ಮಂಗಳವಾರ, ಜನವರಿ 28, 2020
19 °C

ಕನಕಪುರ: ಬಿಳಿಕಲ್‌ ಬೆಟ್ಟದ ವಿಜೃಂಭಣೆಯ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಬಿಳಿಕಲ್‌ ಬೆಟ್ಟದ ಶ್ರೀ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಂಕ್ರಾಂತಿ ಹಬ್ಬಕ್ಕೂ ಮುನ್ನ ಹುಣ್ಣಿಮೆ ದಿನದಂದು ನಡೆಯುವ ಈ ಜಾತ್ರೆಗೆ ತಾಲ್ಲೂಕಿನ ವಿವಿಧ ಕಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಮುದ್ರ ಮಟ್ಟಕ್ಕಿಂತ 2,500 ಅಡಿ ಎತ್ತರದಲ್ಲಿರುವ ದೇವಾಲಯದ ಸುತ್ತ ಬಿಳಿಕಲ್‌ ಅರಣ್ಯದಿಂದ ಆವೃತವಾಗಿದ್ದು ಸದಾ ಹಸಿರಿನಿಂದ ಕೂಡಿರುತ್ತದೆ.

ಹೆಚ್ಚಿನ ಭಕ್ತರು ಕುಟುಂಬ ಸಮೇತರಾಗಿ ಪುಟಾಣಿ ಮಕ್ಕಳೊಂದಿಗೆ ಬರುವುದರಿಂದ ಜಾತ್ರೆಯಲ್ಲಿ ಮಾರಾಟ ಮಾಡಲು ಅಂಗಡಿಗಳ ಬಜಾರ್‌ ನಿರ್ಮಿಸಲಾಗಿತ್ತು. ಯುವಕ ಯುವತಿಯರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿ ಆನಂದಿಸಿದರು.

ಅಲ್ಲಲ್ಲಿ ಅರವಟಿಗೆಗಳನ್ನು ತೆರೆದು ಮಜ್ಜಿಗೆ, ಪಾನಕ, ಕೋಸಂಬರಿ ಹಂಚಿದರು. ಹಸಿವು ನೀಗಿಸಲು ಅನ್ನದಾಸೋಹ ಕೇಂದ್ರ ತೆರೆದು ಊಟ ನೀಡಿದರು. ದೇವಸ್ಥಾನದಲ್ಲಿ ಬೆಳಿಗ್ಗೆ ದೇವರಿಗೆ ಅಭಿಷೇಕ ಮಾಡಿ ವಿವಿಧ ಫಲಪುಷ್ಪಗಳಿಂದ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮಧ್ಯಾಹ್ನ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಹಣ್ಣು, ಜವನವನ್ನು ಎಸೆದು ಹರಕೆ ತೀರಿಸಿದರು.

ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ರವಿ, ಸದಸ್ಯೆ ಭಾಗ್ಯ ಶಾಂತರಾಜು, ಮುಖಂಡರಾದ ರಾಮಕೃಷ್ಣ, ರಾಯಸಂದ್ರರವಿ, ಈಶ್ವರ್‌, ಬಿ.ನಾಗರಾಜು, ಗೌತಮ್‌ ಎಂ.ಗೌಡ, ವಿವಿಧ ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಹಾಗೂ ಅವರ ಕುಟುಂಬದವರು ದೇವಾಲಯದಲ್ಲಿ ಪೂಜೆ ಮತ್ತು ಮಹೋತ್ಸವವನ್ನು ನೆರವೇರಿಸಿಕೊಟ್ಟರು.

ಆರೋಪ 

ಜಾತ್ರೆಯಲ್ಲಿ ಜನರ ದಟ್ಟಣೆ ಹೆಚ್ಚಾಗುವುದರಿಂದ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ನೀಡಿ ಜನರು ಮತ್ತು ವಾಹನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಪೊಲೀಸರು ಈ ಬಾರಿ ನಿರ್ಲಕ್ಷಿಸಿದ್ದರಿಂದ ಸಂಚಾರ ದಟ್ಟಣೆಯಿಂದ ಜನತೆ ಓಡಾಡಲು ಪರದಾಡುವಂತಾಯಿತು. ಇದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರಣ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಆರೋಪಿಸಿದರು. 

ಇಲ್ಲಿನ ಸಮಸ್ಯೆಯನ್ನು ತಿಳಿಸಲು ದೂರವಾಣಿ ಕರೆ ಮಾಡಿದರೆ ಸ್ಪಂದಿಸಿಲ್ಲ. ರಾಜ್ಯದಲ್ಲಿ ಹಿಂದುತ್ವವೆನ್ನುವ ಬಿಜೆಪಿ ಸರ್ಕಾರವಿದೆ. ಈ ಜಾತ್ರೆಗೆ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು