ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಪ್ರಮಾಣ ಶೇ 3.32ರಷ್ಟು ಜಿಗಿತ; 15 ಚುನಾವಣೆಗಳಲ್ಲೇ 2ನೇ ಮತ ದಾಖಲೆ

ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನ; ಕುಣಿಗಲ್‌ ಹೆಚ್ಚು, ರಾಜರಾಜೇಶ್ವರಿನಗರ ಕಡಿಮೆ
Published 28 ಏಪ್ರಿಲ್ 2024, 4:47 IST
Last Updated 28 ಏಪ್ರಿಲ್ 2024, 4:47 IST
ಅಕ್ಷರ ಗಾತ್ರ

ರಾಮನಗರ: ರಾಜ್ಯ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ವರದಿ ಪ್ರಕಾರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಒಟ್ಟು ಶೇ 68.30ರಷ್ಟು ಮತದಾನ ನಡೆದಿದೆ. ಕಳೆದ 2019ರ ಚುನಾವಣೆಯ ಶೇ 64.98 ಮತ ಪ್ರಮಾಣಕ್ಕೆ ಹೋಲಿಸಿದರೆ, ಈ ಸಲ ಹಕ್ಕು ಚಲಾಯಿಸಿದವರ ಸಂಖ್ಯೆ ಶೇ 3.32ರಷ್ಟು ಏರಿಕೆಯಾಗಿದೆ.

ಮತದಾನ ನಡೆದ ಶುಕ್ರವಾರ ರಾತ್ರಿಯ ಅಂತ್ಯಕ್ಕೆ ಶೇ 67.29ರಷ್ಟು ಮತ ಪ್ರಮಾಣ ದಾಖಲಾಗಿತ್ತು. ಶನಿವಾರ ಎಲ್ಲಾ ಮತಗಟ್ಟೆಗಳ ಮತದಾನ ಪ್ರಮಾಣದ ಪೂರ್ಣ ಮಾಹಿತಿಯನ್ನು ಪಡೆದಿರುವ ಚುನಾವಣಾ ಆಯೋಗವು, ಕ್ಷೇತ್ರದಲ್ಲಿ ಅಂತಿಮವಾಗಿ ಶೇ 68.30ರಷ್ಟು ಮತದಾನವಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ.

ಹಿಂದಿನ ಕನಕಪುರ ಮತ್ತು ಈಗಿನ ಗ್ರಾಮಾಂತರ ಸೇರಿ ಒಟ್ಟು 15 ಸಾರ್ವತ್ರಿಕ ಚುನಾವಣೆಗಳನ್ನು ಕ್ಷೇತ್ರವು ಎದುರಿಸಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಸಲ 2ನೇ ಅತಿ ಹೆಚ್ಚು ಮತ ಪ್ರಮಾಣ ದಾಖಲಾಗಿದೆ. 1984ರಲ್ಲಿ ನಡೆದ ಚುನಾವಣೆಯಲ್ಲಿ ಶೇ 72.16ರಷ್ಟು ಪ್ರಮಾಣದ ಮತದಾನವಾಗಿತ್ತು. ಅದನ್ನು ಬಿಟ್ಟರೆ ಅತಿ ಹೆಚ್ಚು ಮತದಾನವಾಗಿರುವುದು 2024ರ ಚುನಾವಣೆಯಲ್ಲೇ ಎಂಬುದು ವಿಶೇಷ.

ಕುಣಿಗಲ್ ಹೆಚ್ಚು: ಕ್ಷೇತ್ರಕ್ಕೆ ಒಳಪಡುವ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಇಲ್ಲಿರುವ ಒಟ್ಟು 2,03,228 ಮತದಾರರ ಪೈಕಿ 1,73,275 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂದರೆ, ಶೇ 85.26ರಷ್ಟು ಮತದಾನ ದಾಖಲಾಗಿದೆ. ಈ ಪೈಕಿ 87,387 ಪುರುಷರು, 85,887 ಮಹಿಳೆಯರು ಹಾಗೂ ಒಬ್ಬ ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಿದರು.

ಕಳೆದ 2019ರ ಚುನಾವಣೆಯಲ್ಲಿ ಕ್ಷೇತ್ರವು ಶೇ 77.10ರಷ್ಟು ಮತದಾನ ದಾಖಲಿಸಿತ್ತು. ಒಟ್ಟು 1,90,992 ಮತದಾರರ ಪೈಕಿ 1,47,193 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ 74,528 ಪುರುಷರು, 72664 ಮಹಿಳೆಯರು ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಮಾಡಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಸಲ ಕ್ಷೇತ್ರದಲ್ಲಿ ಮತ ಪ್ರಮಾಣ ಶೇ 8.16ರಷ್ಟು ಏರಿಕೆ ಕಂಡಿದೆ. ಈ ಸಲ ಪುರುಷರು ಹೆಚ್ಚು ಮತ ಹಾಕಿದ್ದಾರೆ.

ರಾಜರಾಜೇಶ್ವರಿನಗರ ಕಡಿಮೆ: ಕ್ಷೇತ್ರದ ವ್ಯಾಪ್ತಿಯ ಬೆಂಗಳೂರಿನ ರಾಜರಾಜೇಶ್ವರಿ ನಗರ ಈ ಸಲ ಅತಿ ಕಡಿಮೆ ಪ್ರಮಾಣ ದಾಖಲಿಸಿದ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿರುವ ಒಟ್ಟು 5,04,617 ಮತದಾರರ ಪೈಕಿ 2,82,885 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಂದರೆ, ಶೇ 56.06ರಷ್ಟು ಮತದಾನ ದಾಖಲಾಗಿದೆ. ಈ ಪೈಕಿ 1,40,601 ಪುರುಷರು, 1,42,263 ಮಹಿಳೆಯರು ಹಾಗೂ 21 ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಿದರು.

ಕಳೆದ 2019ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 53.65‌ರಷ್ಟು ಮತದಾನವಾಗಿತ್ತು. ಒಟ್ಟು 4,50,945 ಮತದಾರರ ಪೈಕಿ 2,41,934 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ 1,24,306 ಪುರುಷರು, 1,17,619 ಮಹಿಳೆಯರು ಹಾಗೂ 9 ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಮಾಡಿದ್ದರು. ಹಿಂದಿನ ಚುನಾವಣೆಗೆ ಹೋಲಿಸಿದರೆ, ಈ ಸಲ ಕ್ಷೇತ್ರದಲ್ಲಿ ಮತ ಪ್ರಮಾಣ ಶೇ 2.41ರಷ್ಟು ಏರಿಕೆಯಾಗಿದೆ. ಈ ಸಲ ಮಹಿಳೆಯರು ಹೆಚ್ಚು ಮತ ಹಾಕಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್
ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್

ಪುರುಷ ಮತದಾರರೇ ಮುಂದೆ

ಕ್ಷೇತ್ರದಲ್ಲಿ ಈ ಸಲ ಮತ ಚಲಾಯಿಸಿರುವವರಲ್ಲಿ ಪುರುಷರೇ ಮುಂದಿದ್ದಾರೆ. ಕ್ಷೇತ್ರದಲ್ಲಿರುವ ಒಟ್ಟು 1424685 ಪುರುಷ ಮತದಾರರ ಪೈಕಿ 963046 ಮಂದಿ ಮತ ಚಲಾಯಿಸಿದ್ದಾರೆ. ಅದರಂತೆ ಒಟ್ಟು 1377570 ಮಹಿಳಾ ಮತದಾರರ ಪೈಕಿ 950921 ಮಂದಿ ಹಕ್ಕು ಚಲಾಯಿಸಿದ್ದಾರೆ. ಇನ್ನು 325 ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಪೈಕಿ ಕೇವಲ 63 ಮಂದಿಯಷ್ಟೇ ಮತದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT