ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಕೈ–ಕಮಲ

ಬೆಂಗಳೂರು ಗ್ರಾಮಾಂತರ ಬಿಎಸ್‌ಪಿ ಅಭ್ಯರ್ಥಿ ಚಿನ್ನಪ್ಪ ಚಿಕ್ಕಹಾಗಡೆ ವಾಗ್ದಾಳಿ
Published 19 ಮಾರ್ಚ್ 2024, 5:08 IST
Last Updated 19 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ರಾಮನಗರ: ‘ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಗಾಳಿಗೆ ತೂರಿ, ತಮ್ಮ ಕುಟುಂಬದಲ್ಲೇ ಅಧಿಕಾರ ಇರುವಂತೆ ನೋಡಿಕೊಂಡಿವೆ’ ಎಂದು ಬಿಎಸ್‌ಪಿ ಅಭ್ಯರ್ಥಿ ಚಿನ್ನಪ್ಪ ಚಿಕ್ಕಹಾಗಡೆ ವಾಗ್ದಾಳಿ ನಡೆಸಿದರು.

‘ಜೆಡಿಎಸ್‌ ನಾಯಕ ಎಚ್‌.ಡಿ. ದೇವೇಗೌಡರು ತಮ್ಮ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್‌ನಿಂದ ಕಣಕ್ಕಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಲಿ ಸಂಸದ ಡಿ.ಕೆ. ಸುರೇಶ್ ಈ ಬಾರಿಯೂ ಸ್ಪರ್ಧಿಸಿದ್ದಾರೆ. ಎರಡೂ ಪಕ್ಷಗಳ ಕುಟುಂಬ ರಾಜಕಾರಣವನ್ನು ಪ್ರಜ್ಞಾವಂತ ಮತದಾರರು ತಿರಸ್ಕರಿಸಬೇಕು’ ಎಂದು ನಗರದ ಚೈತನ್ಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಹತ್ತು ವರ್ಷಗಳಿಂದ ಸಂಸದರಾಗಿರುವ ಸುರೇಶ್ ಅವರ ಸಾಧನೆ ಶೂನ್ಯವಾಗಿದೆ. ಭೂಮಿ ಇಲ್ಲದವರಿಗೆ ಭೂಮಿ ಹಂಚಿಲ್ಲ. ಮನೆ ಇಲ್ಲದವರಿಗೆ ಮನೆ ಕೊಟ್ಟಿಲ್ಲ. ಕ್ಷೇತ್ರದ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಕೇವಲ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವ ಅವರು, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಬಿಟ್ಟಿ ಭಾಗ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ಹಣವನ್ನು ಬಳಸುವ ಮೂಲಕ, ದಲಿತರಿಗೆ ದ್ರೋಹ ಮಾಡಿದೆ. ನಿರ್ದಿಷ್ಟ ಸಮುದಾಯಕ್ಕೆ ಮೀಸಲಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಅಕ್ಷಮ್ಯ. ಪರಿಶಿಷ್ಟರಿಗೆ ಭೂಮಿ ಮತ್ತು ಉದ್ಯೋಗ ನೀಡುವ ಮೂಲಕ ಅವರನ್ನು ಮೇಲಕ್ಕೆತ್ತಿಬೇಕು’ ಎಂದರು.

‘ಬಹುಜನ ಸಮಾಜ ಪಕ್ಷವು ಎಲ್ಲಾ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಕಾಣುವ ಪಕ್ಷವಾಗಿದ್ದು, ಸಂವಿಧಾನವೇ ನಮ್ಮ ಪಕ್ಷದ ಪ್ರಣಾಳಿಕೆಯಾಗಿದೆ. ಸಂವಿಧಾನದ ಯಥಾವತ್ ಜಾರಿಯೇ ನಮ್ಮ ಗುರಿಯಾಗಿದೆ. ಪಕ್ಷ ಗೆದ್ದರೆ ಕೈಗಾರಿಕಾಭಿವೃದ್ಧಿ, ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿ ಹಾಗೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ನಾಗೇಶ್ ಮಾತನಾಡಿ, ‘ಬಿಜೆಪಿ ರಾಮಮಂದಿರ ಉದ್ಘಾಟನೆ ವಿಷಯದ ಮೇಲೆ ಮತ ಕೇಳುತ್ತಿದೆ. ಹತ್ತು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದ ಬಿಜೆಪಿ, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಚುನಾವಣೆ ಮಾಡುತ್ತಿದೆ. ಕಾಂಗ್ರೆಸ್ ಸಹ ಪ್ರಜಾಪ್ರಭುತ್ವದ ಉಳಿವಿಗೆ ಬದ್ಧವಾಗಿಲ್ಲ. ಈ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಇವರಿಗೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳು ಬೇಕಿದೆಯೇ ಹೊರತು, ಅವರ ಅಭಿವೃದ್ಧಿಯಲ್ಲ. ಬದಲಿಗೆ ಎಂದು ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಮಹಾದೇವ, ದೇವರಾಜ್, ಸ್ವಾಮಿ, ಟಿ.ಸಿ. ಉಮೇಶ್, ವೆಂಕಟಾಚಲ, ಗೌರಮ್ಮ, ಪಾರ್ವತಮ್ಮ, ಅನು, ಸುರೇಶ್, ಜಕ್ಕಸಂದ್ರ ಕೃಷ್ಣಮೂರ್ತಿ, ಮುರುಗೇಶ್, ಬಸವರಾಜು, ಗೌರಿಶಂಕರ್, ತಬ್ರೇಜ್ ಪಾಷ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT