ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | ಸಾರ್ವಜನಿಕ ಶೌಚಾಲಯ ಕೊರತೆ: ಬಯಲು ಬಹಿರ್ದೆಸೆ ಹಿಂಸೆ

Published 23 ಡಿಸೆಂಬರ್ 2023, 4:06 IST
Last Updated 23 ಡಿಸೆಂಬರ್ 2023, 4:06 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದಾಗಿ ಸಾರ್ವಜನಿಕರು ಸಿಕ್ಕಸಿಕ್ಕ ಖಾಲಿ ಜಾಗಗಳನ್ನು ಬಯಲು ಶೌಚಾಲಯ ಮಾಡಿಕೊಳ್ಳುತ್ತಿದ್ದಾರೆ.

ನಿತ್ಯ ಸಾವಿರಾರು ಮಂದಿ ಕೆಲಸಗಳಿಗೆ ನಗರಕ್ಕೆ ಬಂದು ಹೋಗುತ್ತಾರೆ. ಆದರೆ ನಗರದಲ್ಲಿ ಕೇವಲ ಎರಡು ಮಾತ್ರ ಸಾರ್ವಜನಿಕ ಶೌಚಾಲಯಗಳಿವೆ. ನಗರದ ಸರ್ಕಾರಿ ಬಸ್ ನಿಲ್ದಾಣ ಹಾಗೂ ಕೊಲ್ಲಾಪುರದಮ್ಮನ ದೇವಸ್ಥಾನ ಅವರಣ ಹೊರತುಪಡಿಸಿದರೆ ಬೇರೆ ಎಲ್ಲೂ ಸಾರ್ವಜನಿಕ ಶೌಚಾಲಯಗಳಿಲ್ಲ. ಇದರಿಂದಾಗಿ ನಗರಕ್ಕೆ ಬರುವ ಸಾರ್ವಜನಿಕರು ಶೌಚಕ್ಕಾಗಿ ಖಾಲಿ ಜಾಗ ಆಶ್ರಯಿಸುವಂತಾಗಿದೆ.

ಈ ಹಿಂದೆ ನಗರದ ಖಾಸಗಿ ಬಸ್ ನಿಲ್ದಾಣ ಮತ್ತು ನಗರಸಭೆ ಆವರಣದಲ್ಲಿ ಎರಡು ದೊಡ್ಡ ಸಾರ್ವಜನಿಕ ಶೌಚಾಲಯ ಇದ್ದವು. ಜೊತೆಗೆ ಎಂ.ಜಿ.ರಸ್ತೆ, ಪೇಟೆಬೀದಿ, ಕೆಲವು ಮುಸ್ಲಿಂ ವಾರ್ಡ್ಸೇ ರಿದಂತೆ ಅಲ್ಲಲ್ಲಿ ಸಣ್ಣಸಣ್ಣ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಖಾಸಗಿ ಬಸ್ ನಿಲ್ದಾಣ ಜಾಗದಲ್ಲಿ ಸುಸಜ್ಜಿತ ನಿಲ್ದಾಣ ನಿರ್ಮಾಣ ಮಾಡಲು ಅಲ್ಲಿದ್ದ ಶೌಚಾಲಯ ಕೆಡವಲಾಯಿತು. ಇನ್ನು ನಗರಸಭೆ ಆವರಣದಲ್ಲಿದ್ದ ಶೌಚಾಲಯವನ್ನು ಸೂಕ್ತ ನಿರ್ವಹಣೆ ಇಲ್ಲದೆ ಕೆಡವಲಾಯಿತು. ಕರಬಲ ಮೈದಾನ ಸೇರಿದಂತೆ ಸಣ್ಣಪುಟ್ಟ ಶೌಚಾಲಯ ಸಹ ನಿರ್ವಹಣೆ ಕೊರತೆಯಿಂದಾಗಿ ಪಾಳುಬಿದ್ದಿವೆ.

ಈಗ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೋಗುವ ರಸ್ತೆ, ತಾಲ್ಲೂಕು ಕಚೇರಿಯ ಹಿಂಭಾಗ, ತಾಲ್ಲೂಕು ಪಂಚಾಯಿತಿ  ಹಿಂಭಾಗ, ಲೋಕೋಪಯೋಗಿ ಇಲಾಖೆ ಕಚೇರಿಯ ಬಳಿ, ಗಾಂಧಿ ಭವನದ ಮುಂಭಾಗ, ಕುವೆಂಪು ನಗರದ ಗಲ್ಲಿ ರಸ್ತೆ, ಶೇರು ಹೋಟೆಲ್ ಬಳಿ ಇರುವ ಖಾಲಿ ಜಾಗ, ಕುಡಿ ನೀರು ಕಟ್ಟೆ ಬಳಿಯ ಪಾಳು ಜಾಗ ಸೇರಿದಂತೆ ನಗರದ ಖಾಲಿ ಜಾಗಗಳು ಸಾರ್ವಜನಿಕ ಬಯಲು ಶೌಚಾಲಯಗಳಾಗಿ ಮಾರ್ಪಟ್ಟಿವೆ. 


ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸ್ತೆಯು ಬಯಲು ಶೌಚಾಲಯವಾಗಿರುವ ಕಾರಣ ಇಲ್ಲಿ ಪ್ರತಿನಿತ್ಯ ಓಡಾಡುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದರಿಂದ ನಗರದ ತುಂಬಾ ಗಬ್ಬು ವಾಸನೆ ಹರಡುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಾಲೇಜಿನ ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ಪ್ರತಿನಿತ್ಯ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಾರೆ.

ಕಾಲೇಜು ಆವರಣದಲ್ಲಿ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ವಾಯುವಿಹಾರ ಮತ್ತು ವಿವಿಧ ಆಟ ಆಡಲು ನೂರಾರು ಮಂದಿ ಈ ರಸ್ತೆಯನ್ನು ಬಳಸುತ್ತಾರೆ. ಆದರೆ ಈ ರಸ್ತೆಯಲ್ಲಿ ಮಿತಿಮೀರಿರುವ ಮೂತ್ರ ವಿಸರ್ಜನೆಯ ಕಾರಣ ಸಾಕಷ್ಟು ಕಿರಿಕಿರಿಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.


ಇದಲ್ಲದೆ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ತಮ್ಮ ಕೆಲಸ ಕಾರ್ಯಗಳಿಗಾಗಿ ಪ್ರತಿನಿತ್ಯ ಬರುವ ನೂರಾರು ಮಂದಿ ಅದರಲ್ಲೂ ಮಹಿಳೆಯರು ಮೂತ್ರ ವಿಸರ್ಜನೆಗೆ ಪಡಿಪಾಟಲು ಅನುಭವಿಸುವಂತಾಗಿದೆ. ಕೆಲವರು ಅಲ್ಲಲ್ಲೆ ಬಯಲು ಆಶ್ರಯಿಸಿದರೆ, ಮತ್ತೆ ಕೆಲವರು ಸರ್ಕಾರಿ ಬಸ್ ನಿಲ್ದಾಣ ಅಥವಾ ಕೊಲ್ಲಾಪುರದಮ್ಮ ದೇವಸ್ಥಾನದವರೆಗೂ ಬರುವಂತಾಗಿದೆ.

ನಗರದ ಆಯಕಟ್ಟಿನ ಜಾಗದಲ್ಲಿ ಸುಲಭ ಶೌಚಾಲಯಗಳ ವ್ಯವಸ್ಥೆಯಾಗಬೇಕು. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಜನಪ್ರತಿನಿಧಿಗಳು ನಗರದಲ್ಲಿ ಹೆಚ್ಚು ಸಾರ್ವಜನಿಕರು ಓಡಾಡುವ ಜಾಗಗಳನ್ನು ಗುರುತಿಸಿ ಐದು ಆರು ಜಾಗಗಳಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎನ್ನುವುದು ನಗರದ ನಿವಾಸಿಗಳ ಬೇಡಿಕೆ.

ಚನ್ನಪಟ್ಟಣದ ಲೋಕೋಪಯೋಗಿ ಇಲಾಖೆ ಬಳಿ ಸಾರ್ವಜನಿಕರು ಆಶ್ರಯಿಸಿರುವ ಬಯಲು ಶೌಚಾಲಯ
ಚನ್ನಪಟ್ಟಣದ ಲೋಕೋಪಯೋಗಿ ಇಲಾಖೆ ಬಳಿ ಸಾರ್ವಜನಿಕರು ಆಶ್ರಯಿಸಿರುವ ಬಯಲು ಶೌಚಾಲಯ

ಸಾರ್ವಜನಿಕ ಶೌಚಾಲಯಗಳಿಲ್ಲದೆ ಹೊರಗಿನಿಂದ ನಗರಕ್ಕೆ ಬರುವ ಜನರಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲೂ ಮಹಿಳೆಯರ ಪಾಡಂತೂ ಹೇಳತೀರದು. ಇದರಿಂದಾಗಿ ಸಾರ್ವಜನಿಕರು ಅನಿವಾರ್ಯವಾಗಿ ಬಯಲು ಪ್ರದೇಶಗಳ ಮೊರೆ ಹೋಗಬೇಕಿದೆ. ಮೂತ್ರ ವಾಸನೆಯಿಂದ ಎಲ್ಲರಿಗೂ ಕಿರಿಕಿರಿಯಾಗುತ್ತಿದೆ. ಸ್ಥಳೀಯ ಆಡಳಿತ ನಗರದ ಅಲ್ಲಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕು - ಮನೋಹರ್ ಸ್ಥಳೀಯವಾಸಿ ಚನ್ನಪಟ್ಟಣ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT