ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಕಳೆಗಟ್ಟಿದ ಕೆಂಗಲ್ ಐಯ್ಯನಗುಡಿ ದನಗಳ ಜಾತ್ರೆ

ಎಚ್.ಎಂ. ರಮೇಶ್
Published 19 ಜನವರಿ 2024, 5:40 IST
Last Updated 19 ಜನವರಿ 2024, 5:40 IST
ಅಕ್ಷರ ಗಾತ್ರ

ಚನ್ನಪಟ್ಟಣ: ಐಯ್ಯನಗುಡಿ ದನಗಳ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ದನಗಳ ಜಾತ್ರೆ ಈ ವರ್ಷ ಕಳೆಕಟ್ಟಿದೆ. ದನಗಳ ವ್ಯಾಪಾರ ಭರ್ಜರಿಯಾಗಿ ಸಾಗಿದೆ.

ನಾಲ್ಕು ವರ್ಷಗಳಿಂದ ಕೊರೊನಾ ಮತ್ತಿತರ ಕಾರಣಗಳಿಂದ ಕಳೆಗುಂದಿದ್ದ ಜಾತ್ರೆ ಈ ವರ್ಷ ಭರ್ಜರಿಯಾಗಿ ಕಳೆಕಟ್ಟಿದೆ. ವಿವಿಧ ತಳಿಯ ನೂರಾರು ಜಾನುವಾರು, ರೈತರು, ವರ್ತಕರು ಬೀಡುಬಿಟ್ಟಿದ್ದು, ಗತವೈಭವ ಮರುಕಳಿಸಿದೆ.

ಸುಗ್ಗಿಹಬ್ಬ ಸಂಕ್ರಾಂತಿ ಬಳಿಕ ರಾಸುಗಳನ್ನು ಜಾತ್ರೆಗೆ ತರುವ ರೈತರು ವ್ಯಾಪಾರ ಮಾಡಿ ತಮಗೆ ಬೇಕಾದ ರಾಸುಗಳನ್ನು ಕೊಂಡುಕೊಳ್ಳುವುದು ಇಲ್ಲಿನ ವಾಡಿಕೆ.


ತಾಲ್ಲೂಕಿನ ಅತಿದೊಡ್ಡ ಜಾನುವಾರು ಜಾತ್ರೆ ಎಂದೆ ಪ್ರಸಿದ್ಧಿ ಪಡೆದಿರುವ ಕೆಂಗಲ್ ಆಂಜನೇಯ ಜಾತ್ರೆಯಲ್ಲಿ ಬೆಂಗಳೂರು –ಮೈಸೂರು ಹೆದ್ದಾರಿ ಉದ್ದಕ್ಕೂ ದನಗಳನ್ನು ಕಟ್ಟಿರಲಾಗುತ್ತದೆ. ಹೆದ್ದಾರಿಗುಂಟವೇ ಭರ್ಜರಿ ವ್ಯಾಪಾರ ನಡೆಯುತ್ತದೆ. 

 
ಅತ್ಯುತ್ತಮ ಜೋಡಿ ಎತ್ತುಗಳನ್ನು ಜಾತ್ರೆಗೆ ಕರೆ ತರುವಾಗ ರೈತರು ತಮಟೆ ವಾದ್ಯ, ಪೂಜಾ ಕುಣಿತದೊಂದಿಗೆ ಕರೆ ತರುವ ವಾಡಿಕೆ  ಇಲ್ಲಿದೆ. ಕೆಲವರು ಪೆಂಡಾಲ್ ಹಾಕಿಸಿ ತಮ್ಮ ಎತ್ತುಗಳನ್ನು ಅದರ ಕೆಳಗೆ ಕಟ್ಟಿರುತ್ತಾರೆ.

 
₹50 ಸಾವಿರದಿಂದ ₹5 ಲಕ್ಷದವರೆಗೆ:

ಜಾತ್ರೆಯಲ್ಲಿ ರಾಮನಗರ ಅಷ್ಟೆ ಅಲ್ಲದೆ ವಿವಿಧ ಜಿಲ್ಲೆಗಳಿಂದ ಜಾನುವಾರುಗಳನ್ನು ಮಾರಾಟಕ್ಕೆ ತರಲಾಗಿದೆ. ಒಂಟಿ ಹಸುಗಳಿಗೆ ₹50 ಸಾವಿರದಿಂದ ₹2 ಲಕ್ಷದವರೆಗೆ ಬೆಲೆ ಇದೆ. ಒಂಟಿ ಕರುಗಳಿಗೆ ₹80 ಸಾವಿರದಿಂದ ₹1.50 ಲಕ್ಷದವರೆಗೆ ಮತ್ತು ಜೋಡಿ ಎತ್ತುಗಳಿಗೆ ₹ 3 ಲಕ್ಷದಿಂದ ₹ 5 ಲಕ್ಷಕ್ಕೆ  ಬಿಕರಿಯಾಗುತ್ತಿವೆ. 

ಚನ್ನಪಟ್ಟಣ, ರಾಮನಗರ, ಕನಕಪುರ, ಮದ್ದೂರು, ಕುಣಿಗಲ್, ತುಮಕೂರು, ಮಾಗಡಿ, ಆನೇಕಲ್, ದೊಡ್ಡಬಳ್ಳಾಪುರ, ನೆಲಮಂಗಲ, ಕೋಲಾರ, ತುರುವೇಕೆರೆ, ತಿಪಟೂರು ತಾಲ್ಲೂಕಿನ ಜಾನುವಾರುಗಳಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಜಾನುವಾರುಗಳನ್ನು  ಮಾರಾಟಕ್ಕೆ ತರಲಾಗಿದೆ. 


ನಾಲ್ಕು ವರ್ಷದಿಂದ ಜಾತ್ರೆ ಇರಲಿಲ್ಲ: ಕೊರೊನಾ, ಜಾನುವಾರುಗಳ ಕಾಲು,ಬಾಯಿ ರೋಗ ದಿಂದ ಜಿಲ್ಲಾಡಳಿತ ಕೆಂಗಲ್ ಜಾತ್ರೆಯಲ್ಲಿ ದನಗಳ ವ್ಯಾಪಾರವನ್ನು ಕಳೆದ ನಾಲ್ಕು ವರ್ಷದಿಂದ ನಿಷೇಧಿಸಿತ್ತು.

ಕಳೆದ ವರ್ಷ ಜಿಲ್ಲೆಯಲ್ಲಿ ಹಲವಾರು ಜಾನುವಾರುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದವು.ರೋಗ ಉಲ್ಬಣವಾಗುವ ಭೀತಿಯಿಂದ ಜಾನುವಾರು ಜಾತ್ರೆ ನಿಷೇಧಿಸಲಾಗಿತ್ತು. ಆದರೂ, ರೈತರು ಜಾನುವಾರು ವ್ಯಾಪಾರದಲ್ಲಿ ತೊಡಗಿದ್ದರು. ಆಗ ಅಧಿಕಾರಿಗಳು ಹಾಗೂ ಪೊಲೀಸರು ರೈತರ ಮನವೊಲಿಸಿ ತೆರವುಗೊಳಿಸಿದ್ದರು.

ನಾಲ್ಕು ವರ್ಷಗಳಿಂದ ದನಗಳ ಜಾತ್ರೆ ಇಲ್ಲದ ಕಾರಣ ಈ ಬಾರಿ ದನಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಜನ ಜಾನುವಾರುಗಳಿಗೆ ಬೇಕಾದ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿಯು ಆಯೋಜಿಸಿದೆ.

ಜಾತ್ರೆಯಲ್ಲಿ ವ್ಯಾಪಾರಸ್ಥರು ವಿವಿಧ ಜಿಲ್ಲೆಗಳಿಂದ ಬರುತ್ತಾರೆ. ಇಲ್ಲಿ ವ್ಯಾಪಾರ ಮಾಡುವುದು ನಿಜಕ್ಕೂ ಒಳ್ಳೆಯ ಅನುಭವ ಎಂದು ರೈತ ರಾಮಣ್ಣ ಹೇಳುತ್ತಾರೆ.

ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಹಳ್ಳಿಕಾರ್ ತಳಿಯ ಹೋರಿ ಏಕಲವ್ಯ
ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಹಳ್ಳಿಕಾರ್ ತಳಿಯ ಹೋರಿ ಏಕಲವ್ಯ
ಹಳ್ಳಿಕಾರ್ ಹೋರಿ ಏಕಲವ್ಯ ವಿಶೇಷ ಆಕರ್ಷಣೆ:
ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಂ ಅವರು ಜಾತ್ರೆಗೆ ತಂದಿರುವ ಏಕಲವ್ಯ ಹೆಸರಿನ ಹಳ್ಳಿಕಾರ್ ತಳಿಯ ಹೋರಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಏಕಲವ್ಯನ ಮಗಳು ಪುಣ್ಯಕೋಟಿ ಹಾಗೂ ಮಗ (ಇನ್ನೂ ಹೆಸರಿಟ್ಟಿಲ್ಲ) ಸಹ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಜಾತ್ರೆಗೆ ಬಂದವರು ಏಕಲವ್ಯ ಹಾಗೂ ಮಕ್ಕಳನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಅವುಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವ ಫೋಟೋ ತೆಗೆಸಿಕೊಳ್ಳುವವರ ಸಂಖ್ಯೆ ಮಿತಿಮೀರಿದೆ. ಈ ಹೋರಿಯನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಕರೆತರಲಾಗಿದೆ. ಇದರ ಮಾರಾಟ ಇಲ್ಲ ಎಂದು ಹೋರಿಯ ಉಸ್ತುವಾರಿ ಹೊತ್ತಿರುವ ಯಡಿಯೂರಪ್ಪ ತಿಳಿಸಿದರು. ಇದನ್ನು 10 ತಿಂಗಳ ಕರುವಾಗಿದ್ದಾಗ ಬನ್ನೂರಿನ ಕೃಷ್ಣೇಗೌಡ ಎಂಬುವರು ರೂ. 1.75 ಲಕ್ಷಕ್ಕೆ ಖರೀದಿಸಿದ್ದರು. ಅವರಿಂದ ಅದನ್ನು ಮಸಾಲ ಜಯರಾಂ ಅವರು ರೂ. 8 ಲಕ್ಷಕ್ಕೆ ಖರೀದಿಸಿದ್ದಾರೆ. ಅದನ್ನು ಈಗ ರೂ. 16 ರಿಂದ 25 ಲಕ್ಷದವರೆಗೆ ಬೆಲೆ ನೀಡಿ ಕೊಂಡುಕೊಳ್ಳಲು ಕೆಲವರು ಮುಂದೆ ಬಂದಿದ್ದರು. ಆದರೆ ಅದನ್ನು ನಮ್ಮ ಮಾಜಿ ಶಾಸಕರು ಮಾರಾಟ ಮಾಡುವುದಿಲ್ಲ. ಅದನ್ನು ತಳಿಗೋಸ್ಕರ ಇಟ್ಟುಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT