ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೇಟಿಗೆ ಹೋದರೆ ಹೊಡೆಯುತ್ತಾರೆ..ತಂದೆ, ಮಲತಾಯಿ ವಿರುದ್ಧ CP ಯೋಗೇಶ್ವರ್‌ ಪುತ್ರಿ

ಸಾಮಾಜಿಕ ಜಾಲತಾಣದಲ್ಲಿ ನಿಶಾ ಅಳಲು
Published 22 ಮೇ 2024, 16:22 IST
Last Updated 22 ಮೇ 2024, 16:22 IST
ಅಕ್ಷರ ಗಾತ್ರ

ರಾಮನಗರ: ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಪಿ. ಯೊಗೇಶ್ವರ್ ಮತ್ತು ಅವರ ಎರಡನೇ ಪತ್ನಿ ವಿರುದ್ಧ ಮೊದಲನೇ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.

ಕೌಟುಂಬಿಕ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲೆಯ ರಾಜಕೀಯ ವಲಯದಲ್ಲಿ ಇದು ಭಾರಿ ಚರ್ಚೆ ಹುಟ್ಟು ಹಾಕಿದೆ. ನಿಶಾ ಅಸಮಾಧಾನದ ವಿಡಿಯೊ ಕುರಿತು ಪ್ರತಿಕ್ರಿಯೆ ಪಡೆಯಲು ಯೋಗೇಶ್ವರ್ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

‘ನನ್ನ ತಂದೆ ಮತ್ತು ಚಿಕ್ಕಮ್ಮ (ಮಲತಾಯಿ) ಇಬ್ಬರೂ ಮೊದಲನೇ ಪತ್ನಿಯ ಮಗಳಾದ ನನ್ನನ್ನು ಬೆಳೆಸಿ ಆದರ್ಶವಾಗಲಿಲ್ಲ. ತಂದೆಯ ಭೇಟಿಗೆ ಹೋದರೆ ಪೊಲೀಸರನ್ನು ಕರೆಯಿಸುತ್ತಾರೆ. ಮಾತನಾಡಿಸಲು ಮುಂದಾದರೆ ಕಪಾಳಕ್ಕೆ ಹೊಡೆಯುತ್ತಾರೆ. ನಿನಗೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ. ಭಿಕ್ಷೆ ಬೇಡಿ ಬದುಕು ಎನ್ನುತ್ತಾರೆ. ನನ್ನ ಬದುಕಿನಿಂದ ತಂದೆ ಹೊರ ಹೋದಾಗಿನಿಂದಲೂ ವನವಾಸ ಅನುಭವಿಸುತ್ತಲೇ ಇದ್ದೇನೆ’ ಎಂದು ಹೇಳಿದ್ದಾರೆ.

‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ವಿಡಿಯೊಂದನ್ನು ಪೋಸ್ಟ್ ಮಾಡಿದ್ದೆ. ನನ್ನ ಹೆಸರಿನ ಮುಂದೆ ತಮ್ಮ ಹೆಸರನ್ನು ಬಳಸದಂತೆ ತಾಕೀತು ಮಾಡಿದರು. ಅವರ ಹೆಸರು ಇಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಎಂದು ಹೀಯಾಳಿಸಿದ್ದಾರೆ. ಈ ಬಗ್ಗೆ ನಾನು ಮಾತನಾಡಲು ಇಷ್ಟಪವಿಲ್ಲವಾದರೂ ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ’ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.

‘ನಾನು ಹತ್ತು ವರ್ಷವಿದ್ದಾಗಲೇ ನನ್ನ ತಂದೆ ನಮ್ಮ ಬದುಕಿನಿಂದ ಹೊರ ಹೋದರು. ಆದರೂ, ಚುನಾವಣೆ ಸಂದರ್ಭದಲ್ಲಿ ಕರೆದಾಗ ಅವರ ಪರ ಪ್ರಚಾರ ಮಾಡಿದ್ದೆ. ಅವರಿಷ್ಟಕ್ಕೆ ಅನುಗುಣವಾಗಿ ಕೆಲಸ ಮಾಡಿದಾಗ ಎಲ್ಲವೂ ಚೆನ್ನಾಗಿತ್ತು. ಈಗ 24 ವರ್ಷದ ನಂತರ ನನ್ನ ಬಗ್ಗೆ ಯೋಚಿಸಿದ್ದಕ್ಕೆ ಆದರ್ಶ ಮಗಳಾಗದೆ ಯಾರಿಗೂ ಬೇಡವಾಗಿದ್ದೇನೆ. ತಂದೆ ಹೆಸರನ್ನು ಬಳಸಬಾರದೆಂಬ ಮಾತು ಬರುತ್ತಿವೆ’ ಎಂದಿದ್ದಾರೆ.

‘ಈ ರೀತಿ ಕಾಮೆಂಟ್ ಮಾಡುತ್ತಿರುವವರು ಯಾರೆಂದು ಗೊತ್ತು. ಅವರೆಲ್ಲರೂ ಒಂದು ಕಡೆ ಸೇರಿ ನನ್ನ ಆಧಾರ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಸೇರಿದಂತೆ ಹಲವು ಕಡೆ ತಂದೆ ಹೆಸರನ್ನು ಹೇಗೆ ತೆಗೆಯಬೇಕೆಂದು ಹೇಳಲಿ. ಹೆಸರು ತೆಗೆದರೆ ಅವರು ನನ್ನ ತಂದೆ ಎಂಬ ಸತ್ಯ ಇಲ್ಲವಾಗುತ್ತದೆಯೇ. 24 ವರ್ಷದ ಹಿಂದೆ ಅವರ ಜೀವನದಿಂದ ನನ್ನನ್ನು ತೆಗೆದುಬಿಟ್ಟಿರಿ. ಈಗ ಹೆಸರಿನ ಮುಂದೆಯೇ ಅವರನ್ನು ತೆಗೆಯಲು ಮುಂದಾಗಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

’ಕೈ‘ ಸೇರಲು ಯತ್ನ 

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಕ್ರಿಯವಾಗಿದ್ದ ನಿಶಾ, ಕಾಂಗ್ರೆಸ್ ಸೇರಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನಾಯಕರ ಜೊತೆಯೂ ಕಾಣಿಸಿಕೊಂಡಿದ್ದರು. ಪಕ್ಷ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.

ಈ ಕುರಿತು ಆಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಶಿವಕುಮಾರ್, ‘ತಂದೆ–ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ’ ಎಂದಿದ್ದರು.

‘ಮೋದಿ ಭೇಟಿ ಮಾಡಿಸಲಿಲ್ಲ’

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ ನನ್ನ ತಾಯಿಗೆ ತಂದೆ ಕಪಾಳಕ್ಕೆ ಹೊಡೆದರು. ಚಿಕ್ಕಮ್ಮನ ಮಗ ನನ್ನ ತಮ್ಮನಿಗೆ ಹೊಡೆದ. ಮನೆಯಿಂದ ಸಾಮಗ್ರಿ ಹೊರ ಹಾಕಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ  ಬಂದಾಗ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡೆ. ಆದರೆ ಬೇಕೆಂದೇ ಭೇಟಿ ಮಾಡಿಸಲಿಲ್ಲ. ಇದೆಂಥಾ ನ್ಯಾಯ‘ ಎಂದು ನಿಶಾ ಪ್ರಶ್ನಿಸಿದ್ದಾರೆ.

'ನಿಮ್ಮ ಮಗಳಿಗೆ ಯಾಕೆ ಒಂದು ದಾರಿ ತೋರಿಸಲಿಲ್ಲ ಎಂದು ನನ್ನ ತಂದೆಯನ್ನು ಪ್ರಶ್ನಿಸಿ. ನನ್ನಿಂದ ಮಾತ್ರ ಸರಿಯಾದುದನ್ನು ಬಯಸಿದರೆ ಸಾಕೇ? ಅವರು ಸರಿಯಾಗಿರಬೇಕಲ್ಲವೇ? ಮಾತನಾಡಲು ನನ್ನ ಬಳಿ ಸಾಕಷ್ಟಿದೆ. ನನ್ನನ್ನು ಶಾಂತವಾಗಿರಲು ಬಿಡಿ. ಇಲ್ಲದಿದ್ದರೆ ನೀವು ಎಲ್ಲಿ ತಲೆ ಎತ್ತಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೊ ಅಲ್ಲಿಗೆ ವಿಡಿಯೊಗಳನ್ನು ಕಳಿಸುತ್ತೇನೆ’ ಎಂದು ತಂದೆಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT