ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಶಾಲಾ ಕೊಠಡಿಗೆ ನುಗ್ಗುವ ನೀರು

ಬಾಣಗಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ
Published 5 ಜುಲೈ 2024, 4:30 IST
Last Updated 5 ಜುಲೈ 2024, 4:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕುಸಿದ ಕಟ್ಟಡ, ಬಿರುಕು ಬಿಟ್ಟ ಗೋಡೆ, ಮಳೆ ಬಂದರೆ ಸೋರುವ ಹೆಂಚು, ಕಿಷ್ಕಿಂದೆಯಂತಹ ಜಾಗ, ಮಳೆಗಾಲದಲ್ಲಿ ಕೆರೆಯಂತಾಗುವ ಶಾಲಾವರಣ, ಕೊಠಡಿಗೆ ನುಗ್ಗುವ ನೀರು.. ಇದು ತಾಲ್ಲೂಕಿನ ಬಾಣಗಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ.

ಸುಮಾರು 60ಕ್ಕೂ ಹೆಚ್ಚು ವರ್ಷ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 53 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸಮಸ್ಯೆಗಳು ತಾಂಡವವಾಡುತ್ತಿವೆ.

ಶಾಲೆಯಲ್ಲಿ ಒಟ್ಟು ಎಂಟು ಕೊಠಡಿಗಳಿದ್ದು, ಇವುಗಳಲ್ಲಿ ಪಾಠ ಮಾಡಲು ಯೋಗ್ಯವಲ್ಲದ ಎರಡು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಈ ಕೊಠಡಿಗಳ ಹಿಂಭಾಗದ ಗೋಡೆ ಕುಸಿದುಬಿದ್ದಿದೆ. ಒಳಗಿನ ಗೋಡೆ ಬಿರುಕು ಬಿಟ್ಟಿದೆ. ಚಾವಣಿಯಲ್ಲಿ ನೀರು ಸೋರುತ್ತದೆ. ಉಳಿದ ಆರು ಕೊಠಡಿಗಳಲ್ಲಿ ಎರಡು ಕೊಠಡಿ ಸಿಮೆಂಟ್ ಕಟ್ಟಡದವಾಗಿದ್ದು, ಇವು ಸುಸ್ಥಿತಿಯಲ್ಲಿವೆ. ಇದರಲ್ಲಿ ಒಂದನ್ನು ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಕೊಠಡಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿಯೇ ಪುಸ್ತಕ ಮತ್ತಿತರ ಪಾಠ, ಕ್ರೀಡಾ ಸಲಕರಣೆಗಳನ್ನು ಇಡಲಾಗಿದೆ.

ಉಳಿದಂತೆ ನಾಲ್ಕು ಕೊಠಡಿಗಳಿದ್ದು, ಒಂದನ್ನು ಕೂಸಿನ ಮನೆಗಾಗಿ ನೀಡಲಾಗಿದೆ. ಉಳಿದ ಮೂರು ಕೊಠಡಿಗಳು ಹೆಂಚಿನ ಕೊಠಡಿಗಳಾದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ನೀರು ಸೋರುತ್ತವೆ. ತೀರಾ ಹಳೆಯದಾದ ಕಾರಣ ಜೀವ ಕೈಲಿ ಹಿಡಿದು ಮಕ್ಕಳು ಪಾಠ ಕೇಳುವಂತಾಗಿದೆ. ಶಾಲೆಯು ಮುಖ್ಯರಸ್ತೆಗಿಂತ ಕೆಳಮಟ್ಟದಲ್ಲಿರುವ ಕಾರಣ ಮಳೆ ಹೆಚ್ಚಾದಾಗ ನೀರು ಶಾಲಾವರಣಕ್ಕೆ ನುಗ್ಗಿ ಶಾಲಾವರಣ ಕೆರೆಯಂತಾಗುತ್ತದೆ. ಜತೆಗೆ ಎರಡು ಕೊಠಡಿಗಳಿಗೆ ನೀರು ನುಗ್ಗಿ ಅವಾಂತರವಾಗುತ್ತದೆ ಎಂಬುದು ಶಾಲಾ ಶಿಕ್ಷಕರ ಮಾತಾಗಿದೆ.

ಶಿಕ್ಷಕರ ಕೊರತೆ ಇಲ್ಲ: ಶಾಲೆಯಲ್ಲಿ ಸದ್ಯ ಮುಖ್ಯಶಿಕ್ಷಕರೂ ಸೇರಿ ನಾಲ್ಕು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಶಿಕ್ಷಕರ ಕೊರತೆ ಇಲ್ಲದಿದ್ದರೂ 1ರಿಂದ 8 ನೇ ತರಗತಿ ಇರುವ ಕಾರಣ ಹೆಚ್ಚುವರಿ ಶಿಕ್ಷಕರ ಅವಶ್ಯಕತೆ ಇದೆ. ಎಲ್ಲಾ ತರಗತಿಗಳನ್ನು ನಾಲ್ಕು ಮಂದಿ ಶಿಕ್ಷಕರೇ ನಿರ್ವಹಿಸುವ ಕಾರಣ ಪಾಠ ಪ್ರವಚನಗಳು ಹಿಂದುಳಿಯುತ್ತವೆ. ಹೆಚ್ಚುವರಿ ಶಿಕ್ಷಕರನ್ನು ನೇಮಿಸುವ ಅವಶ್ಯಕತೆ ಇದೆ ಎಂದು ಪೋಷಕರು ಮನವಿ ಮಾಡುತ್ತಾರೆ.

ಒಂದು ಕಾಲದಲ್ಲಿ ಈ ಶಾಲೆಗೆ ಉತ್ತಮ ದಾಖಲಾತಿ ಇತ್ತು. ಆದರೆ, ಕಟ್ಟಡದ ದುಸ್ಥಿತಿಯಿಂದಾಗಿ ದಾಖಲಾತಿ ಕುಸಿದಿದೆ. ಪೋಷಕರು ಕಟ್ಟಡದ ದುಸ್ಥಿತಿ ನೋಡಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಲು ಹಿಂಜರಿಯುತ್ತಿದ್ದಾರೆ. ಉತ್ತಮ ಕಟ್ಟಡ ನಿರ್ಮಾಣವಾದರೆ ದಾಖಲಾತಿ ಉತ್ತಮವಾಗುತ್ತದೆ ಎಂಬುದು ಶಿಕ್ಷಕರ ಮಾತಾಗಿದೆ.

ಕಟ್ಟಡದ ದುಸ್ಥಿತಿಯ ಬಗ್ಗೆ ಇಲಾಖೆಗೆ ವರದಿ ನೀಡಲಾಗಿದೆ. ಉಪಯೋಗಕ್ಕೆ ಬಾರದ ಎರಡು ಕೊಠಡಿಗಳನ್ನು ಕೆಡವಿ ಅಲ್ಲಿ ಎರಡು ನೂತನ ಕೊಠಡಿ ನಿರ್ಮಾಣಕ್ಕೆ 2022-23ನೇ ಸಾಲಿನಲ್ಲಿ ಶಾಸಕರ ವಿಶೇಷ ನಿಧಿಯಿಂದ ಸುಮಾರು ₹27 ಲಕ್ಷ ಹಣ ಮಂಜೂರಾಗಿದೆ. ಆದರೆ, ಇನ್ನೂ ಇದು ಕಾರ್ಯಗತವಾಗಿಲ್ಲ ಎಂದು ಮುಖ್ಯಶಿಕ್ಷಕ ವೆಂಕಟರಾಮು ತಿಳಿಸಿದರು.

ಗ್ರಾಮ ಪಂಚಾಯಿತಿ ಹಾಗೂ ಎಸ್‌ಡಿಎಂಸಿ ಸಹಕಾರದೊಂದಿಗೆ ಈ ವರ್ಷದಿಂದ ಆಂಗ್ಲಮಾಧ್ಯಮದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಆದರೆ, ಕೊಠಡಿಗಳ ಸೌಲಭ್ಯ ಇಲ್ಲ. ಜತೆಗೆ ಆಂಗ್ಲಮಾಧ್ಯಮದಲ್ಲಿ ಬೋಧನೆ ಮಾಡಲು ಶಿಕ್ಷಕರ ಅವಶ್ಯಕತೆ ಇದೆ. ಶಾಲಾವರಣ ಬಹಳ ಕಿರಿದಾಗಿದ್ದು, ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಬಹಳ ತೊಂದರೆಯಾಗುತ್ತಿದೆ.

ಶಾಲೆಯ ದುಸ್ಥಿತಿ ಬಗ್ಗೆ ಪ್ರತಿಕ್ರಿಯೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಶಾಲೆಯ ಹಳೆಯ ಕಟ್ಟಡ
ಶಾಲೆಯ ಹಳೆಯ ಕಟ್ಟಡ
ಶಾಲೆಯ ಹಿಂಭಾಗದ ಗೋಡೆ ಕುಸಿದಿರುವುದು
ಶಾಲೆಯ ಹಿಂಭಾಗದ ಗೋಡೆ ಕುಸಿದಿರುವುದು
ಬಿರುಕು ಬಿಟ್ಟ ಗೋಡೆ
ಬಿರುಕು ಬಿಟ್ಟ ಗೋಡೆ

ಶೀಘ್ರ ಕೊಠಡಿ ನಿರ್ಮಾಣ ಭರವಸೆ

ಶಾಲಾ ಕಟ್ಟಡದ ದುಸ್ಥಿತಿ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಶೀಘ್ರ ಕೊಠಡಿ ನಿರ್ಮಿಸಿಕೊಡುವ ಭರವಸೆ ದೊರೆತಿದೆ. ಎರಡು ನೂತನ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದಷ್ಟು ಶೀಘ್ರ ಕೊಠಡಿ ನಿರ್ಮಾಣವಾದರೆ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತದೆ

-ವೆಂಕಟರಾಮು ಮುಖ್ಯಶಿಕ್ಷಕ ಬಾಣಗಹಳ್ಳಿ ಶಾಲೆ.

ಪಾಠ ಪ್ರವಚನಕ್ಕೆ ತೊಂದರೆ

ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಇದೆ. ತೀರಾ ಹಳೆಯ ಹೆಂಚಿನ ಕೊಠಡಿಗಳಲ್ಲಿ ಮಳೆ ಬಂದಾಗ ನೀರು ಸೋರುವುದರಿಂದ ಪಾಠ ಪ್ರವಚನ ಮಾಡಲು ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣ ಮಾಡುವುದು ಅವಶ್ಯಕ. 

-ಡಿ.ಎಚ್.ಪ್ರಸನ್ನ ಶಿಕ್ಷಕ ಬಾಣಗಹಳ್ಳಿ ಶಾಲೆ.

ಶಾಲಾ ಕಟ್ಟಡ ನಿರ್ಮಾಣ ಅವಶ್ಯ

ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಗೆ ಶಾಲೆ ಬಗ್ಗೆ ಮನವಿ ಮಾಡಲಾಗಿದೆ. ಅವರು ಕೊಠಡಿ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಶಾಸಕರ ಸಂಸದರ ಅಧಿಕಾರಿಗಳ ಗಮನವನ್ನು ಸೆಳೆದಿದ್ದೆವು. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನೂತನ ಶಾಲಾ ಕಟ್ಟಡ ನಿರ್ಮಾಣ ಅವಶ್ಯಕ.

-ಸವಿತಾ ಎಸ್‌ಡಿಎಂಸಿ ಅಧ್ಯಕ್ಷೆ ಬಾಣಗಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT