್ ನಿರ್ದೇಶಕರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಡೇರಿ ಯೋಜನೆಯನ್ನು (ಎನ್ ಡಿಪಿ) 5 ವರ್ಷಗಳಿಂದ ಅನುಷ್ಠಾನಗೊಳಿಸಿದ ಕಾರಣದಿಂದಾಗಿ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ. ದೇಶದ ಡೇರಿ ಉದ್ದಿಮೆ ಪರಿಸ್ಥಿತಿ ಉತ್ತಮವಾಗಿರುವ ಸಂದರ್ಭದಲ್ಲಿ ಹಾಲು ಉತ್ಪನ್ನಗಳ ಮಾರುಕಟ್ಟೆಯನ್ನು ಇತರೆ ದೇಶಗಳಿಗೆ ಎಫ್ ಟಿಎ, ಆರ್ ಸಿಇಪಿ ಅಡಿಯಲ್ಲಿ ಮುಕ್ತಗೊಳಿಸುವ ಕ್ರಮ ಸರಿಯಲ್ಲ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಆಕ್ಷೇಪ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಹಾಗೂ ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದಾಗ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಜಮೀನು ಹೊಂದಿರದ ರೈತರು ಡೇರಿ ಉದ್ದಿಮೆಯನ್ನು ಅವಲಂಬಿಸಿದ್ದಾರೆ. ಆದರೀಗ ಹಾಲು ಉತ್ಪನ್ನಗಳ ಆಮದು ಸುಂಕ ಕಡಿತಗೊಳಿಸುವ ಕ್ರಮದಿಂದ ದೇಶದ ಡೇರಿ ಉದ್ದಿಮೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಬ್ಯಾಂಕಾಂಕ್ ನಲ್ಲಿ ನಡೆದ 7ನೇ ಆರ್ ಸಿಇಪಿ ಸಭೆಯಲ್ಲಿ ಸದಸ್ಯತ್ವ ಹೊಂದಿರುವ ಆಸಿಯನ್ (ಎಎಸ್ ಇಓಎನ್ ) ದೇಶಗಳು ಹಾಗೂ ಪಾಲುದಾರರ ರಾಷ್ಟ್ರಗಳ ಮಧ್ಯೆ 2019ರ ನವೆಂಬರ್ ಒಳಗೆ ಮುಕ್ತ ಮಾರಾಟ (ಎಫ್ ಟಿಎ) ಅನುಷ್ಠಾನಗೊಳಿಸುವ ತೀರ್ಮಾನ ಕೈಗೊಳ್ಳುವ ಠರಾವು ಮಾಡಿದ್ದಾರೆ. ಪ್ರಾರಂಭದಲ್ಲಿ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ನಮ್ಮ ದೇಶದ ಹಾಲು ಉತ್ಪನ್ನಗಳ ಮಾರುಕಟ್ಟೆಯನ್ನು ಮುಕ್ತ ಮಾಡಿದಲ್ಲಿ ಮುಂದೆ ಇತರೆ ದೇಶಗಳು ಸಹ ಮುಕ್ತಗೊಳಿಸಲು ಬೇಡಿಕೆ ಸಲ್ಲಿಸುತ್ತವೆ. ಇದರಿಂದಾಗುವ ಪರಿಣಾಮವನ್ನು ಊಹಿಸಲು ಅಸಾಧ್ಯ ಎಂದರು.

ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೇರಿ ಉತ್ಪನ್ನಗಳ ದರಗಳು ಕಡಿಮೆ ಇರುವುದರಿಂದ ದೇಶದ ಗ್ರಾಹಕರಿಗೆ ಪ್ರಾರಂಭದಲ್ಲಿ ಅನುಕೂಲ ಆಗಬಹುದು. ಆದರೆ ಮುಂದಿನ ದಿನಗಳಲ್ಲಿ ಡೇರಿ ಉದ್ದಿಮೆ ರೈತರಿಗೆ ಲಾಭದಾಯಕವಾಗದ ಕಾರಣ ಹಾಲು ಉತ್ಪಾದನೆ ಸಂಪೂರ್ಣವಾಗಿ ಕುಂಠಿತವಾದಲ್ಲಿ ಇತರೆ ದೇಶಗಳಿಂದ ಹೆಚ್ಚಿನ ದರಗಳಲ್ಲಿ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ದೇಶದ ಗ್ರಾಹಕರಿಗೆ ಹೊರೆಯಾಗುತ್ತದೆ. ದೇಶದ ಕೃಷಿ ವರಮಾನದಲ್ಲಿ ಅತಿ ಹೆಚ್ಚಿನ ಪಾಲು ಅಂದರೆ ಶೇ 27ರಷ್ಟು ಈ ಉದ್ದಿಮೆಯಿಂದಲೇ ಬರುತ್ತಿದೆ. ಹಾಲು ಉತ್ಪನ್ನಗಳ ಮಾರುಕಟ್ಟೆಯನ್ನು ಎಫ್ ಟಿಎ ಅಡಿಯಲ್ಲಿ ಇತರೆ ದೇಶಗಳಿಗೆ ಮುಕ್ತಗೊಳಿಸುವುದು ರೈತರ ವರಮಾನವನ್ನು ಅರ್ಧಕ್ಕೆ ಇಳಿಸಿದಂತೆ ಆಗುತ್ತದೆ ಎಂದು ಎಚ್ಚರಿಸಿದರು.

ಬಮೂಲ್ ನಿರ್ದೇಶಕ ಪಿ. ನಾಗರಾಜ್ ಮಾತನಾಡಿ, ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಹೈನು ಯೋಜನೆಯಿಂದಾಗಿ ದೇಶದಲ್ಲಿ ಬೇಡಿಕೆಗಿಂತಲೂ ಹಾಲು ಉತ್ಪಾದನೆ ಹೆಚ್ಚಾಗುತ್ತದೆ. ಅಮುಲ್ ಮಾದರಿ ಸಹಕಾರಿ ಡೇರಿ ಉದ್ದಿಮೆಯಿಂದಾಗಿ ಹಾಲು ಉತ್ಪಾದಕರಿಗೆ ಉತ್ತಮ ಖರೀದಿ ದರ ದೊರಕುತ್ತಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಮತ್ತು ಉತ್ಪನ್ನಗಳು ಕೈಗೆಟುಕುವ ದರಗಳಲ್ಲಿ ದೊರಕುತ್ತಿದ್ದು, ಇದು ಬೇರೆ ದೇಶಗಳಿಗೆ ಹೋಲಿಸಿದಾಗ ಕಡಿಮೆಯಿದೆ. ದೇಶದ ರೈತರ ವರಮಾನವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಗಳ ಮಹತ್ತರ ಯೋಜನೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಎಫ್ ಟಿಎ ಅಡಿಯಲ್ಲಿ ಹಾಲು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ನೀಡಬಾರದು ಎಂದರು.

ಭಾರತದಲ್ಲಿ ವಾರ್ಷಿಕ 180 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪನ್ನಗಳು ತಯಾರಾಗುತ್ತಿದ್ದು, ಇದು ವಿಶ್ವ ಮಾರುಕಟ್ಟೆಯ ಶೇ 20ರಷ್ಟಿದೆ. ಹಾಲು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಶೇ 24 ರಷ್ಡು ಜಿಡಿಪಿ ಪ್ರಮಾಣ ಹೊಂದಿದೆ. ಇದೀಗ ವಿದೇಶಿ ಹಾಲು ಉತ್ಪನ್ನಗಳ ಆಮದು ಸುಂಕ ಇಳಿಕೆ ಮಾಡಿದರೆ ಹೈನುಗಾರಿಕೆ ನಂಬಿರುವ ರೈತರು ಬೀದಿಗೆ ಬೀಳುತ್ತಾರೆ ಎಂದು ತಿಳಿಸಿದರು.

ದೇಶದಲ್ಲಿ ಹೈನುಗಾರಿಕೆಯು ಗ್ರಾಮೀಣ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಅತ್ಯಮೂಲ್ಯ ಪಾತ್ರ ವಹಿಸುತ್ತಿದೆ. ಆಮದು ಸುಂಕವನ್ನು ರದ್ದು ಪಡಿಸಿದಲ್ಲಿ ಇತರೆ ದೇಶದ ಡೇರಿ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ದೇಶಕ್ಕೆ ಆಮದುವಾದರೆ ನಮ್ಮ ಡೇರಿ ಉದ್ದಿಮೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಹೈನುಗಾರಿಕೆ ನಂಬಿರುವ ಗ್ರಾಮೀಣರ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಮೂಲ್ ನಿರ್ದೇಶಕರಾದ ಎಚ್.ಸಿ. ಜಯಮುತ್ತು, ಎಚ್.ಪಿ. ರಾಜಕುಮಾರ್, ಎಚ್.ಎಸ್. ಹರೀಶ್ ಕುಮಾರ್, ರಾಜಣ್ಣ , ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷ ಗುಂಡಪ್ಪ, ಕಾರ್ಯದರ್ಶಿಗಳಾದ ವೆಂಕಟೇಶ್, ಅನಿಲ್, ಪ್ರಭಾಕರ್, ಶಿವರಾಜು ಇದ್ದರು.

 

Post Comments (+)