ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಸಹೋದರನ ಭವಿಷ್ಯಕ್ಕಾಗಿ ಡಿಕೆಶಿ ಕನಕಪುರ ತ್ಯಾಗ?

ಚನ್ನಪಟ್ಟಣ ಗೆದ್ದು ಜಿಲ್ಲೆಯಲ್ಲಿ ಜೆಡಿಎಸ್ ನಿರ್ನಾಮ ಮಾಡಲು ತಂತ್ರ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ. ಸುರೇಶ್ ಸೋಲಿನಿಂದ ಆಘಾತಕ್ಕೊಳಗಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ನೆಲೆ ಕನಕಪುರವನ್ನು ಸಹೋದರನಿಗೆ ಬಿಟ್ಟು ಕೊಡುತ್ತಾರೆಯೇ?

– ‘ಮತದಾರರು ಬಯಸಿದರೆ, ಪಕ್ಷ ತೀರ್ಮಾನಿಸಿದರೆ ಸ್ಪರ್ಧಿಸದೆ ನನಗೆ ಬೇರೆ ವಿಧಿಯೇ ಇಲ್ಲ’ ಎಂದು ಹೇಳುವ ಮೂಲಕ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿರುವ ಬೆನ್ನಲ್ಲೇ ಇಂತಹದ್ದೊಂದು ಚರ್ಚೆ ಗರಿಗೆದರಿದೆ.

ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರವಿದ್ದರೂ, ತಾನು ಉಪಮುಖ್ಯಮಂತ್ರಿ ಆಗಿದ್ದರೂ ಸಹೋದರ ಸೋತಿರುವುದು ಶಿವಕುಮಾರ್ ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ. ಇದರಿಂದಾಗಿ, ಜಿಲ್ಲೆಯಲ್ಲಿ ನಾಲ್ಕು ದಶಕಗಳಿಂದ ನಡೆಯುತ್ತಿರುವ ಎಚ್‌.ಡಿ. ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ಕುಟುಂಬದ ರಾಜಕೀಯ ಸಮರದಲ್ಲಿ ಗೌಡರ ಕೈ ಮೇಲಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಡಿ.ಕೆ ಸಹೋದರರು ಕಾಯುತ್ತಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ: ‘ಚನ್ನಪಟ್ಟಣದತ್ತ ಶಿವಕುಮಾರ್ ಚಿತ್ತ ಹರಿಸಿರುವುದರ ಹಿಂದೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರವಿದೆ. ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರವನ್ನು ‘ಕೈ’ ವಶ ಮಾಡಿಕೊಂಡು ಸೋಲಿನ ಸೇಡು ತೀರಿಸಿಕೊಳ್ಳುವುದು ಮತ್ತು ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಇಲ್ಲವಾಗಿಸುವುದು ಅವರ ಲೆಕ್ಕಾಚಾರವಾಗಿದೆ’ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿವಕುಮಾರ್ ಹಿಂದೆ ಸಾತನೂರನ್ನು ಪ್ರತಿನಿಧಿಸುತ್ತಿದ್ದಾಗ ಚನ್ನಪಟ್ಟಣದ ಈಗಿನ ವಿರುಪಾಕ್ಷಿಪುರ ಹೋಬಳಿ ಸೇರಿದಂತೆ ಕೆಲ ಗ್ರಾಮಗಳು ಆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಇಲ್ಲಿ ಅವರ ಸಂಬಂಧಿಕರು ಹೆಚ್ಚಾಗಿರುವುದರಿಂದ ಈಗಲೂ ಅಲ್ಲಿ ಡಿ.ಕೆ ಸಹೋದರರ ಹಿಡಿತವಿದೆ. ಅವರ ತಂಗಿಯನ್ನು ಚನ್ನಪಟ್ಟಣಕ್ಕೆ ಮದುವೆ ಮಾಡಿಕೊಟ್ಟಿರುವುದರಿಂದ ಕ್ಷೇತ್ರದ ಒಡನಾಟವಿದೆ. ಹಾಗಾಗಿ, ಕ್ಷೇತ್ರವು ಅವರ ಸ್ಪರ್ಧೆಗೆ ಪೂರಕವಾಗಿದೆ’ ಎಂದರು.

‘ಡಿ.ಕೆ. ಸುರೇಶ್ ಬದಲಿಗೆ ಶಿವಕುಮಾರ್ ಸ್ಪರ್ಧಿಸುವುದರಿಂದ ಗೆಲುವಿನ ಸಾಧ್ಯತೆ ಹೆಚ್ಚು. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಅವರಿಗೆ ಕ್ಷೇತ್ರದಲ್ಲಿ ಪ್ರಭಾವಿಶಾಲಿ ಮತ್ತು ನಿರ್ಣಾಯಕರಾಗಿರುವ ಒಕ್ಕಲಿಗರು ಸೇರಿದಂತೆ ಅಹಿಂದ ವರ್ಗಗಳು ಕೈ ಹಿಡಿಯಬಹುದೆಂಬ ವಿಶ್ವಾಸವಿದೆ. ಅದೇ ಕಾರಣಕ್ಕೆ ಕ್ಷೇತ್ರದ ಹೋಬಳಿಗಳಿಗೆ ಭೇಟಿ ನೀಡಿ ರಾಜಕೀಯ ವಾತಾವರಣ ಪರಿಶೀಲಿಸುತ್ತಿದ್ದಾರೆ’ ಎನ್ನುತ್ತಾರೆ.

ಶಿವಕುಮಾರ್ ಚನ್ನಪಟ್ಟಣಕ್ಕೆ ಬಂದು ಗೆದ್ದರೆ ಕನಕಪುರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಸುರೇಶ್ ಸುಲಭವಾಗಿ ಗೆಲ್ಲುತ್ತಾರೆ. ಆಗ ಸಹೋದರನಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ಕೊಡಿಸಿ, ರಾಜ್ಯ ರಾಜಕಾರಣದಲ್ಲಿ ಸಕ್ರಿಯಗೊಳಿಸುವ ಆಲೋಚನೆ ಶಿವಕುಮಾರ್‌ ಅವರದ್ದು. ಸದ್ಯದ ಸ್ಥಿತಿ ಹೀಗಿದ್ದು, ಮುಂದೆ ಎದುರಾಳಿಗಳ ಪ್ರತಿತಂತ್ರಕ್ಕೆ ಸಹೋದರರ ನಡೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆತ್ಮವಿಶ್ವಾಸ ಹೆಚ್ಚಿಸಿದ ಮತಪ್ರಮಾಣ

ಚನ್ನಪಟ್ಟಣ ಕ್ಷೇತ್ರದಲ್ಲಿ ವರ್ಷದ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅವರು 96592 ಮತ ಪಡೆದು 15915 ಲೀಡ್‌ನಲ್ಲಿ ಗೆದ್ದಿದ್ದರು. ಬಿಜೆಪಿಯ ಯೋಗೇಶ್ವರ್ 80677 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಕೇವಲ 15374  ಮತ ಪಡೆದಿದ್ದರು. ಅದಾದ ವರ್ಷದ ಬಳಿಕ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ 85357 ಮತ ಪಡೆದಿದ್ದಾರೆ. ಬಿಜೆಪಿ–ಜೆಡಿಎಸ್ ಒಂದಾಗಿಯೂ ಡಾ. ಸಿ.ಎನ್. ಮಂಜುನಾಥ್ 106971 ಮತಗಳೊಂದಿಗೆ 21614 ಮತಗಳ ಮುನ್ನಡೆಯಷ್ಟೇ ಪಡೆಯಲು ಸಾಧ್ಯವಾಗಿದೆ. ಕಾಂಗ್ರೆಸ್‌ ಮತಗಳಿಕೆ 69983ರಷ್ಟು ಏರಿಕೆಯಾಗಿದೆ. ಸಹೋದರರ ಪ್ರಯತ್ನವು ಪಕ್ಷದ ಮತಬ್ಯಾಂಕ್ ಅನ್ನು ಗಣನೀಯವಾಗಿ ವೃದ್ಧಿಸಿದೆ. ಕ್ಷೇತ್ರ ‘ಕೈ’ ವಶ ಮಾಡಿಕೊಳ್ಳಬೇಕೆಂಬ ಸಹೋದರರ ಆಲೋಚನೆಗೆ ಇದು ಸಹ ಪ್ರಮುಖ ಕಾರಣವಾಗಿದೆ.

ಎಚ್‌ಡಿಕೆ ತಡೆಯುವ ತಂತ್ರ!

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ತಾವು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ರಾಜಕೀಯ ಭವಿಷ್ಯ ರೂಪಿಸುವ ಯೋಚನೆಯಲ್ಲಿದ್ದಾರೆ. ಜೆಡಿಎಸ್‌ ಮುಖಂಡರು ಸಹ ನಿಖಿಲ್‌ ಸ್ಪರ್ಧೆ ಪರ ಒಲವು ತೋರಿದ್ದಾರೆ. ಈ ಸೂಕ್ಷ್ಮ ಅರಿತಿರುವ ಡಿ.ಕೆ. ಶಿವಕುಮಾರ್ ಅವರು ನಿಖಿಲ್‌  ಕಣಕ್ಕಿಳಿಯದಂತೆ ತಡೆಯುವ ತಂತ್ರವಾಗಿ ಈ ದಾಳ ಉರುಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT