ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಿ: ಜಿ.ಬಿ.ರಾಮಪ್ಪ

Published 8 ಮೇ 2024, 4:59 IST
Last Updated 8 ಮೇ 2024, 4:59 IST
ಅಕ್ಷರ ಗಾತ್ರ

ಕನಕಪುರ: ಮಾಹಿತಿ ತಂತ್ರಜ್ಞಾನ ಅತಿವೇಗವಾಗಿ ಬೆಳೆದಿರುವ, ಬೆರಳ ತುದಿಯಲ್ಲೇ ಒಳ್ಳೆಯದು, ಕೆಟ್ಟದ್ದು ಎಲ್ಲವೂ ಸಿಗುವ ಈ ಸಂದರ್ಭದಲ್ಲಿ ಮಕ್ಕಳು ದಾರಿತಪ್ಪುವ ಸಾಧ್ಯತೆ ಹೆಚ್ಚಿದ್ದು, ಮಕ್ಕಳು ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಬೇಸಿಗೆ ಶಿಬಿರಗಳ ಅವಶ್ಯಕತೆಯಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ರಾಮಪ್ಪ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿ ಅಚ್ಚಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಬೇಸಿಗೆ ಶಿಬಿರ- 2024 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಪ್ರೌಢಶಾಲೆಯಾದರೂ ಸಹ ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದ ರೀತಿಯಲ್ಲಿ ಇಲ್ಲಿನ ಮೈದಾನ ಕ್ರೀಡಾ ವ್ಯವಸ್ಥೆಯು  ಅಚ್ಚುಕಟ್ಟಾಗಿದೆ. ಇದರಿಂದಾಗಿಯೇ ಈ ಶಾಲೆಯ ವಿದ್ಯಾರ್ಥಿಗಳು ಹತ್ತಾರು ವರ್ಷಗಳಿಂದಲೂ ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದವರೆಗೂ ಸಾಧನೆ ಮಾಡಿದ್ದಾರೆ ಎಂದರು.

ಇಂತಹ ಶಾಲೆಯಲ್ಲಿ ಮಕ್ಕಳು ರಜಾ ದಿನಗಳಲ್ಲಿ ತಮ್ಮ ರಜೆಯನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಉಪಯುಕ್ತವಾಗುವಂತೆ ಮಾಡಲು ಕ್ರೀಡಾ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಇಲ್ಲಿನ ಮಕ್ಕಳು ಅದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಮಕ್ಕಳ ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕು. ಅವರು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ರಾಮನಗರ ಜಿಲ್ಲಾ ದೈಹಿಕ ಶಿಕ್ಷಣ ಪ್ರಭಾರ ಅಧೀಕ್ಷಕ ಡಿ.ಎಸ್. ಸತೀಶ್ ಮಾತನಾಡಿ, ಈ ಬೇಸಿಗೆ ಕ್ರೀಡಾ ಶಿಬಿರವೇ ಶಾಲೆಯ ಕ್ರೀಡಾ ಸಾಧನೆಗೆ ಪ್ರಮುಖ ಕಾರಣವಾಗಿದೆ. ಆ ನಿಟ್ಟಿನಲ್ಲಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರು ವಾಲಿಬಾಲ್ ಕ್ರೀಡೆಗೆ, ಕೌಶಲ ಆಧಾರಿತ ವೈಜ್ಞಾನಿಕ ತರಬೇತಿಯನ್ನು ನೀಡುತ್ತಿರುವುದು ನಮ್ಮ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕ ಟಿ.ಪರಮೇಶ್ವರಪ್ಪ ಮಾತನಾಡಿ, ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಶಿಬಿರದಲ್ಲಿ ತರಬೇತಿ ಪಡೆಯುವ ಮೂಲಕ ಶಿಬಿರವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಚ್ಚಲು ಪಂಚಾಯ್ತಿಯ ಪಿಡಿಒ ಬಂಗಾರಪ್ಪ, ಸಿಆರ್‌ಪಿ ಸಿದ್ದರಾಜು, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಇಸಿಒ ರಂಗಸ್ವಾಮಿ, ಎಚ್‌‌.ಪಿ.ಎಸ್ ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ್ ದೊಡ್ಡಮನಿ ಮತ್ತು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು ಎಸ್. ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT