ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಜೂರು ಎಸ್‌ಐ ಅಮಾನತುಗೊಳಿಸಿ: ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಆಗ್ರಹ

ಸುಳ್ಳು ಪ್ರಕರಣ ಆರೋಪ: ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಆಗ್ರಹ
Published 12 ಫೆಬ್ರುವರಿ 2024, 5:54 IST
Last Updated 12 ಫೆಬ್ರುವರಿ 2024, 5:54 IST
ಅಕ್ಷರ ಗಾತ್ರ

ರಾಮನಗರ: ‘ಹಿಂದೂಪರ ಹೋರಾಟಗಾರರ ವಿರುದ್ಧ ನಗರದ ಐಜೂರು ಠಾಣೆ ಎಸ್‌ಐ ತನ್ವೀರ್ ಹುಸೇನ್ ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಈ ಕುರಿತು ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪಕ್ಷದಿಂದ ದೂರು ನೀಡಲಾಗುವುದು’ ಎಂದು ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಹೇಳಿದರು.

‘ಇಲ್ಲಿನ ರೆಹಮಾನಿಯಾ ನಗರದ ರಫೀಕ್ ಖಾನ್ ಎಂಬುವರು ನೀಡಿದ ದೂರಿನ ಮೇರೆಗೆ, ತನ್ವೀರ್ ಅವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಶಿವಾನಂದ, ಅನಿಲ್ ಬಾಬು ಸೇರಿದಂತೆ 40 ವಕೀಲರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ. ಅವರ ಈ ನಡೆ ಸಂಶಯಾಸ್ಪದವಾಗಿದೆ’ ಎಂದು ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಉತ್ತರಪ್ರದೇಶ ಜ್ಞಾನವಾಪಿ ಮಸೀದಿಯಲ್ಲಿ ಕೋರ್ಟ್ ಪೂಜೆಗೆ ಅವಕಾಶ ಕಲ್ಪಿಸಿತ್ತು. ಈ ತೀರ್ಪಿನ ವಿರುದ್ಧ ವಕೀಲ ಚಾಂದ್ ಪಾಷ ಅವರು ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಅವರ ವಿರುದ್ಧ ಸಾರ್ವಜನಿಕರು ವಕೀಲರ ಸಂಘಕ್ಕೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಅವರ ವಿರುದ್ಧ ನಿಯಮಾನುಸಾರ ಎಫ್‌ಐಆರ್‌ ಆಗಿದ್ದರೂ, ಇದುವರೆಗೆ ಕ್ರಮ ಕೈಗೊಂಡಿಲ್ಲ. ಬಳಿಕ ಪಾಷ ಕುಮ್ಮಕ್ಕಿನಿಂದ ರಫೀಕ್ ನೀಡಿದ ಸುಳ್ಳು ದೂರಿನ ಮೇರೆಗೆ ವಕೀಲರು ಹಾಗೂ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

ಹಿಂದೂಪರ ಹೋರಾಟಗಾರ ಅನಿಲ್ ಬಾಬು, ‘ವಕೀಲ ಚಾಂದ್ ಪಾಷಾ ವಿರುದ್ಧ ಪೊಲೀಸ್ ಇಲಾಖೆ ಹಿಂದೆ ರೌಡಿ ಪಟ್ಟಿ ತೆರೆದಿತ್ತು. ಅವರು ನಿಷೇಧಿತ ಪಿಎಫ್‍ಐ ಸಂಘಟನೆ ಮುಖಂಡರಾಗಿದ್ದರು. ಪ್ರಸ್ತುತ ಎಸ್‍ಡಿಪಿಐ ಮುಖಂಡರು ಆಗಿರುವ ಅವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದಿಂದ ಗಡಿಪಾರ ಮಾಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪಿ. ಶಿವಾನಂದ, ಪದ್ಮನಾಭ್, ಸುರೇಶ್, ಬಿ. ನಾಗೇಶ್, ರುದ್ರದೇವರು, ಚಂದ್ರಶೇಖರ್ ರೆಡ್ಡಿ, ಕಾಳಯ್ಯ, ಚಂದನ್‍ಮೋರೆ ಹಾಗೂ ಮಂಜು ಇದ್ದರು.

ಪ್ರಕರಣದಲ್ಲಿ ಸ್ಥಳೀಯ ಶಾಸಕ ಎಚ್.ಎ. ಇಕ್ಟಾಲ್ ಹುಸೇನ್ ಅವರ ಕೈವಾಡವಿದೆ. ಶಾಸಕರು ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಜವಾಬ್ದಾರಿಯಿಂದ ನಿರ್ವಹಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಶಾಸಕರೇ ಹೊಣೆಯಾಗುತ್ತಾರೆ
– ಅಶ್ವತ್ಥ ನಾರಾಯಣಗೌಡ ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT