ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ನಗರಸಭೆಯಲ್ಲಿ ಲಂಚಾವತಾರ ಗದ್ದಲ

ಭಗವದ್ಗೀತೆ ಮೇಲೆ ಪ್ರಮಾಣ ಮಾಡಲು ಸದಸ್ಯರೊಬ್ಬರ ಸವಾಲು
Published 30 ನವೆಂಬರ್ 2023, 7:45 IST
Last Updated 30 ನವೆಂಬರ್ 2023, 7:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರಸಭೆಯಲ್ಲಿ ಇ–ಖಾತೆ ಸೇರಿದಂತೆ ಪ್ರತಿಯೊಂದು ಕೆಲಸದಲ್ಲಿಯೂ ಲಂಚಾವತಾರ ತಾಂಡವವಾಡುತ್ತಿದೆ. ಈ ಬಗ್ಗೆ ಭಗವದ್ಗೀತೆ ಮೇಲೆ ಪ್ರಮಾಣ ಮಾಡಲು ಸಿದ್ಧ ಎಂದು ಆಡಳಿತ ಪಕ್ಷದ ಸದಸ್ಯರೊಬ್ಬರು ಸವಾಲು ಹಾಕಿದ ಪ್ರಸಂಗ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭಾಧ್ಯಕ್ಷ ಪಿ.ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯ ಶ್ರೀನಿವಾಸಮೂರ್ತಿ, ನಗರಸಭೆಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸವಾಗುತ್ತಿಲ್ಲ. ನಗರಸಭೆ ಸದಸ್ಯರು ಹೇಳಿದ ಯಾವುದೇ ಖಾತೆ ಕೆಲಸ ಆಗುತ್ತಿಲ್ಲ. ಆದರೆ, ಮಧ್ಯವರ್ತಿಗಳು ತಮ್ಮ ಕೆಲಸ ಸಲೀಸಾಗಿ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಹಣ ನೀಡದ ಹೊರತು ಒಂದು ಕಡತವೂ ಅಲುಗಾಡುವುದಿಲ್ಲ. ಲಂಚಾವತಾರ ವಿಚಾರ ಸುಳ್ಳು ಎನ್ನುವುದಾದರೆ ಭಗವದ್ಗಿತೆ ಮೇಲೆ ಆಣೆ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮೀತಿ ಮೀರಿದೆ. ಪ್ರತಿದಿನ ಇ-ಖಾತೆಗಾಗಿ ಜನ ಅಲೆಯುವಂತಾಗಿದೆ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಲಿಯಾಕತ್, ’ವಾರ್ಡ್‌ನಲ್ಲಿ ಸಾರ್ವಜನಿಕರೊಬ್ಬರಿಂದ ಇ-ಖಾತೆ ಮಾಡಿಸಿಕೊಡುವುದಾಗಿ ಮಧ್ಯವರ್ತಿಯೊಬ್ಬರು ₹15 ಸಾವಿರ ಪಡೆದುಕೊಂಡಿದ್ದಾರೆ. ಮಧ್ಯವರ್ತಿಗಳ ಕೆಲಸ ಸಲೀಸಾಗಿ ನಡೆಯುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಸಿ.ಪುಟ್ಟಸ್ವಾಮಿ, ನಗರಸಭೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸಾರ್ವಜನಿಕರು ನೇರವಾಗಿ ನಗರಸಭೆ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಕೆಲಸ ಕಾರ್ಯ ಮಾಡಿಸಿಕೊಳ್ಳಬಹುದು. ಉಪನೋಂದಣಿ ಕಚೇರಿ ನಿವೇಶನ ಹಾಗೂ ಮನೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ದರ ನಿಗದಿಪಡಿಸಿದೆ. ಅದರಂತೆ ಕಂದಾಯ ವಸೂಲಿ ಮಾಡುತ್ತಿದೆ. ಹಾಗೆಯೇ ಇ-ಖಾತೆ ಪ್ರಕ್ರಿಯೆ ಸಂಬಂಧ ಆಗುತ್ತಿರುವ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಸದಸ್ಯ ವಾಸಿಲ್ ಆಲಿಖಾನ್ ಮಾತನಾಡಿ, ‘ನಗರಸಭೆ ವಶಪಡಿಸಿಕೊಂಡ ಪ್ಲಾಸ್ಟಿಕ್ ದಾಸ್ತಾನು ಯಾವುದೇ ನಿಯಮ ಅನುಸರಿಸದೇ ಖಾಸಗಿ ಕಂಪನಿಯೊಂದಕ್ಕೆ ನೀಡಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಎರಡು ತಿಂಗಳ ಹಿಂದೆಯೇ ನಗರಸಭೆ ಪರಿಸರ ಇಲಾಖೆಗೆ ಪತ್ರ ಬರೆದಿದ್ದೇನೆ. ಇನ್ನು ಉತ್ತರ ನೀಡಿಲ್ಲ’ ಎಂದು ಪ್ರಶ್ನಿಸಿದರು.

ವಶಪಡಿಸಿಕೊಂಡ ಪಾಸ್ಟಿಕ್ ಅನ್ನು ಮೊದಲು ತುಂಡರಿಸಬೇಕು ಎನ್ನುವ ನಿಯಮವಿದೆ. ಆ ನಂತರ ಪರಿಸರ ಇಲಾಖೆ ಮಾನದಂಡ ಅನುಸರಿಸಿ ಮರುಬಳಕೆ ಮಾಡುವ ಕಂಪನಿಗಳಿಗೆ ಅದನ್ನು ಮಾರಾಟ ಮಾಡಬೇಕು. ಆದರೆ, ನಗರಸಭೆ ವಶಪಡಿಸಿಕೊಂಡ ಪ್ಲಾಸ್ಟಿಕ್ ಅನ್ನು ಯಥಾವತ್ತಾಗಿ ಕಂಪನಿಯೊಂದಕ್ಕೆ ನೀಡಿದೆ. ಈ ಪ್ರಕರಣ ಕುರಿತು ಅಧಿಕಾರಿಗಳು ಉತ್ತರ ನೀಡಿ ಎಂದು ಆಗ್ರಹಿಸಿದರು.

ನಗರಸಭೆ ಪರಿಸರ ಎಂಜಿನಿಯರ್ ಮೀನಾಕ್ಷಿ ಮಾತನಾಡಿ, ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ‌ ಮಾರ್ಗಸೂಚಿಯಂತೆ ಪ್ಲಾಸ್ಟಿಕ್ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ಮಾಹಿತಿ ಕೊರತೆಯಿಂದಾಗಿ ಪ್ಲಾಸ್ಟಿಕ್ ತುಂಡರಿಸುವ ಕೆಲಸ ಮಾಡಿರಲಿಲ್ಲ. ಈಗ ಪ್ಲಾಸ್ಟಿಕ್ ದಾಸ್ತಾನನ್ನು ವಾಪಸ್ ಪಡೆದು ಮರಳಿ ಗೋದಾಮಿನಲ್ಲಿ ಇರಿಸಲಾಗಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷೆ ನಿಗಾರ್ ಬೇಗಂ, ಸದಸ್ಯರು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT