ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಎಂಜಿನಿಯರ್‌ ಕೈ ಹಿಡಿದ ಬಂಡೂರು ಕುರಿ!

ಪ್ರತಿ 8 ತಿಂಗಳಿಗೆ ₹10 ಲಕ್ಷ ಆದಾಯ: ಕೃಷಿ ಜೊತೆಗೆ ಉಪ ಕಸುಬಿಗೂ ಒತ್ತು
Last Updated 7 ಸೆಪ್ಟೆಂಬರ್ 2020, 3:19 IST
ಅಕ್ಷರ ಗಾತ್ರ

ರಾಮನಗರ: ಇವರು ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌. ಆದರೆ, ಸದ್ಯ ಮಾಡುತ್ತಿರುವುದು ಮಾತ್ರ ಕುರಿ ಸಾಕಣೆ. ಇದು ಕನಕಪುರದ ಯುವ ರೈತರೊಬ್ಬರ ಯಶೋಗಾಥೆ.

ಕನಕಪುರ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದ ಕೃಷ್ಣ ಈಗ ಬಂಡೂರು ಕುರಿ ಕೃಷ್ಣ ಎಂದೇ ಹೆಸರುವಾಸಿ. ಕಳೆದ ಏಳೆಂಟು ವರ್ಷಗಳಿಂದಲೂ ಬಂಡೂರು ಕುರಿಗಳ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿಯೇ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಕೈತುಂಬಾ ಆದಾಯವನ್ನೂ ಗಳಿಸುತ್ತಿದ್ದಾರೆ.

ಈ ಮುಂಚೆ ಕೃಷ್ಣ ಸಹ ಎಲ್ಲರಂತೆಯೇ ಆರಂಭದಲ್ಲಿ ಖಾಸಗಿ ಉದ್ಯೋಗ ಹಿಡಿದರು. ಬೆಂಗಳೂರು ಸೇರಿ ಕ್ಲಸ್ಟರ್‌ ಎಂಬ ಕಂಪನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿ ಒಂದಿಷ್ಟು ಕಾಲ ದುಡಿದರು. ತಕ್ಕಮಟ್ಟಿಗೆ ಸಂಪಾದನೆಯೂ ಇತ್ತು. ಆದರೆ, ಹುಟ್ಟೂರಿನಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡರು.

2012ರಲ್ಲಿ ಉದ್ಯೋಗ ಬಿಟ್ಟು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳ ಜತೆಗೆ ಕುರಿ ಸಾಕಣೆಯಲ್ಲಿ ತೊಡಗಿಸಿಕೊಂಡರು. ಅದೇ ಈಗ ಪೂರ್ಣ ಪ್ರಮಾಣದ ವೃತ್ತಿಯಾಗಿ ಉತ್ತಮ ಆದಾಯ ತಂದುಕೊಡುತ್ತಿದೆ.

ಸದ್ಯ ಕೃಷ್ಣ ಅವರ ಫಾರಂನಲ್ಲಿ 150ಕ್ಕೂ ಹೆಚ್ಚು ಕುರಿಗಳಿವೆ. ಇವುಗಳು ಹಾಕುವ ಮರಿಗಳನ್ನು ಮಾರಾಟ ಮಾಡಿಯೇ ಅವರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಂದು ಕುರಿ ಪ್ರತಿ ಐದು ತಿಂಗಳಿಗೆ ತಿಂಗಳಿಗೆ ಒಮ್ಮೆ ಮರಿ ಹಾಕುತ್ತದೆ. ಅದನ್ನು ಮೂರು ತಿಂಗಳ ಕಾಲ ಸಾಗಿ ನಂತರ ಇತರರಿಗೆ ಸಾಕುವ ಉದ್ದೇಶಕ್ಕಾಗಿ ಮಾರಲಾಗುತ್ತಿದೆ. ಹೀಗೆ ಪ್ರತಿ ಎಂಟು ತಿಂಗಳಿಗೆ ಒಮ್ಮೆ ಮಾರಾಟ ನಡೆಯುತ್ತದೆ. ಒಂದು ಮರಿಗೆ ಮಾರುಕಟ್ಟೆಯಲ್ಲಿ ₹8-10 ಸಾವಿರ ಬೆಲೆ ಇದೆ. ಖರ್ಚೆಲ್ಲ ಕಳೆದರೂ ಪ್ರತಿ ಎಂಟು ತಿಂಗಳಿಗೆ ಕೇವಲ ಕುರಿ ಮಾರಾಟ
ದಿಂದಲೇ ಸರಾಸರಿ ₹10 ಲಕ್ಷ ಆದಾಯ ಪಡೆಯುತ್ತಿದ್ದಾರೆ.

‘ಸಾಫ್ಟ್‌ವೇರ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿ ನಮ್ಮ ಜಮೀನಿನಲ್ಲೇ ಕೃಷಿ ಕೈಗೊಳ್ಳುವ ನಿರ್ಧಾರಕ್ಕೆ ಬಂದೆ. ಕೃಷಿಯ ಜೊತೆ
ಜೊತೆಗೆ ಉಪಕಸುಬು ಮಾಡುವುದರಿಂದ ನಾವು ಆರ್ಥಿಕವಾಗಿ ಸದೃಢರಾಗಬಹುದು. ಹೀಗಾಗಿ ಕುರಿ ಸಾಕಣೆ ಆರಂಭಿಸಿದೆ. ಆರಂಭದಲ್ಲಿ ಗಂಡಸಿ ಮೊದಲಾದ ತಳಿಯ ಟಗರುಗಳನ್ನು ಸಾಗಿದ್ದೆ. ಆದರೆ ಅದಕ್ಕೆ ಅಷ್ಟು ಮಾರುಕಟ್ಟೆ ಇರಲಿಲ್ಲ. ಹೀಗಾಗಿ ಬಂಡೂರು ಕುರಿ ಸಾಕಲು ಆರಂಭಿಸಿದೆ. ಮೊದಲು 20 ಹಾಗೂ ನಂತರ 30 ಕುರಿ ತಂದೆ. ಈಗ ಅದೇ 150 ಕುರಿಗಳಾಗಿವೆ.

ಮಾಂಸಕ್ಕೆ ಬದಲಾಗಿ ಕೇವಲ ಬಿತ್ತನೆ ಉದ್ದೇಶಕ್ಕೆ ಇವುಗಳನ್ನು ಸಾಕುತ್ತಿದ್ದೇವೆ. ಪ್ರತಿ 8 ತಿಂಗಳಿಗೆ ಸುಮಾರು 150 ಕುರಿಗಳ ಪೈಕಿ ಕನಿಷ್ಠ 120 ಮರಿಗಳು ಮಾರಾಟಕ್ಕೆ ಸಿಗುತ್ತಿವೆ’ ಎಂದು ವಿವರಿಸುತ್ತಾರೆ ಕೃಷ್ಣ.

‘ಕುರಿಗಳ ಉತ್ಪಾದನೆ ನಿರಂತರವಾಗಿದೆ. ಆರಂಭದಲ್ಲಿ ಮಾರುಕಟ್ಟೆ ಬಗ್ಗೆ ಕೊಂಚ ಅಳುಕಿತ್ತು. ಆದರೆ ಈಗ ನಮ್ಮಲ್ಲಿಗೇ ಬಂದು ಮರಿ ಕೊಂಡೊಯ್ಯುತ್ತಾರೆ. ಮಂಡ್ಯ, ಕಿರುಗಾವಲು, ಮಳವಳ್ಳಿ ಮೊದಲಾದ ಭಾಗಗಳಿಂದಲೂ ಬರುತ್ತಾರೆ. ಈಚೆಗೆ ಚಿತ್ರನಟ ದರ್ಶನ್‌ ಸಹ ನಮ್ಮಲ್ಲಿಗೆ ಬಂದು ಮರಿಗಳನ್ನು ಕೊಂಡೊಯ್ದಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

ನಿರ್ವಹಣೆ ಹೇಗೆ: ‘ಕುರಿಗಳ ನಿರ್ವಹಣೆಗೆಂದೇ ಎರಡು ಕುಟುಂಬಗಳಿವೆ. ಬೆಳಗ್ಗೆ 10ರಿಂದ ಸಂಜೆ 6ವರೆರೆಗೂ ಹೊರಗೆ ಮೇಯಲು ಬಿಡುತ್ತೇವೆ. ನಂತರ ಅವುಗಳಿಗೆ ಸಾಧಾರಣ ಮೇವಿನ ಜೊತೆಗೆ ಹಿಂಡಿ ನೀರು, ಬೂಸ ಮೊದಲಾದ ಪೌಷ್ಟಿಕ ಆಹಾರ ಒದಗಿಸುತ್ತೇವೆ. ಜೊತೆಗೆ ಕಾಲಕಾಲಕ್ಕೆ ಔಷಧ, ಚುಚ್ಚುಮದ್ದು ಹಾಕಿಸುತ್ತೇವೆ’ ಎಂದು ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT